ಬಡತನ ರೇಖೆ ಮೇಲಿರುವ 40 ಲಕ್ಷಕ್ಕೂ ಹೆಚ್ಚು ಮಂದಿ ಬಳಿ ಬಿಪಿಎಲ್‌ ಕಾರ್ಡ್​​!

| Updated By: Ganapathi Sharma

Updated on: Jul 13, 2024 | 10:52 AM

ಬಿಪಿಎಲ್ ಕಾರ್ಡ್​​ಗಳಿಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆ ಈಗಷ್ಟೇ ಅವಕಾಶ ನೀಡುತ್ತಿದೆ. ಈ ಮಧ್ಯೆ ಈಗಿರುವ ಬಿಪಿಎಲ್ ಕಾರ್ಡ್​​ಗಳಲ್ಲಿ ಅನರ್ಹ ಫಲಾನುಭವಿಗಳು ಇರುವುದು ಪತ್ತೆಯಾಗಿದ್ದು, ಅನರ್ಹರ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಇದೀಗ ಅನರ್ಹ ಫಲಾನುಭವಿಗಳ ವಿರುದ್ಧ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಬಡತನ ರೇಖೆ ಮೇಲಿರುವ 40 ಲಕ್ಷಕ್ಕೂ ಹೆಚ್ಚು ಮಂದಿ ಬಳಿ ಬಿಪಿಎಲ್‌ ಕಾರ್ಡ್​​!
ಬಡತನ ರೇಖೆ ಮೇಲಿರುವ 40 ಲಕ್ಷಕ್ಕೂ ಹೆಚ್ಚು ಮಂದಿ ಬಳಿ ಬಿಪಿಎಲ್‌ ಕಾರ್ಡ್​​! (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಜುಲೈ 13: ರಾಜ್ಯದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಿಪಿಎಲ್ ಕಾರ್ಡ್ ಬಳಕೆ ಮಾಡುವರರು ಹೆಚ್ಚಾಗಿದ್ದು, ಅಂತಹವರ ವಿರುದ್ಧ ಕ್ರಮಕ್ಕೆ ಇದೀಗ ಆಹಾರ ಇಲಾಖೆ ಮುಂದಾಗಿದೆ. ಬಡತನ ರೇಖೆ ಮೇಲಿರುವರು ಸಹ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದ್ದು, ಒಟ್ಟು 40 ಲಕ್ಷಕ್ಕೂ ಹೆಚ್ಚು ಅನರ್ಹ ಬಿಪಿಎಲ್‌ ಕಾರ್ಡ್‌ದಾರರಾರು ಇರುವುದು ಪತ್ತೆಯಾಗಿದೆ. ಈ ಪಟ್ಟಿಯಲ್ಲಿ ಶೇ 20ರಷ್ಟು ಬಿಪಿಎಲ್ ಕಾರ್ಡ್‌ಗಳು ಬೆಂಗಳೂರಿನಲ್ಲಿಯೇ ಇರುವುದು ಪತ್ತೆಯಾಗಿದೆ.

ಅನರ್ಹರು ದುಬಾರಿ ವೆಚ್ಚದ ಆರೋಗ್ಯ ಸೇವೆ, ಕೃಷಿ ಉದ್ದೇಶಿತ ಯೋಜನೆಗಳು, ವಸತಿ ಯೋಜನೆಗಳಂತಹ ನಾನಾ ಸರಕಾರಿ ಸೌಲಭ್ಯಗಳ ಬಳಕೆ ಮಾಡಲು ನಿಯಮ ಮೀರಿ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಸದ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸದ್ಯ ಬಿಪಿಎಲ್‌, ಅಂತ್ಯೋದಯ ಅನ್ನ ಯೋಜನೆ ಸೇರಿ 1.27 ಕೋಟಿ ಕಾರ್ಡ್‌ಗಳಿವೆ. 4.36 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಲಕ್ಷಾಂತರ ಕಾರ್ಡ್‌ಗಳನ್ನು ಅರ್ಹತೆಯಿಲ್ಲದವರೂ ಪಡೆದುಕೊಂಡು ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಸರಕಾರದ ನಾನಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಸಿಗಬೇಕಿರುವ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿದ್ದು, ಅನರ್ಹರ ಕಾರ್ಡ್ ಎಪಿಎಲ್ ಪಟ್ಟಿಗೆ ಸೇರಿಸಲು ಆಹಾರ ಸರಬರಾಜು ಇಲಾಖೆ ಮುಂದಾಗಿದೆ.

