ಬೆಂಗಳೂರು: ಮೂರು ತಿಂಗಳ ಹಿಂದೆ ಸಾರಿಗೆ ನೌಕರರು ಪ್ರತಿಭಟನೆ ಮಾಡಿ 10 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದರು. ಅದರಲ್ಲಿ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಆಗುವುದಿಲ್ಲ, ಉಳಿದ 9 ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದೆವು. ಅದೇ ರೀತಿ ಈಗಾಗಲೇ 9 ಬೇಡಿಕೆಗಳ ಈಡೇರಿಕೆ ಆಗಿವೆ. 9ನೇ ಬೇಡಿಕೆಯಲ್ಲಿ 6 ನೇ ವೇತನ ಆಯೋಗದಂತೆ, ಸಮಾನಾಂತರವಾಗಿ ವೇತನ ನೀಡಬೇಕು ಅಂತ ಹೇಳಿದ್ದಾರೆ. ಈ ಬಗ್ಗೆ ಇವತ್ತು ಆರ್ಥಿಕ ಇಲಾಖೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಇದರ ಸಾಧಕ ಬಾಧಕಗಳ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಸಾರಿಗೆ ಇಲಾಖೆಗೆ ಸಾಕಷ್ಟು ನಷ್ಟ ಆಗಿದೆ. ಮತ್ತೆ ಮುಷ್ಕರ ಮಾಡಿದ್ರೆ ಸಮಸ್ಯೆ ಆಗಲಿದೆ. ನಾವು ನೀಡಿರುವ ಭರವಸೆಯನ್ನು ನಿರಾಸೆಯಾಗದಂತೆ ಈಡೇರಿಸ್ತೇವೆ. ಈಗ ಬರುತ್ತಿರುವ ಆದಾಯ, ಇಂಧನ ಮತ್ತು ವೇತನಕ್ಕೆ ಸಾಕಾಗುತ್ತಿಲ್ಲ. ಆದರೂ ಕೊಟ್ಟಿರುವ ಮಾತಿನಿಂದ ಹಿಂದೆ ಸರಿಯೋದಿಲ್ಲ ಎಂದು ಮಾತನಾಡಿದ್ದಾರೆ.
ಮುಷ್ಕರ ಮಾಡಿದ್ರೆ ಜನ ಸಾಮಾನ್ಯರು, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಯಾವುದೇ ಆತುರದ ನಿರ್ಣಯ ತೆಗೆದುಕೊಂಡು, ಮುಷ್ಕರ ಮಾಡಬೇಡಿ. ಒಂದು ವೇಳೆ ಪ್ರತಿಭಟನೆ ಮಾಡುವುದಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸಿದ್ದರಿದ್ದೇವೆ. ಸಾರಿಗೆ ನೌಕರರು ಮುಷ್ಕರ ಮಾಡಿದ್ರೆ ಖಾಸಗಿ ವಾಹನಗಳನ್ನ ಸಂಚಾರಕ್ಕೆ ಬಳಸಿಕೊಳ್ಳುತ್ತೇವೆ. ಖಾಸಗಿ ಬಸ್ಗಳಿಗೆ ಪರ್ಮಿಟ್ ಕೊಟ್ಟು, ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ತೆಗೆದುಕೊಳ್ಳುತ್ತೇವೆ ಎಂದು ಮಾತನಾಡಿದ್ದಾರೆ.
ಕೊಟ್ಟಿರೋ ಮಾತಿನಿಂದ ಹಿಂದೆ ಸರಿಯುವುದಿಲ್ಲ. ಬೇಡಿಕೆ ಈಡೇರಿಸಿದಾಗ ನಾವು ಹಿಂಬಾಕಿ ನೀಡುತ್ತೇವೆ. ನೌಕರರಿಗೆ 2020ರಿಂದಲೇ ಹಿಂಬಾಕಿಯನ್ನು ನೀಡುತ್ತೇವೆ. ಯಾವುದೇ ಆತುರದ ನಿರ್ಣಯ ಬೇಡ, ಮುಷ್ಕರ ಬೇಡ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಗಡುವು ನೀಡಿದ ಕೋಡಿಹಳ್ಳಿ ಚಂದ್ರಶೇಖರ್