ರಾಯಚೂರು: ಸಿಎಂ ಚಾಲನೆ ನೀಡಿದ್ದ ಅಂಬಾದೇವಿ ಜಾತ್ರೆಯಲ್ಲಿ ಗಾಂಜಾ ಘಾಟು; ಇಬ್ಬರು ಅರೆಸ್ಟ್
ರಾಯಚೂರು ಅಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ವರದಿ ಬೆನ್ನಲ್ಲೇ ಇಬ್ಬರು ಗಾಂಜಾ ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ 1 ಲಕ್ಷ 10 ಸಾವಿರ ರೂ ಮೌಲ್ಯದ 1.1 ಕೆಜಿ ಗಾಂಜಾವನ್ನ ಜಪ್ತಿ ಮಾಡಲಾಗಿದೆ.

ರಾಯಚೂರು, ಜನವರಿ 05: ಗಡಿ ಜಿಲ್ಲೆ ರಾಯಚೂರಿನ (Raichur) ಅಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಸಾಧುಗಳ ಗಾಂಜಾ ಘಾಟಿನ ಬಗ್ಗೆ ಟಿವಿ9 ವರದಿ ಮಾಡಿತ್ತು. ಈ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಇಬ್ಬರು ಗಾಂಜಾ ಮಾರಾಟಗಾರರನ್ನು ಅರೆಸ್ಟ್ (Arrest) ಮಾಡಿದ್ದಾರೆ. ಅಜಂ ಸೊಯೆಲ್ ಮತ್ತು ಮಹ್ಮದ್ ಶಾಬಾಜ್ ಬಂಧಿತ ಆರೋಪಿಗಳು. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
400 ವರ್ಷಗಳ ಇತಿಹಾಸವಿರುವ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿರುವ ಅಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಗಾಂಜಾ ಘಾಟಿನ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈ ಒಂದು ಜಾತ್ರಾ ಮಹೋತ್ಸವಕ್ಕೆ ದೇಶದ ಮೂಲೆಮೂಲೆಗಳಿಂದ ಸಾಧು-ಸಂತರು ಆಗಮಿಸುತ್ತಾರೆ.
ಇದನ್ನೂ ಓದಿ: ನಶೆರಾಣಿ ಆಗಲು ಹೋಗಿ ಖಾಕಿ ಕೈಲಿ ತಗಲಾಕಿಕೊಂಡ ಮಹಿಳೆ: ಗ್ಯಾಂಗ್ ಅಂದರ್
ದೇಶದಲ್ಲಿರುವ 18 ಶಕ್ತಿ ಪೀಠಗಳಲ್ಲಿ ಈ ದೇವಾಲಯ ಕೂಡ ಒಂದು. ಹೀಗಾಗಿ ಅಂಬಾದೇವಿ ದರ್ಶನ ಪಡೆಯುತ್ತಾರೆ. ಆದರೆ ಇಲ್ಲಿ ಸಾಧುಗಳಿಗೆ ಕೆಲ ಭಕ್ತರು ನೈವೇದ್ಯ ನೀಡುವ ಪದ್ದತಿ ಇದೆಯಂತೆ. ಹೀಗಾಗಿ ಭಕ್ತರು ಕೊಡುವ ಗಾಂಜಾದಿಂದ ಸಾಧುಗಳು ಕಿಕ್ಕೇರಿಸಿಕೊಳ್ಳುತ್ತಾರೆ. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಬೆನ್ನಲ್ಲೇ ಅಂಬಾದೇವಿ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಂಧನೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಓರ್ವ ವೆಲ್ಡಿಂಗ್ ಕೆಲಸಗಾರ, ಮತ್ತೊಬ್ಬ ಮೆಕ್ಯಾನಿಕ್
ಬಂಧಿತ ಇಬ್ಬರು ಆರೋಪಿಗಳು ವಿಯಜನಗರ ಜಿಲ್ಲೆಯ ಹೊಸಪೇಟೆದವರು. ಆರೋಪಿಗಳ ಪೈಕಿ ಅಜಂ ಸೊಯೆಲ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ, ಆರೋಪಿ ಮಹ್ಮದ್ ಶಾಬಾಜ್ ಲಾರಿ ಮೆಕ್ಯಾನಿಕ್. ಆರೋಪಿಗಳಿಬ್ಬರು ಅಂಬಾದೇವಿ ದೇವಸ್ಥಾನದ ಹಳೆ ಯಾತ್ರಾ ನಿವಾಸದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು.
ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 1 ಲಕ್ಷ 10 ಸಾವಿರ ರೂ ಮೌಲ್ಯದ 1.1 ಕೆಜಿ ಗಾಂಜಾವನ್ನ ಜಪ್ತಿ ಮಾಡಲಾಗಿದೆ. ಅಲ್ಲದೇ ಗಾಂಜಾವನ್ನ ಕಟ್ಟಿದ್ದ ಕಾಗದದ ಪೊಟ್ಟಣಗಳನ್ನು ಸೀಜ್ ಮಾಡಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿಗೆ ಅವ್ಯಾಹತವಾಗಿ ಬರುತ್ತಿದೆ ಗಾಂಜಾ: ಡ್ರಗ್ ಪೆಡ್ಲರ್ಗಳಿಗೆ ವರವಾಗಿ ಪರಿಣಮಿಸಿದ ತಪಾಸಣೆರಹಿತ ರೈಲು ಪ್ರಯಾಣ!
ಸಾಧುಗಳು ಗಾಂಜಾ ಸೇದುವ ಪದ್ದತಿ ಈಗಾಗಲೇ ಕಾಲಕ್ರಮೇಣ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ. ಅಲ್ಲದೇ ಕಾನೂನಿನ ಬಿಗಿ ಹಿಡಿತ ಹಿನ್ನೆಲೆ ಬಾರಿ ಪ್ರಮಾಣದಲ್ಲಿ ಈ ಪದ್ದತಿ ನಿಯಂತ್ರಣಕ್ಕೆ ಬಂದಿದೆ. ಆದರೆ ಜಾತ್ರೆಗೆ ಪಕ್ಕದ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದಲೂ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಹೀಗಾಗಿ ಅಲ್ಲಲ್ಲಿ ಗಾಂಜಾ ಘಾಟು ಸದ್ದಿಲ್ಲದೇ ಹೊಗೆಯಾಡುತ್ತಲೇ ಇದ್ದು, ಈ ಬಗ್ಗೆ ಪೊಲೀಸರು ಹದ್ದಿಣ ಕಣ್ಣಿಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:06 pm, Mon, 5 January 26