ದೀರ್ಘಾವಧಿ ಪ್ರಧಾನಿ ದಾಖಲೆ: ಕೈಯಲ್ಲಿ ‘ಮೋದಿ’ ಮೆಹಂದಿ ಹಾಕಿಕೊಂಡು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಬರ್ತ್‌ಡೇ ಆಚರಣೆ

ಪ್ರಧಾನಿ ನರೇಂದ್ರ ಮೋದಿ ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ದಾಖಲೆ ಬರೆದ ಹಿನ್ನೆಲೆಯಲ್ಲಿ, ಗಾಲಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ತಮ್ಮ ಹುಟ್ಟುಹಬ್ಬದಂದು ಕೈಯಲ್ಲಿ ಮೋದಿಯವರ ಭಾವಚಿತ್ರದ ಮೆಹಂದಿ ಬಿಡಿಸಿಕೊಂಡು ಸಂಭ್ರಮಿಸಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಮೋದಿಯವರ ದೀರ್ಘಾಯುಷ್ಯಕ್ಕೆ ಶುಭ ಹಾರೈಸಿದ್ದಾರೆ.

ದೀರ್ಘಾವಧಿ ಪ್ರಧಾನಿ ದಾಖಲೆ: ಕೈಯಲ್ಲಿ ‘ಮೋದಿ’ ಮೆಹಂದಿ ಹಾಕಿಕೊಂಡು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಬರ್ತ್‌ಡೇ ಆಚರಣೆ
ಕೈಯಲ್ಲಿ ‘ಮೋದಿ’ ಮೆಹಂದಿ ಹಾಕಿಕೊಂಡು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಬರ್ತ್‌ಡೇ ಆಚರಣೆ

Updated on: Jun 10, 2026 | 2:13 PM

ಬಳ್ಳಾರಿ, ಜೂನ್ 10: ಸ್ವತಂತ್ರ ಭಾರತದ ಇತಿಹಾಸದಲ್ಲಿ ಸತತವಾಗಿ ಅತಿ ದೀರ್ಘಾವಧಿಗೆ ಚುನಾಯಿತರಾದ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ (Narendra Modi) ಅವರ ಐತಿಹಾಸಿಕ ಸಾಧನೆಯನ್ನು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಕುಟುಂಬ ವಿಶಿಷ್ಟವಾಗಿ ಸಂಭ್ರಮಿಸಿದೆ. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ತಮ್ಮ ಹುಟ್ಟುಹಬ್ಬದ ಸಂಭ್ರಮದ ಮಧ್ಯೆಯೇ, ಪ್ರಧಾನಿ ಮೋದಿಯವರ ಈ ದಾಖಲೆಯನ್ನು ಗೌರವಿಸುವ ಸಲುವಾಗಿ ತಮ್ಮ ಕೈಯಲ್ಲಿ ನರೇಂದ್ರ ಮೋದಿಯವರ ಭಾವಚಿತ್ರದ ಮೆಹಂದಿ (ಮದರಂಗಿ) ಬಿಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಮುಖ್ಯಾಂಶಗಳು

  • ಹಸ್ತದಲ್ಲಿ ಮೂಡಿದ ಮೋದಿ ಮೆಹಂದಿ ಚಿತ್ರ.
  • ಹುಟ್ಟುಹಬ್ಬದಂದೇ ವಿಶಿಷ್ಟವಾಗಿ ಸಂಭ್ರಮಿಸಿದ ಲಕ್ಷ್ಮಿ.
  • ಮೋದಿಯವರ ಸುದೀರ್ಘ ಆಡಳಿತಕ್ಕೆ ಗೌರವ.

