ಬಾಗಲಕೋಟೆ, ನವೆಂಬರ್ 30: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal), ಬಸವಣ್ಣನವರ ಬಗ್ಗೆ ಆಡಿರುವ ವಿವಾದಾತ್ಮಕ ಹೇಳಿಕೆ ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಬಸವಾದಿ ಶರಣರು, ಕಾಂಗ್ರೆಸ್ ನಾಯಕರು ಟೀಕಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ವಿವಾದ ಹೆಚ್ಚುತ್ತಿದ್ದಂತೆ ಇತ್ತ ಶಾಸಕ ಯತ್ನಾಳ್, ಸ್ಪಷ್ಟನೆ ನೀಡಿದ್ದಾರೆ. ಬಸವಣ್ಣನವರಿಗೆ ಕೊನೆಗೆ ಏನಾಗಿತ್ತು ಅಂತ ನಮಗೆ ಗೊತ್ತಿದೆ. ಸತ್ಯ ಏನಿದೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಜನರಿಗೆ ಗೊತ್ತಿದೆ. ಏಕೆಂದರೆ ಸಾವಿರಾರು ವರ್ಷದಿಂದ ನಮ್ಮ ಹಿರಿಯರು ಹೇಳುತ್ತಾ ಬಂದಿದಾರೆ ಎಂದು ಹೇಳಿದ್ದಾರೆ.
ಜಿಲ್ಲೆಯ ಬನಹಟ್ಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಬಸವಣ್ಣನವರ ಬಗ್ಗೆ ಇವರಿಗೆ ಏನು ಗೊತ್ತಿದೆ. ವಿಭೂತಿ ಹಚ್ಕೊಂಡು ಓಡಾಡುವವರು ಬಸವಣ್ಣನಿಗೆ ಏನಾದರೂ ಮಾಡಿದಾರಾ? ವೀರಶೈವ ಮಹಾಸಭಾದಾಗ ಏನು ಮಾಡಿದಾರೆ. ಮೊದಲು ಶಿವಾನುಭವ ಮಂಟಪದ ಬಗ್ಗೆ ಹೋರಾಟ ಮಾಡಿ ಅಂತ ಹೇಳಿ. ಒಬ್ಬರು ಬಾಯಿ ತೆಗೆಯುವುದಿಲ್ಲ.
ಇದನ್ನೂ ಓದಿ: ಬಸವಣ್ಣನ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆಂಬ ಯತ್ನಾಳ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ
ಬಸವಣ್ಣನವರ ಶಿವಾನುಭವ ಮಂಟಪದಲ್ಲೇ ದನ ಕಡಿಯುತ್ತಿದ್ದಾರೆ. ಅಖಿಲಭಾರತ ವೀರಶೈವ ಮಹಾ ಸಭಾದಲ್ಲಿ ಈಶ್ವರ ಖಂಡ್ರೆ ಏನು ಮಾಡುತ್ತಿದ್ದಾರೆ. ಎಲ್ಲ ಡೊಂಗಿ ನಾಟಕ ಮಾಡುತ್ತಾ ಬಂದಿದ್ದಾರೆ. ಬಸವಣ್ಣನವರ ಇತಿಹಾಸ ಏನಿದೆ, ಗಾಂಧಿಜೀ ನಾ ಯಾರು ಹೊಡೆದರು. ಬಸವಣ್ಣನವರರನ್ನು ಯಾರು ಹೊಡೆದರು, ಅಂಬೇಡ್ಕರ್ಗೆ ಎಷ್ಟು ಅಪಮಾನ ಮಾಡಿದರು ಎಂಬುವುದು ಚರ್ಚೆ ಇದೆ. ಚರ್ಚೆಗೆ ಬೇಕಾದರೆ ಬಾ ಅಂತ ಹೇಳಿ. ಅದು ಬಿಟ್ಟು ವಾಟ್ಸಾಪ್ನಲ್ಲಿ ಮಂಗನಂತೆ ಮಾತಾಡಿದರೆ ಆಗಲ್ಲ. ಎಲ್ಲರೂ ಅಂಜುವ ಹಾಗೆ ನಾನು ಅಂಜುವ ಮಗನಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ನಾವು ಬಸವಣ್ಣನವರನ್ನು ಒಪ್ಪಿಕೊಂಡಿದ್ದೇವೆ. ಬಸವಣ್ಣನವರ ಇತಿಹಾಸ ನಮಗೆ ಗೊತ್ತಿದೆ. ವಿಜಯಪುರ, ಬಾಗಲಕೋಟೆ ಅವರಿಗೆ ಗೊತ್ತಿದೆ. ನಿಮ್ಮ ವಂಶಸ್ಥರನ್ನು ಕೇಳಿ ನೋಡಿ. ನಾವು ಬಸವಣ್ಣನವರ ವಿಚಾರದವರು ಬಸವಣ್ಣನವರನ್ನು ನಂಬಿದವರು. ಹೃದಯದಲ್ಲಿ ಒಳ್ಳೆಯದಾಗಲಿ ಅಂತ ಬೇಡಿಕೊಳ್ಳುವವರು. ದೇಶಕ್ಕೆ ಒಳ್ಳೆಯದಾಗೋದಾದರೆ ಹೋಮ, ಹವನ ಕೂಡ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಮಾಡಿ ಬಿಸಾಕಿ: ವಿಜಯೇಂದ್ರ ಬಣದಿಂದ ಆಗ್ರಹ, ಮೈಸೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲೇ ಆಕ್ರೋಶ
ಬಸವಣ್ಣನವರ ಬಗ್ಗೆ ಇವರಿಗೇನು ಗೊತ್ತಿದೆ. ಸುಮ್ಮನೆ ಒಂದು ಬುಕ್ ಬರೆಯೋದು. ಖಂಡ್ರೆ, ಶಾಮನೂರ, ಯಡಿಯೂರಪ್ಪ ಮನೆ ಮುಂದೆ ಓಡಾಡುವ ಗಿರಾಕಿ ಇವೆ ಎಲ್ಲಾ ಅಂತ ಬುದ್ದಿಜೀವಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಬಿಎಸ್ವೈ, ಬಿ ಅಂದರೆ ಭೀಮಣ್ಣ ಖಂಡ್ರೆ, ಎಸ್ ಅಂದರೆ ಶಾಮನೂರು ಶಿವಶಂಕ್ರಪ್ಪ, ವೈ ಅಂದರೆ ಯಡಿಯೂರಪ್ಪ. ಇದೇ ಅಖಿಲಭಾರತ ವೀರಶೈವ ಮಹಾಸಭಾ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:42 pm, Sat, 30 November 24