AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನೇರುಘಟ್ಟ ಸಫಾರಿ ಪ್ರಿಯರಿಗೆ ಗುಡ್​ ನ್ಯೂಸ್: ದೇಶದಲ್ಲಿ ಪ್ರಥಮ ಬಾರಿಗೆ ಇವಿ ಸಫಾರಿ ಬಸ್

ಬನ್ನೇರುಘಟ್ಟ ಜೈವಿಕ ಉದ್ಯಾನವನವು ಭಾರತದ ಮೊದಲ ಜೈವಿಕ ಉದ್ಯಾನವನವಾಗಿದ್ದು, ಸುಮಾರು 122 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇದು ಕೇವಲ ವನ್ಯಜೀವಿಗಳಿಗೆ ಮಾತ್ರ ವಾಸಸ್ಥಾನವಾಗಿಲ್ಲ ಬದಲಾಗಿ, ವಿವಿಧ ರೀತಿಯ ಚಿಟ್ಟೆ ಪ್ರಭೇದಗಳಿಗೂ ನೆಲೆಯಾಗಿದೆ. ಇದೀಗ ಈ ಬನ್ನೇರುಘಟ್ಟದಲ್ಲಿ ಇವಿ ಸಫಾರಿ ಬಸ್​ ಗೆ ಚಾಲನೆ ನೀಡಲಾಗಿದೆ.

ಬನ್ನೇರುಘಟ್ಟ ಸಫಾರಿ ಪ್ರಿಯರಿಗೆ ಗುಡ್​ ನ್ಯೂಸ್: ದೇಶದಲ್ಲಿ ಪ್ರಥಮ ಬಾರಿಗೆ ಇವಿ ಸಫಾರಿ ಬಸ್
Bannerghatta Biological Park
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Jun 18, 2025 | 4:59 PM

Share

ಬೆಂಗಳೂರು, (ಜೂನ್ 18):ದೇಶದಲ್ಲೇ ಮೊದಲ ಬಾರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta biological park) ಇವಿ ಸಫಾರಿ ಬಸ್​ ಗೆ  (electric safari bus) ಚಾಲನೆ ನೀಡಲಾಗಿದೆ. ಹೌದು.. ವಿದ್ಯುತ್‌ಚಾಲಿತ ಸಫಾರಿ ಪ್ರಾಯೋಗಿಕ ಸಂಚಾರಕ್ಕೆ ಇಂದು (ಜೂನ್ 18) ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ  ಖಂಡ್ರೆ (Eshwar Khandre) ಚಾಲನೆ ನೀಡಿದರು. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿಗೆ ಪ್ರಸ್ತುತ ಡೀಸೆಲ್ ವಾಹನಗಳನ್ನು ಬಳಸಲಾಗುತ್ತಿದೆ. ಇದೀಗ ವಿದ್ಯುತ್ ಚಾಲಿತ ಬಸ್ ಗಳನ್ನು ಸಹ ಪರಿಚಯಿಸಲಾಗಿದ್ದು, ಇದು ದೇಶದಲ್ಲೇ ಪ್ರಥಮ.

ಬನ್ನೇರು ಘಟ್ಟ ಜೈವಿಕ ಉದ್ಯಾನದಲ್ಲಿ ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್ ನ ಪ್ರಾಯೋಗಿಕ ಸಂಚಾರಕ್ಕೆ ವಿಕಾಸಸೌಧದಿಂದ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ 4-5 ತಿಂಗಳಲ್ಲಿ ಹಂಟಿಂಗ್ ಚೀತಾ, ಕ್ಯಾಪಚಿನ್ ಕೋತಿಯನ್ನು ದಕ್ಷಿಣ ಅಮೇರಿಕಾದಿಂದ ವಿನಿಮಯ ಮಾಡಿಕೊಳ್ಳಲಾಗುವುದು. ಮುಂದಿನ ವರ್ಷ ಚಿಂಪಾಂಜಿ, ಜಾಗ್ವಾರ್, ಪೂಮಾ (ಉತ್ತರ ಅಮೇರಿಕಾ ಸಿಂಹ) ಸೇರಿದಂತೆ ಒಟ್ಟು 10 ವಿದೇಶಿ ವನ್ಯಜೀವಿಗಳು ಬನ್ನೇರುಘಟ್ಟಕ್ಕೆ ಆಗಮಿಸಲಿವೆ ಎಂದು ತಿಳಿಸಿದರು.

