ಕೆಐಎಡಿಬಿ ನಿವೇಶನ ಅಕ್ರಮ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಚಿವ ಎಂಬಿ ಪಾಟೀಲ್

|

Updated on: Aug 23, 2024 | 7:12 PM

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ ಕೆಐಎಡಿಬಿ ಸೇವೆ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂದು ರಾಜ್ಯಪಾಲರಿಗೆ ಸಚಿವ ಎಂಬಿ ಪಾಟೀಲ್​ ವಿರುದ್ಧ ಆರ್​ಟಿಎ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದಾರೆ. ಇದೀಗ ಕೆಐಎಡಿಬಿ ನಿವೇಶನ ಅಕ್ರಮ ಆರೋಪಕ್ಕೆ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಕೆಐಎಡಿಬಿ ನಿವೇಶನ ಅಕ್ರಮ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಚಿವ ಎಂಬಿ ಪಾಟೀಲ್
ಬಿಜೆಪಿ ಅವಧಿಯಲ್ಲಿ ಭೂಮಿ ಹಂಚಿದ್ದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಎಂಬಿ ಪಾಟೀಲ್
Follow us on

ಬೆಂಗಳೂರು, ಆಗಸ್ಟ್​ 23: ನನ್ನ ವಿರುದ್ಧ ಈಗ ನೀಡಿರುವ ದೂರು ತುಂಬಾ ಹಳೆಯದು. ದಿನಾಂಕ ಬದಲಿಸಿ ನನ್ನ ವಿರುದ್ಧ ಈಗ ಮತ್ತೊಂದು ದೂರು ನೀಡಿದ್ದಾರೆ. ಈ ಸಂಬಂಧ ಈ ಹಿಂದೆಯೇ ರಾಜ್ಯಪಾಲರಿಗೆ ಉತ್ತರ ನೀಡಿದ್ದೇನೆ ಎಂದು ಕೈಗಾರಿಕಾ ಇಲಾಖೆ ಸಚಿವ ಎಂ.ಬಿ.ಪಾಟೀಲ್ (MB Patil) ಹೇಳಿದ್ದಾರೆ. ಕೆಐಎಡಿಬಿ ಮೂಲೆ ನಿವೇಶನ ಹಂಚಿಕೆಯಲ್ಲಿ ಅಕ್ರಮವೆಸಗಿದ ಆರೋಪ ಹಿನ್ನೆಲೆ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲೆ ನಿವೇಶನ ಹಂಚಿಕೆಯಲ್ಲಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.

ನಾನು ಕೈಗಾರಿಕೆ ಸಚಿವರಾದ ಮೇಲೆ ಯಾವುದೇ ಬದಲಾವಣೆ ಮಾಡಿಲ್ಲ. ಎಲ್ಲಾ ನಿಯಮಗಳನ್ನು ಈ ಹಿಂದಿನ ಸರ್ಕಾರವೇ ರೂಪಿಸಿತ್ತು. ನಿಯಮದಂತೆ ಕೆಐಎಡಿಬಿ ಮೂಲೆ ನಿವೇಶನ ಹಂಚಿಕೆ ಮಾಡಲಾಗಿದೆ. ರಾಜ್ಯಪಾಲರು ನೋಟಿಸ್ ನೀಡಿದರೆ ನಾನು ಉತ್ತರ ಕೊಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಬೆನ್ನಲ್ಲೇ ಸಚಿವ ಎಂಬಿ ಪಾಟೀಲ್‌ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ಪ್ರಕರಣ?

ವಾಣಿಜ್ಯ ಇಲಾಖೆಯಲ್ಲಿ ಹರಾಜು ಹಾಕುವ ಪದ್ಧತಿ ಇಲ್ಲ. ವಾಣಿಜ್ಯ ನಿವೇಶನಗಳನ್ನು ಮಾತ್ರ ಹರಾಜು ಹಾಕಲಾಗುತ್ತೆ. ಈ ಬಗ್ಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದೇವೆ. ಪಾರದರ್ಶಕವಾಗಿ ಕೆಐಎಡಿಬಿ ಮೂಲೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

