ಗದಗ: ಪ್ರಾಣಿಗಳಿಗೆ ಗೌರವವನ್ನು ಸಲ್ಲಿಸುವುದು ನಮ್ಮ ಸನಾತನ ಧರ್ಮದ ಆಚರಣೆಗಳಲ್ಲಿ ಒಂದಾಗಿದೆ. ಅದರಲ್ಲೂ ಗೋವಿಗೆ ಪೂಜನೀಯ ಸ್ಥಾನಮಾನ ನೀಡಿ, ಅತ್ಯಂತ ಪವಿತ್ರ ಪ್ರಾಣಿ ಎನ್ನಲಾಗುತ್ತೆ. ಹಿ೦ದೂ ಸಂಪ್ರದಾಯದ ಪ್ರಕಾರ, ಗೋವು 33 ಕೋಟಿ ದೇವತೆಗಳ ಆವಾಸ ಸ್ಥಾನವಾಗಿ, ಆಧ್ಯಾತ್ಮದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಗೋವನ್ನು ಗೋಮಾತೆ ಅಂತಲೂ ಕರೆಯಲಾಗುತ್ತೆ. ಆದ್ರೆ ಅಂತ ಹಸುಗಳ ಜೊತೆಯೇ ಕೆಲ ಕಿಡಿಗೇಡಿಗಳು ಹೀನಾಯವಾಗಿ ವರ್ತಿಸಿದ್ದಾರೆ.
ಗೋವಿನ ಕೆಚ್ಚಲನ್ನೂ ಗಾಯಗೊಳಿಸಿದ್ದಾರೆ; 3 ದಿನದ ಕರು ಹಾಲು ಕುಡಿಯಲಾಗದೆ ಪರದಾಡುತ್ತಿದೆ..
ಗದಗದ ರಾಧಾಕೃಷ್ಣನ್ ನಗರದಲ್ಲಿ ಗೋವುಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಟರಂತೆ ವರ್ತಿಸಿದ್ದಾರೆ. ಗೋಹತ್ಯೆ ನಿಷೇಧದ ಬಳಿಕ ಮೊದಲ ಬಾರಿಗೆ ಗೋವುಗಳ ಮೇಲೆ ಈ ರೀತಿಯ ದೌರ್ಜನ್ಯ ನಡೆದಿರೋದು. ಕಿಡಿಗೇಡಿಗಳು ಒಟ್ಟು ಮೂರು ಹಸುಗಳ ಬಾಲ ತುಂಡರಿಸಿದ್ದಾರೆ. ಗೋವಿನ ಕೆಚ್ಚಲು ಸಹ ಗಾಯ ಮಾಡಿ ಹೀನ ದುಷ್ಕೃತ್ಯ ನಡೆದಿದೆ. ನೋವನ್ನು ತಾಳಲಾರದೆ ಗೋವುಗಳು ಇನ್ನೂ ನರಳಾಡುತ್ತಿವೆ. ಮೂರು ದಿನದ ಕರು ಹಾಲು ಕುಡಿಯಲಾಗದೆ ಪರದಾಡುತ್ತಿದೆ. ಗೋವುಗಳ ಸ್ಥಿತಿ ಕಂಡು ಗೋಪಾಲಕಿ ಕಣ್ಣೀರು ಹಾಕುತ್ತಿದ್ದಾರೆ.
ಗೋವುಗಳ ಸ್ಥಿತಿ ಕಂಡು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವುಗಳ ಮೇಲೆ ಹಲ್ಲೆಗೈದವರನ್ನು ತಕ್ಷಣವೇ ಬಂಧಿಸಲು ಆಗ್ರಹಿಸಿದ್ದಾರೆ. ಗದಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಮಾತೆಯ ಮೇಲೆ ನಡೆದಿರುವ ಈ ದುಷ್ಕೃತ್ಯ ಖಂಡನೀಯವಾಗಿದ್ದು ಆದಷ್ಟು ಬೇಗ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಖದೀಮರನ್ನು ಬಂಧಿಸಬೇಕು ಎಂದು ಇಲ್ಲಿನ ಹಿರಿಯರು ಹೇಳಿದ್ದಾರೆ. ಅಮೃತ ನೀಡುವ ತಾಯಿಯನ್ನು ಈ ರೀತಿಯ ಹಿಂಸಿಸುವುದು ಎಷ್ಟು ಸರಿ?
ಇದನ್ನೂ ಓದಿ: ಬೀದರ್ನಲ್ಲಿ ಹೈಟೆಕ್ ಮಾದರಿಯ ನವಜಾತ ಶಿಶು ಘಟಕ ಆರಂಭ: ಹಸುಗೂಸುಗಳ ಸಾವಿನ ಸಂಖ್ಯೆಯಲ್ಲಿ ಭಾರಿ ಇಳಿಕೆ