ಇದನ್ನೂ ಓದಿ: ಬನ್ನೇರುಘಟ್ಟ ಉದ್ಯಾನವನದಲ್ಲಿ 3 ತಿಂಗಳಲ್ಲಿ ಹುಲಿ, ಚಿರತೆ ಸೇರಿ 20ಕ್ಕೂ ಅಧಿಕ ವನ್ಯಜೀವಿಗಳು ಸಾವು

ಬನ್ನೇರುಘಟ್ಟದಲ್ಲಿ ಸೀಮಿತ ಆವರಣ ಪ್ರದೇಶದೊಳಗೆ ರೂಪಿಸಿರುವ ವನ್ಯಜೀವಿ ಸಫಾರಿಯಲ್ಲಿ ಹುಲಿ, ಚಿರತೆ, ಸಿಂಹ, ಕರಡಿಗಳ ದರ್ಶನ ಪ್ರವಾಸಿಗರಿಗೆ ನಿಶ್ಚಿತವಾಗಿ ಆಗುತ್ತದೆ. ಈ ಸಫಾರಿಗಳಿಗೆ ಪ್ರಸ್ತುತ ಡೀಸೆಲ್ ವಾಹನಗಳನ್ನು ಬಳಸಲಾಗುತ್ತಿದ್ದು, ಈ ವಾಹನಗಳಿಂದ ಹೊರಹೊಮ್ಮುವ ಇಂಗಾಲದ ಪ್ರಮಾಣ ತಗ್ಗಿಸುವ ಉದ್ದೇಶದಿಂದ ದೇಶದಲ್ಲೇ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ವಾಹನ ಪರಿಚಯಿಸಲಾಗುತ್ತಿದೆ ಎಂದರು.

ಈ ವಿದ್ಯುತ್ ಚಾಲಿತ ಬಸ್, 22 ಆಸನಗಳನ್ನು ಹೊಂದಿದ್ದು, 100 ಕೆ.ವಿ. ಬ್ಯಾಟರಿ ಸಾಮರ್ಥ್ಯದ್ದಾಗಿದೆ. ಹಾಲಿ ಒಂದು ಬಸ್ ಮಾತ್ರವೇ ಕಾರ್ಯಾರಂಭ ಮಾಡಲಿದ್ದು, 2027ರೊಳಗೆ ಬನ್ನೇರುಘಟ್ಟ ಉದ್ಯಾನವನ್ನು (ಟ್ಯ್ರಾಕ್ಟರ್ ಇತ್ಯಾದಿ ಉಪಯೋಗಿ ವಾಹನ ಹೊರತು ಪಡಿಸಿ) ಪಳೆಯುಳಿಕೆ ಇಂಧನ ರಹಿತ ವಾಹನ ವಲಯವಾಗಿ ಪರಿವರ್ತಿಸಲಾಗುವುದು ಎಂದು ಮಾಹಿತಿ ನೀಡಿದರು.

ಬನ್ನೇರುಘಟ್ಟ ಮೃಗಾಲಯ ಮತ್ತು ಸಫಾರಿ ವೀಕ್ಷಣೆಗೆ ವಾರಾಂತ್ಯದಲ್ಲಿ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿ ಪ್ರಿಯರು ಮತ್ತು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಕಾರಣಕ್ಕೆ ಇಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರ ಭೇಟಿ

ಕಳೆದ ತಿಂಗಳು ಅಂದರೆ ಮೇ 2025 ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸುಮಾರು 2 ಲಕ್ಷ 85 ಸಾವಿರ ಪ್ರವಾಸಿಗರು ಆಗಮಿಸಿದ್ದು, ಇದು ದಾಖಲೆಯಾಗಿದೆ. ಚಿರತೆ ಸಫಾರಿ ಈಗ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ ಎಂದರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೊಂದು ಆಕರ್ಷಣೆಯಾಗಿ ಬೃಹತ್ ಮತ್ಸ್ಯಾಗಾರ ನಿರ್ಮಿಸಲುದ್ದೇಶಿಸಲಾಗಿದೆ. ಇದಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಟೆಂಡರ್ ಕರೆಯಲಾಗುವುದು. ಬನ್ನೇರುಘಟ್ಟ ಉದ್ಯಾನದ ವ್ಯಾಪ್ತಿಯಲ್ಲಿ 7 ಕೆರೆಗಳಿವೆ. ಜೊತೆಗೆ ಈಗ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಪ್ರಾಣಿಗಳಿಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದಲೂ ನೀರು ಪಡೆಯಲಾಗುತ್ತಿದ್ದು, ಮತ್ಯಾಗಾರಕ್ಕೆ ನೀರಿನ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.