377 ಎಕರೆ ಪ್ರದೇಶದ 193 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ 43 ನಿವೇಶನಗಳಿಗೆ 96 ಎಕರೆ ಪ್ರದೇಶ ಅಷ್ಟೇ ಹಂಚಲಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿ ರಾಜ್ಯದ ಹಲವೆಡೆ ಶೇ.25ರಷ್ಟು ಎಕರೆ ಪ್ರದೇಶದ ನಿವೇಶನ ಮಾತ್ರ ಹಂಚಿಕೆ ಮಾಡಲಾಗಿದೆ. 41 ಸಿಂಗಲ್ ಸೈಟ್‌ ಅರ್ಜಿ ಪರಿಗಣಿಸಿಲ್ಲ, ಹೀಗಾಗಿ ಇದು ಟೆಂಡರ್ ಪ್ರಕ್ರಿಯೆಯಲ್ಲ. 2019ರಲ್ಲಿ ಹಂಚಿಕೆಗೆ ಒಂದೂವರೆ ಪಟ್ಟು ಹೆಚ್ಚಿಗೆ ದರ ಇರಬೇಕು ಅಂತಾ ಇತ್ತು. ಆದರೆ ಕೇವಲ ಒಂದು ಪಟ್ಟು ಹಂಚಿಕೆಯಾಗಬೇಕೆಂಬ ನಿರ್ಧಾರ ಮಾಡಲಾಗಿತ್ತು ಎಂದಿದ್ದಾರೆ.

ಖಾಸುಮ್ಮನೆ ಆರೋಪ ಮಾಡೋದು ಸರಿಯಲ್ಲ

2021ರ ಜೂನ್‌ 7ರ ಹೊಸ ನಿಯಮದಂತೆ ಒಂದು ಪಟ್ಟು ಹಂಚಿಕೆಯಾಗಿದೆ. ಈ ಬಗ್ಗೆ ಏನೂ ತಿಳಿದುಕೊಳ್ಳದೆ ಆರೋಪ ಮಾಡಿದರೆ ಹೇಗೆ? ದೂರುದಾರರಿಗೆ ಯಾವುದೇ ಮಾಹಿತಿ ಇಲ್ಲ, ನಿಯಮದಂತೆ ಹಂಚಿಕೆ ಮಾಡಿದ್ದೇವೆ. ನಾನು ಸಚಿವರಾದ ಮೇಲೆ ಎಸ್​​ಎಸಿ-ಎಸ್​​ಟಿಗೆ ಕೊಟ್ಟಿದ್ದೇವೆ, ಆನ್‌ಲೈನ್‌ ಮಾಡಿದ್ದೇನೆ. 2-3 ಜಿಲ್ಲೆಗಳಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. 21 ಜಿಲ್ಲೆಯಲ್ಲಿ ನಿವೇಶನ ಹಂಚಿದ್ದೇವೆ, ನನ್ನ ಅವಧಿಯಲ್ಲಿ ನಿಯಮ ಉಲ್ಲಂಘಿಸಿಲ್ಲ. ಸುಖಾಸುಮ್ಮನೆ ಆರೋಪ ಮಾಡೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿರೋಧಿಗಳನ್ನು ರಾಜಕೀಯವಾಗಿ ಮುಗಿಸುವ ಕಲೆ ಸಿದ್ದರಾಮಯ್ಯ ಮತ್ತು ಶಿವಕುಮಾರ್​ಗೆ ಕರಗತವಾಗಿದೆ: ಪ್ರಲ್ಹಾದ್ ಜೋಶಿ

‘ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಇದೆ, ಹೈಕಮಾಂಡೇ ಸುಪ್ರೀಂ’. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಡಿಸಿಎಂ ಆಗುವುದು ಎಲ್ಲರ ಆಕಾಂಕ್ಷೆ ಇದೆ, ನನಗೂ ದುರಾಸೆ ಇದೆ. ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಕೇಳಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಜಯ ಸಾಧಿಸುವುದು ನಿಶ್ಚಿತ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ಕರೆದಿದ್ದರಿಂದ ಸಿಎಂ, ಡಿಸಿಎಂ ದೆಹಲಿಗೆ ಹೋಗಿದ್ದಾರೆ. ಹೈಕಮಾಂಡ್ ನನ್ನನ್ನು ಕರೆದಿಲ್ಲ, ಹಾಗಾಗಿ ನಾನು ಹೋಗಿಲ್ಲ. ಬೇರೆ ಸಚಿವರು ದೆಹಲಿಗೆ ಹೋಗಿದ್ದಾರೆ, ಅದರಲ್ಲಿ ತಪ್ಪೇನಿದೆ? ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನೆ ಇಲ್ಲ. ಮುಡಾದಲ್ಲಿ ಯಾವುದೇ ತಪ್ಪಾಗಿಲ್ಲ. ಸಿದ್ದರಾಮಯ್ಯ ವಿರುದ್ಧ ತೀರ್ಪು ಬರೋಕೆ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಯ ಸಾಧಿಸುವುದು ನಿಶ್ಚಿತ. ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಅಷ್ಟೇ. ಸಿದ್ದರಾಮಯ್ಯ ಇನ್ನಷ್ಟು ಸ್ಟ್ರಾಂಗ್ ಆಗುತ್ತಾರೆ ಎಂದು ಹೇಳಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.