ಹುಬ್ಬಳ್ಳಿಗೆ ಅವ್ಯಾಹತವಾಗಿ ಬರುತ್ತಿದೆ ಗಾಂಜಾ: ಡ್ರಗ್ ಪೆಡ್ಲರ್ಗಳಿಗೆ ವರವಾಗಿ ಪರಿಣಮಿಸಿದ ತಪಾಸಣೆರಹಿತ ರೈಲು ಪ್ರಯಾಣ!
ಹುಬ್ಬಳ್ಳಿ ರೈಲು ನಿಲ್ದಾಣವು ನೆರೆಯ ರಾಜ್ಯಗಳಿಂದ ಗಾಂಜಾ ಸಾಗಾಣಿಕೆಗೆ ಕೇಂದ್ರಬಿಂದುವಾಗಿರುವುದು ಬೆಳಕಿಗೆ ಬಂದಿದೆ. ರೈಲುಗಳ ಮೂಲಕ ಗಾಂಜಾವನ್ನು ಸುಲಭವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ ಒಟ್ಟಾರೆ 40 ಕೆಜಿ ಗಾಂಜಾ ಜಪ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ಗಾಂಜಾ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿಯೇ ಪತ್ತೆಯಾಗಿದೆ. ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ, ಡ್ರಗ್ಸ್ ದಂಧೆ ನಿಂತಿಲ್ಲ.

ಹುಬ್ಬಳ್ಳಿ, ಸೆಪ್ಟೆಂಬರ್ 10: ರಾಜ್ಯದ ಛೋಟಾ ಮುಂಬೈ ಎಂದೇ ಕರೆಸಿಕೊಳ್ಳುತ್ತಿರುವ ಹುಬ್ಬಳ್ಳಿಗೆ (Hubli) ನೆರೆಯ ರಾಜ್ಯಗಳಿಂದ ಅವ್ಯಾಹತವಾಗಿ ಗಾಂಜಾ ಪೂರೈಕೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ ಮಾರಾಟ ಮಾಡುವುದರ ಜೊತೆಗೆ ಇಲ್ಲಿಂದ ಅದನ್ನು ಗೋವಾಕ್ಕೆ ಕಳುಹಿಸುವ ತಂಡ ಸಕ್ರಿಯವಾಗಿದೆ. ದುರುಳರು ಗಾಂಜಾ ಸಾಗಾಟ ಮಾಡಲು ರೈಲುಗಳನ್ನೇ (Train) ಹೆಚ್ಚು ಬಳಸುತ್ತಿದ್ದಾರೆ. ನೆರೆಯ ರಾಜ್ಯಗಳಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಗಾಂಜಾ ತರಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 40 ಕೆಜಿ ಗಾಂಜಾ ಜಪ್ತಿಯಾಗಿದ್ದು, ಬಹುತೇಕ ಜಪ್ತಿಯಾದ ಗಾಂಜಾ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿಯೇ (Raliway Station) ಎಂಬುದು ವಿಶೇಷ.
ಛೋಟಾ ಮುಂಬೈ, ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯನ್ನು ರಾಜ್ಯದ ಎರಡನೇ ರಾಜಧಾನಿ ಎಂದೇ ಕರೆಯುತ್ತಾರೆ. ವ್ಯಾಪಾರ ವಹಿವಾಟು ಎಂದು ಪ್ರತಿನಿತ್ಯ ಸಾವಿರಾರು ಜನರು ರಾಜ್ಯ, ಮತ್ತು ನೆರೆಯ ರಾಜ್ಯಗಳಿಂದ ನಗರಕ್ಕೆ ಜನ ಬರುತ್ತಾರೆ. ಇಂತಹ ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುವವರು ಮತ್ತು ಅದನ್ನು ಬಳಕೆ ಮಾಡುವವರ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಚಿಕ್ಕ ವಯಸ್ಸಿನ ಹುಡುಗರು ಕೂಡಾ ನಶೆಯಲ್ಲಿ ತೇಲಾಡುವುದು, ಅಪರಾಧ ಕೃತ್ಯಗಳನ್ನು ಮಾಡುವ ಅನೇಕ ಘಟನೆಗಳು ಹುಬ್ಬಳ್ಳಿಯಲ್ಲಿ ನಡೆದಿವೆ.
