ಕುಕ್ಕೆ ಸುಬ್ರಹ್ಮಣ್ಯ ಸಮೀಪ ನಕ್ಸಲರ ಚಲನವಲನ ಪತ್ತೆ; ಮನೆಗೆ ಭೇಟಿ ನೀಡಿ ಮೊಬೈಲ್ ಚಾರ್ಚ್ ಮಾಡಿರುವ ತಂಡ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮನೆಯವರ ಜೊತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿ ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗುತ್ತಿದೆ.
ಮಂಗಳೂರು, ಮಾರ್ಚ್.24: ಕುಕ್ಕೆ ಸುಬ್ರಹ್ಮಣ್ಯ ಸಮೀಪ ನಕ್ಸಲರ (Naxals) ಚಲನವಲನದ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಣ್ಣದಾಗಿ ಮಳೆಯಾಗುತ್ತಿದ್ದ ಸಂದರ್ಭ ಮೂವರು ಶಂಕಿತರ ತಂಡ ಐನೆಕಿದು ಗ್ರಾಮದ ಅಶೋಕ್ ಎಂಬುವರ ಮನೆಗೆ ಭೇಟಿ ನೀಡಿದ್ದಾರೆ. ಮನೆಯವರ ಜೊತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿ ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗುತ್ತಿದೆ.
ಬಂದಿದ್ದ ಮೂವರ ಬಳಿಯೂ ಶಸ್ತ್ರಾಸ್ತ್ರಗಳಿದ್ದ ಮಾಹಿತಿ ಸಿಕ್ಕಿದೆ. ವಾರದ ಹಿಂದೆ ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್ ಅಂಗಡಿಗೆ ಬಂದಿದ್ದ ಶಂಕಿತ ನಕ್ಸಲರು, ಇಂದು ಐನೆಕಿದುಯಲ್ಲಿ ಕಾಣಿಸಿಕೊಂಡಿದ್ದಾರೆ. ಕೂಜಿಮಲೆ ಮತ್ತು ಐನೆಕಿದು ನಡುವೆ ಸುಮಾರು 25 ಕಿ.ಮೀ. ಅಂತರವಿದೆ. ಇದೇ ಭಾಗದಲ್ಲಿ ನಕ್ಸಲ್ ನಿಗ್ರಹ ದಳ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದರೂ ಎಎನ್‌ಎಫ್ ತಂಡಕ್ಕೆ ಶಂಕಿತರು ಕಾಣಿಸಿರಲಿಲ್ಲ. ನಕ್ಸಲರು ಭೇಟಿ ನೀಡಿದ ಪ್ರದೇಶ ಕುಮಾರಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ. ಇಲ್ಲಿಂದ ಸೋಮವಾರಪೇಟೆ ಮತ್ತು ಇನ್ನೊಂದು ದಾರಿಯಾಗಿ ಗಾಳಿಬೀಡು. ಆ ಬಳಿಕ ಸಂಪಾಜೆ ಮೂಲಕ ಕೇರಳಕ್ಕೆ ಅರಣ್ಯದೊಳಗೆ ಸಂಪರ್ಕ ಸಾಧಿಸಲು ಸಾಧ್ಯವಿದೆ. ಸದ್ಯ ನಕ್ಸಲ್ ನಿಗ್ರಹ ದಳ ಶೋಧ ಚುರುಕುಗೊಳಿಸಿದೆ.
ಇದನ್ನೂ ಓದಿ: ಕೇರಳ: ಆರಾಟ್ಟುಪುಳ ಉತ್ಸವದ ವೇಳೆ ಎರಡು ಆನೆಗಳ ಕಾಳಗ
ಇನ್ನು ವಾರದ ಹಿಂದೆ ಶಂಕಿತ ನಕ್ಸಲರ ಚಲನವಲನದ ವರದಿಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ-ಕೊಡಗು ಗಡಿ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು.
ಮಡಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಸಮೀಪದ ಕೂಜಮಲೈ ರಬ್ಬರ್ ಎಸ್ಟೇಟ್ ಬಳಿಯ ಅಂಗಡಿಯೊಂದರಲ್ಲಿ ಶನಿವಾರ ಸಂಜೆ 8 ಮಂದಿ ಶಂಕಿತ ನಕ್ಸಲರ ತಂಡ, ಶಸ್ತ್ರಾಸ್ತ್ರಗಳೊಂದಿಗೆ ದಿನಸಿ ವಸ್ತುಗಳನ್ನು ಖರೀದಿಸಿದರು ಎಂಬ ಮಾಹಿತಿ ಸಿಕ್ಕಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:59 am, Sun, 24 March 24