ನದಿ ತಿರುವು ಯೋಜನೆಗಳಿಗೆ ವಿರೋಧ: ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶ

ಉತ್ತರ ಕನ್ನಡದ ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಗಳನ್ನು ವಿರೋಧಿಸಿ ಜ. 11ರಂದು ಶಿರಸಿಯಲ್ಲಿ ಬೃಹತ್ ಜನ ಸಮಾವೇಶ ಆಯೋಜಿಸಲಾಗಿದೆ. ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಭಾಗವಹಿಸಲಿದ್ದಾರೆ. ಹಲವಾರು ಸಂತರು ಈ ವೇಳೆ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನದಿ ತಿರುವು ಯೋಜನೆಗಳಿಗೆ ವಿರೋಧ: ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶ
ಜ. 11ರಂದು ಬೃಹತ್​​ ಪ್ರತಿಭಟನೆ

Updated on: Jan 05, 2026 | 6:31 PM

ಕಾರವಾರ, ಜನವರಿ 05: ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಹಾಗೂ ಅಘನಾಶಿನಿ ನದಿತಿರುವು ಯೋಜನೆಗಳನ್ನು ಕೈಬಿಟ್ಟು ಪಶ್ಚಿಮಘಟ್ಟ ಸಂರಕ್ಷಿಸಲು ಆಗ್ರಹಿಸಿ ಜ. 11ರಂದು ಬೃಹತ್​​ ಜನ ಸಮಾವೇಶವನ್ನು ಶಿರಸಿಯಲ್ಲಿ ಆಯೋಜಿಸಲಾಗಿದೆ. ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್​​ ಹೆಗ್ಡೆ ಭಾಗಿಯಾಗಲಿದ್ದಾರೆ. ಪರಿಸರ ಅರ್ಥಶಾಸ್ತ್ರಜ್ಞ ಪ್ರೋ. ಬಿ.ಎಂ. ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಸಂತರ ಸಾನ್ನಿಧ್ಯ

ಶಿರಸಿಯ ಎಂಇಎಸ್​​ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 2ರಿಂದ ಸಮಾವೇಶ ಆರಂಭವಾಗಲಿದ್ದು, ಹಲವಾರು ಸಂತರ ದಿವ್ಯ ಉಪಸ್ಥಿತಿ ಈ ವೇಳೆ ಇರಲಿದೆ. ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಶ್ರೀಗಳು, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸ್ವಾದೀ ದಿಗಂಬರ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಶ್ರೀಗಳು, ಸೊರಬದ ಜಡೆಯ ಡಾ. ಮಹಾಂತ ಮಹಾಸ್ವಾಮಿಗಳು ಮತ್ತು ಸಿದ್ದಾಪುರದ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಅಶ್ರಮದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದ ನದಿ ತಿರುವು ಯೋಜನೆಗಳಿಗೆ ವಿರೋಧ ಯಾಕೆ?

ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಳಿಯಾಳ ಶಾಸಕ ಆರ್​​.ವಿ. ದೇಶಪಾಂಡೆ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್​, ಅಂಕೋಲಾ-ಕಾರವಾರ ಶಾಸಕ ಸತೀಶ್​​ ಸೈಲ್​, ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ, ವಿಧಾನ ಪರಿಷತ್​ ಸದಸ್ಯರಾದ ಗಣಪತಿ ಉಳ್ವೇಕರ್​​ ಮತ್ತು ಶಾಂತಾರಾಮ ಸಿದ್ಧಿ ಭಾಗವಹಿಸಿಲಿದ್ದಾರೆ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪ್ರಕಟಣೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:21 pm, Mon, 5 January 26