ಅನರ್ಹ ಬಿಪಿಎಲ್ ಕಾರ್ಡ್​​ದಾರರನ್ನು ಪತ್ತೆ ಮಾಡಿದ್ದು ಹೇಗೆ?

ಅನರ್ಹರು ಕೂಡ ಬಿಪಿಎಲ್‌ ಕಾರ್ಡ್ ಬಳಸುತ್ತಿದ್ದಾರೆ ಎಂಬ ಅನುಮಾನ ಬಂದ ಕೂಡಲೇ ಆಹಾರ ಇಲಾಖೆ ಕಾರ್ಡುದಾರರ ಹೆಸರಿನಲ್ಲಿ ಪರಿಶೀಲನೆ ನಡೆಸಿತ್ತು. ಕಾರ್ಡ್​​ದಾರರಲ್ಲಿ ವಾಹನಗಳು ಇವೆಯಾ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದರೆ, ಫಲಾನುಭವಿಗಳ ಹೆಸರಲ್ಲಿ ಭೂಮಿ ಎಷ್ಟಿದೆ ಎಂಬ ಮಾಹಿತಿಯನ್ನು ಕಂದಾಯ ಇಲಾಖೆ ನೀಡಿದೆ. ಇನ್ನು, ಐಟಿ ಪಾವತಿ ಬಗ್ಗೆ ಐಟಿ ಇಲಾಖೆಯಿಂದ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಸರಕಾರಿ ನೌಕರಿ, ಸರಕಾರಿ ಪ್ರಾಯೋಜಿತ ಇಲಾಖೆ, ನಿಗಮ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅನರ್ಹ ಕಾರ್ಡ್‌ಗಳ ಪತ್ತೆಗಾಗಿ ಆಹಾರ ಇಲಾಖೆಗೆ ಸಾರಿಗೆ, ಕಂದಾಯ ಮತ್ತಿತರ ಇಲಾಖೆಗಳು ಸಾಥ್ ನೀಡಿದ್ದು, ಶೇ 40 ರಷ್ಟು ಅನರ್ಹರು ಪತ್ತೆಯಾಗಿದ್ದಾರೆ.

ಬಿಪಿಎಲ್ ಕಾರ್ಡ್​​ ಹೊಂದಲು ಮಾನದಂಡವೇನು?

  • ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತಲೂ ಹೆಚ್ಚಿರಬಾರದು.
  • ವೈಟ್‌ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಉಳ್ಳವರರು ಆಗಿರಬಾರದು.
  • ಐಟಿ ರಿಟರ್ನ್ ಪಾವತಿಸುವವರು ಆಗಿರಬಾರದು.
  • ಹಳ್ಳಿಯಲ್ಲಿ 3 ಹೆಕ್ಟೇರ್‌ ಒಣಭೂಮಿ/ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು ಆಗಿರಬಾರದು.
  • ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು ಅರ್ಹರಲ್ಲ.
  • ಸರಕಾರಿ, ಅರೆಸರಕಾರಿ ಉದ್ಯೋಗದಲ್ಲಿರುವರಿಗೂ ಅರ್ಹತೆಯಿಲ್ಲ.

ಇದನ್ನೂ ಓದಿ: ಕರ್ನಾಟಕ ರಾಜ್ಯದ ಶೇ 80ರಷ್ಟು ಮಂದಿ ಬಡವರೇ? ಸಿಎಂ ಸಿದ್ದರಾಮಯ್ಯ ಹೀಗೆ ಪ್ರಶ್ನಿಸಲು ಇದೆ ಕಾರಣ!

ಅನರ್ಹ ಬಿಪಿಎಲ್ ಕಾರ್ಡ್​​​ದಾರರಿಗೆ ಆಹಾರ ಇಲಾಖೆ ಶಾಕ್ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಕಾರ್ಡ್ ವಿತರಣೆ ವೇಳೆ ಮತ್ತಷ್ಟು ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