ಕರ್ನಾಟಕ ರಾಜ್ಯದ ಶೇ 80ರಷ್ಟು ಮಂದಿ ಬಡವರೇ? ಸಿಎಂ ಸಿದ್ದರಾಮಯ್ಯ ಹೀಗೆ ಪ್ರಶ್ನಿಸಲು ಇದೆ ಕಾರಣ!
ಕರ್ನಾಟಕದಲ್ಲಿ 2021ರಿಂದಲೇ ಬೋಗಸ್ ಬಿಪಿಎಲ್ ಕಾರ್ಡ್ಗಳ ವಿರುದ್ಧ ಆಹಾರ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಆದಾಗ್ಯೂ ಇನ್ನೂ ಶೇ 80ರಷ್ಟು ನಾಗರಿಕರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ! ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಖಡನ್ ಸೂಚನೆ ನೀಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ಶೇ 80 ರಷ್ಟು ನಾಗರೀಕರು ಬಡತನ ರೇಖೆಗಿಂತ ಕೆಳಗಿರುವುದು ಹೇಗೆ? ಇದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಅಧಿಕಾರಿಗಳ ಜತೆ ಸಭೆ ನಡೆಸಿದಾಗ ಕೇಳಿದ ಪ್ರಶ್ನೆ. ರಾಜ್ಯದಲ್ಲಿ ಹೆಚ್ಚಾಗಿರುವ ಬೋಗಸ್ ಬಿಪಿಎಲ್ ಕಾರ್ಡ್ಗಳ ಬಗ್ಗೆ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಬಳಿ ಈ ರೀತಿ ಪ್ರಶ್ನೆ ಕೇಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಬೋಗಸ್ ಬಿಪಿಎಲ್ ಕಾರ್ಡ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ತಮಿಳುನಾಡಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರ ಪ್ರಮಾಣ ಶೇಕಡಾ 40 ರಷ್ಟಿದೆ ಎಂದು ಉಲ್ಲೇಖಿಸಿದ ಸಿದ್ದರಾಮಯ್ಯ, ನೀತಿ ಆಯೋಗದ ಪ್ರಕಾರ ಕರ್ನಾಟಕದಲ್ಲಿ ಕೇವಲ ಶೇಕಡಾ 5.67 ರಷ್ಟು ನಾಗರಿಕರು ಬಿಪಿಎಲ್ ಆಗಿರಬೇಕು ಎಂದಿದ್ದಾರೆ. ಆದಾಗ್ಯೂ, 4.67 ಕೋಟಿ ಜನರನ್ನು ಹೊಂದಿರುವ 1.47 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ನಿಜವಾದ ಬಡವರಿಗೆ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ನೀಡುವುದರ ಜತೆಗೆ ಎಲ್ಲಾ ಬೋಗಸ್ ಕಾರ್ಡ್‌ಗಳನ್ನು ತೊಡೆದುಹಾಕಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಖಡಕ್ ಸಂದೇಶ ರವಾನಿಸಿದ್ದಾರೆ.
6.17 ಲಕ್ಷ ಬೋಗಸ್ ಬಿಪಿಎಲ್ ಕಾರ್ಡ್ ರದ್ದು
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಕಾರ, ರಾಜ್ಯದಲ್ಲಿ 2.95 ಲಕ್ಷ ಹೊಸ ಪಡಿತರ ಚೀಟಿ (ಬಿಪಿಎಲ್) ಅರ್ಜಿಗಳು ಬಾಕಿ ಉಳಿದಿವೆ. 2021 ಡಿಸೆಂಬರ್ ಮತ್ತು 2024 ರ ಫೆಬ್ರವರಿ ನಡುವೆ ಅಧಿಕಾರಿಗಳು 6.17 ಲಕ್ಷ ಬೋಗಸ್ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಮಾಡಿ ಪಟ್ಟಿಯಿಂದ ತೆಗೆದುಹಾಕಿದ್ದಾರೆ.
ಬಿಪಿಎಲ್ ಅಂಕಿಅಂಶವನ್ನು ಸಮರ್ಪಕವಾಗಿ ಇಟ್ಟುಕೊಳ್ಳುವು ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅನಿವಾರ್ಯವಾಗಿದೆ. ಏಕೆಂದರೆ ಸರ್ಕಾರದ ಅನ್ನ ಭಾಗ್ಯ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಗುರುತಿಸುವಿಕೆಗೆ ಇದುವೇ ಪ್ರಮುಖ ಆಧಾರವಾಗಿದೆ. ಸರ್ಕಾರದ ಐದು ಉಚಿತ ಗ್ಯಾರಂಟಿ ಯೋಜನೆಗಳ ಪೈಕಿ ಈ ಎರಡು ಯೋಜನೆಗಳಿಗೇ 28,000 ಕೋಟಿ ರೂ.ಗಿಂತ ಹೆಚ್ಚು ವೆಚ್ಚವಾಗುತ್ತಿದೆ.
ಇದನ್ನೂ ಓದಿ: BPL Card: ಬಿಪಿಎಲ್ ಕಾರ್ಡ್ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ; ಮಾನದಂಡಗಳೇನು?
ಕರ್ನಾಟಕದಲ್ಲಿ 76 ಲಕ್ಷ ಪಿಂಚಣಿದಾರರಿದ್ದಾರೆ ಎಂದ ಸಿದ್ದರಾಮಯ್ಯ, ಭಾರತದಲ್ಲಿ ಅತಿ ಹೆಚ್ಚು ಪಿಂಚಣಿ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪಿಂಚಣಿ ಸ್ವೀಕರಿಸುವವರು ಮೃತಪಟ್ಟರೆ ಅಂಥವರ ಹೆಸರಿನಲ್ಲಿ ಆಗುತ್ತಿರುವ ಪಾವತಿಯನ್ನು ನಿಲ್ಲಿಸಲು ಅಧಿಕಾರಿಗಳು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