ಡ್ರಗ್ಸ್ ಸಾಗಾಟಕ್ಕೆ ರೈಲನ್ನೇ ಬಳಸುವ ಪೆಡ್ಲರ್ಗಳು
ಡ್ರಗ್ಸ್ ಜಾಲವನ್ನು ಬೇಧಿಸಲು ಹುಬ್ಬಳ್ಳಿ ಪೊಲೀಸರು ಅನೇಕ ಕ್ರಮಗಳನ್ನು ಕೈಗೊಂಡರು ಕೂಡಾ ಸಂಪೂರ್ಣವಾಗಿ ದಂಧೆಗೆ ಬ್ರೇಕ್ ಹಾಕಲು ಆಗಿಲ್ಲ. ದಂಧೆಕೋರರು ಇದೀಗ ಡ್ರಗ್ಸ್ ಸಾಗಾಟ ಮಾಡಲು ಬಳಸುತ್ತಿರುವುದು ರೈಲುಗಳನ್ನು. ಹೆಚ್ಚು ಜನದಟ್ಟಣೆ ಇರುವುದು ಮತ್ತು ಎಲ್ಲಾ ಕಡೆ ತಪಾಸಣೆ ಇಲ್ಲದೇ ಇರುವುದೇ ಡ್ರಗ್ಸ್ ಪೆಡ್ಲರ್ಗಳು ರೈಲನ್ನೇ ಬಳಲು ಇರುವ ಮುಖ್ಯ ಕಾರಣ. ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಮಂಗಳವಾರ ಬರೋಬ್ಬರಿ 11 ಲಕ್ಷ ರೂ. ಮೌಲ್ಯದ ಹನ್ನೊಂದು ಕಿಲೋ ಗಾಂಜಾ ಪತ್ತೆಯಾಗಿದೆ. ರೈಲ್ವೆ ಪ್ಲಾಟ್ಪಾರ್ಮ್ನಲ್ಲಿ ಬ್ಯಾಗ್ನಲ್ಲಿ ಸಾಗಾಟ ಮಾಡುತ್ತಿದ್ದ ದುರುಳರು, ರೈಲ್ವೆ ಪೊಲೀಸರು ಬರುತ್ತಿದ್ದಂತೆಯೇ ಬ್ಯಾಗನ್ನು ಪ್ಲಾಟ್ಫಾರ್ಮ್ನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಬ್ಯಾಗ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಗಾಂಜಾ ಇದ್ದಿದ್ದು ಗೊತ್ತಾಗಿದೆ. ಸ್ಥಳಕ್ಕೆ ಆಗಮಿಸಿದ ಅಬಕಾರಿ ಪೊಲೀಸರು ಗಾಂಜಾ ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿಗೆ ಗಾಂಜಾ ಬಂದಿದ್ದು ಓರಿಸ್ಸಾದಿಂದ ಎಂಬುದು ಗೊತ್ತಾಗಿದೆ.
ಕಳೆದ ಒಂದು ವರ್ಷದಲ್ಲಿ ಧಾರವಾಡ ಅಬಕಾರಿ ಸಿಬ್ಬಂದಿ ನಲವತ್ತು ಕಿಲೋ ಗಾಂಜಾ ಜಪ್ತಿ ಮಾಡಿದ್ದಾರೆ. ಈ ಪೈಕಿ ಬಹುತೇಕ ಗಾಂಜಾ ಸಿಕ್ಕಿರುವುದುದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿಯೇ. ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಪ್ರತಿನಿತ್ಯ ನೂರಾರು ರೈಲುಗಳು ಬರುತ್ತವೆ. ಸಾವಿರಾರು ಜನರು ಬರುತ್ತಾರೆ. ಮೈನ್ ಗೇಟ್ ಬಿಟ್ಟು ಬೇರಡೆ ಹೋಗಲು ಕೂಡಾ ಅವಕಾಶವಿದ್ದು, ದಂಧೆಕೋರರು ಸುಲಭವಾಗಿ ಗಾಂಜಾ ತರುತ್ತಿದ್ದಾರೆ. ಸಾಮಾನ್ಯ ಜನರಂತೆ ಬ್ಯಾಗ್ಗಳಲ್ಲಿ ಗಾಂಜಾವನ್ನು ಕದ್ದು ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಓರಿಸ್ಸಾ, ಆಂಧ್ರದಿಂದ ಬರುತ್ತಿರುವ ಗಾಂಜಾವನ್ನು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುವುದರ ಜೊತೆಗೆ ನೆರೆಯ ಗೋವಾಕ್ಕೆ ಇಲ್ಲಿಂದ ಸಾಗಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ದಸರಾ ಪ್ರಯುಕ್ತ ಕರ್ನಾಟಕದ ವಿವಿಧೆಡೆಗೆ ವಿಶೇಷ ರೈಲುಗಳು: ಟ್ರಿಪ್ ವಿವರ, ವೇಳಾಪಟ್ಟಿ ಇಲ್ಲಿದೆ
ಸದ್ಯ ಹುಬ್ಬಳ್ಳಿಗೆ ರೈಲುಗಳಲ್ಲಿ ಬರುತ್ತಿರುವ ಗಾಂಜಾ ಮೇಲೆ ಅಬಕಾರಿ ಮತ್ತು ಆರ್ಪಿಎಫ್ ಠಾಣೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಆದರೈ ಪೆಡ್ಲರ್ಗಳು ಸಾಮಾನ್ಯ ಜನರಂತೆ ಚೀಲಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದು, ಇನ್ನೂ ಕೆಲ ಕಠಿಣ ಕ್ರಮಗಳನ್ನು ಕೈಗೊಂಡು, ಡ್ರಗ್ಸ್ ದಂಧೆಕೋರರ ಹೆಡೆಮುರಿ ಕಟ್ಟುವ ಕೆಲಸವನ್ನು ಮಾಡಬೇಕಿದೆ.