ಮೋದಿ ಭಾವಚಿತ್ರ, ಕಮಲದ ಹೂವು ಮತ್ತು 75ರ ಮದರಂಗಿ ಕಲಾಕೃತಿ

ಬಳ್ಳಾರಿ ನಗರದ ಸ್ವಗೃಹದಲ್ಲಿ ಲಕ್ಷ್ಮಿ ಅರುಣಾ ಈ ಬಾರಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದೇ ಸುಸಂದರ್ಭದಲ್ಲಿ ದೇಶದಲ್ಲಿ ನರೇಂದ್ರ ಮೋದಿಯವರು ಸತತವಾಗಿ ಅತಿ ದೀರ್ಘಾವಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಐತಿಹಾಸಿಕ ಮೈಲಿಗಲ್ಲನ್ನು ತಲುಪಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಅವರು, ಹಸ್ತದ ಮೇಲೆ ಭಾರತೀಯ ಜನತಾ ಪಕ್ಷದ (BJP) ಸಂಕೇತವಾದ ಕಮಲದ ಚಿತ್ರ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ದೇಶದ ಹೆಮ್ಮೆಯ ಸಂಕೇತವಾಗಿ ‘75 ವರ್ಷ’ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಕರ್ಷಕ ಭಾವಚಿತ್ರವನ್ನು ಮೆಹಂದಿ ಮೂಲಕ ಬಿಡಿಸಿಕೊಂಡಿದ್ದಾರೆ.

ಲಕ್ಷ್ಮಿ ಅರುಣಾ ಕೈಯಲ್ಲಿ ಮೂಡಿರುವ ಈ ರಾಜಕೀಯ ಹಾಗೂ ದೇಶಭಕ್ತಿಯ ಮದರಂಗಿ ಚಿತ್ರದ ವಿಡಿಯೋವನ್ನು ಜನಾರ್ದನ ರೆಡ್ಡಿ ಫೇಸ್​​ಬುಕ್​ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಲಕ್ಷ್ಮಿ ಅರುಣಾ ಕೈಯಲ್ಲಿ ಮೂಡಿರುವ ಮೋದಿ ಚಿತ್ರ

Reddy Fb Post

ಪ್ರಧಾನಿ ನರೇಂದ್ರ ಮೋದಿ ಸತತವಾಗಿ ಭಾರತದ ಪ್ರಧಾನ ಮಂತ್ರಿಯಾಗಿ ಅತಿ ದೀರ್ಘಕಾಲ ದೇಶವನ್ನು ಮುನ್ನಡೆಸಿದ ಪ್ರಜಾಸತ್ತಾತ್ಮಕ ನಾಯಕ ಎಂಬ ಅಭೂತಪೂರ್ವ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಸತತ ಸುದೀರ್ಘಾವಧಿಯ ಪ್ರಧಾನಿ ಹುದ್ದೆಯ ದಾಖಲೆಯನ್ನು ಮೋದಿ ಮುರಿದಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸತತ ಆಡಳಿತದ ದಾಖಲೆಯನ್ನು ಹಿಂದಿಕ್ಕಿದ್ದ ಮೋದಿ, ಈಗ ಸಂಪೂರ್ಣವಾಗಿ ಅತ್ಯಧಿಕ ದಿನಗಳ ಕಾಲ ಸತತವಾಗಿ ದೇಶದ ಚುಕ್ಕಾಣಿ ಹಿಡಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಶುಭ ಹಾರೈಸಿದ ಗಾಲಿ ಜನಾರ್ದನ ರೆಡ್ಡಿ

ಪ್ರಧಾನಿ ಮೋದಿಯವರ ಈ ಐತಿಹಾಸಿಕ ಸಾಧನೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಧಿಕೃತ ಫೇಸ್‌ಬುಕ್ ಖಾತೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ‘ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸತತವಾಗಿ ಅತೀ ದೀರ್ಘಾವಧಿಗೆ ಜನರಿಂದ ಚುನಾಯಿತರಾದ ಪ್ರಧಾನ ಮಂತ್ರಿ ಮಾನ್ಯ ನರೇಂದ್ರ ಮೋದಿಜಿ ಅವರು ರಾಷ್ಟ್ರಸೇವೆಗೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದಾರೆ. ಮೋದಿಜಿಯವರ ಪ್ರತಿಯೊಂದು ಕಾರ್ಯವು ಯಶಸ್ವಿಯಾಗಲಿ ಅವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಶಕ್ತಿಯಿಂದ ದೇಶ ಸೇವೆಯನ್ನು ಮುಂದುವರಿಸಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ’ ಎಂದು ರೆಡ್ಡಿ ಫೇಸ್​ಬುಕ್ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us