ಬೆಂಗಳೂರು, ಮಾರ್ಚ್ 30: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗಿದ್ದಕ್ಕೆ ಸಂಸದೆ ಸುಮಲತಾ (Sumalatha) ಬೇಸರಗೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯೇ ಅಖಾಡಕ್ಕೆ ಧುಮುಕುತ್ತಿರುದು ತಿಳಿದ ಬಳಿಕ ಸುಮಲತಾ ಅವರು ಮೌನಕ್ಕೆ ಶರಣಾಗಿದ್ದರು. ಇನ್ನು ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುಮಲತಾರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಕೂಡ ಮಾಡಲಾಗಿತ್ತು. ಆದರೆ ಇದ್ಯಾವದಕ್ಕೂ ತಮ್ಮ ನಡೆ ತಿಳಿದಿದ್ದಾಗ ಜೆಪಿ ನಗರದ ನಿವಾಸದ ಮುಂದೆ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಬಳಿಕ ಬೆಂಬಲಿಗರ ಜೊತೆ ಸಭೆ ಮಾಡಿದ್ದು, ನಿಮ್ಮನ್ನ ನೋಯಿಸುವ ನಿರ್ಧಾರ ನಾನು ಮಾಡಲ್ಲ. ಏಪ್ರಿಲ್ 3ರಂದು ಮಂಡ್ಯದಲ್ಲಿ ಸಭೆ ಮಾಡಿ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಬೆಂಬಲಿಗರ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ನಿಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವ ನಿರ್ಧಾರ ಕೈಗೊಳ್ಳಲ್ಲ. ಮಂಡ್ಯದ ಋಣ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ರಾಜಕೀಯ ಏನೇ ಇದ್ದರೂ ಮಂಡ್ಯದ ಜೊತೆಗೆ. ನಿಮ್ಮನ್ನ ನೋಯಿಸುವ ನಿರ್ಧಾರ ನಾನು ಮಾಡಲ್ಲ. ಕೆಲವೇ ದಿನಗಳಲ್ಲೇ ಮಂಡ್ಯದಲ್ಲಿ ಸಭೆ ಕರೆದು ನಿರ್ಧಾರ ತಿಳಿಸುತ್ತೇನೆ. ಮಂಡ್ಯದ ಜನರ ಮುಂದೆ ನನ್ನ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಭಾಷಣದ ವೇಳೆ ಭಾವುಕರಾದರು.
ಅಂಬರೀಶ್ ಜೊತೆಗಿದ್ದ ಎಲ್ಲರು ಇಂದಿಗೂ ನಮ್ಮ ಜೊತೆಗಿದ್ದಾರೆ. ಇಲ್ಲಿಗೆ ಬಂದಿರುವ ನೀವೇ ನನಗೆ ಶಕ್ತಿ. ನಮ್ಮ ಜತೆ ಯಾವುದೇ ದೊಡ್ಡ ನಾಯಕರಿಲ್ಲ, ಎಲ್ಲ ನೀವೆ ನನಗೆ. ನಾನು ಎಂದಿಗೂ ಸ್ವಾರ್ಥದ ರಾಜಕಾರಣ ಮಾಡಿಲ್ಲ. ನನ್ನನ್ನ ನಾನು ಬೆಳೆಸಿಕೊಳ್ಳಬೇಕಿದ್ದರೆ ನನ್ನ ನಡೆ ಬೇರೆ ರೀತಿ ಇರ್ತಿತ್ತು. ನಾನು ಯಾವತ್ತೂ ಸಹ ತಪ್ಪು ಹೆಜ್ಜೆ ಹಾಕಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬೆಂಬಲಿಗರ ಜೊತೆ ಸುಮಲತಾ ಮಹತ್ವದ ಮಾತುಕತೆ: ಮುಂದಿನ ನಡೆ ಘೋಷಣೆ ಮಾಡ್ತಾರಾ? ಲೈವ್ ನೋಡಿ
ಮಂಡ್ಯ ಕೊಡಲ್ಲ ಬೇರೆ ಕಡೆ ನಿಲ್ಲಿ ಅಂದರೆ ಯಾರಾದ್ರೂ ಬಿಡ್ತಾರಾ? ಆದರೆ, ಏನೇ ಆದರೂ ನಾನು ಮಂಡ್ಯ ಬಿಟ್ಟು ಕೊಡುವುದಿಲ್ಲ ಎಂದಿರುವ ಸುಮಲತಾ ಅವರು ಆ ಮೂಲಕ ಪಕ್ಷೇತರವಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಮಂಡ್ಯ ಅಂದ್ರೆ ನನಗೆ ಅಭಿಮಾನ. ನನಗೆ ಕೊಟ್ರೆ ಮಂಡ್ಯ ಕ್ಷೇತ್ರವನ್ನೇ ಕೊಡಿ ಎಂದು ಹೇಳಿದ್ದೇನೆ ಎಂದರು.
ನನ್ನ ಚುನಾವಣೆಯಿಂದ ಇಂದಿನವರೆಗೆ ನಾನು ನುಡಿದಂತೆ ನಡೆದುಕೊಂಡು ಬಂದಿದ್ದೇನೆ. ಕೈಲಾದಷ್ಟು ಮಂಡ್ಯ ಜಿಲ್ಲೆಗೆ ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಮಂಡ್ಯ ಜಿಲ್ಲೆ ಘನತೆಯನ್ನು ಸಂಸತ್ನಲ್ಲೂ ಎತ್ತಿ ಹಿಡಿದಿದ್ದೇನೆ. ಮಂಡ್ಯ ಕೇವಲ ರಾಜಕೀಯ ಸಂಬಂಧ ಅಲ್ಲ, ಅದು ಭಾವನೆ, ಪ್ರೀತಿ. ನಾನು ಮಂಡ್ಯದಲ್ಲಿದ್ದಾಗ ಅಂಬರೀಶ್ ನನ್ನ ಜೊತೆ ಇದ್ದಂತೆಯೇ ಭಾವನೆ. ನನಗೆ ಸ್ವಾರ್ಥ ಅಂತಾ ಹೇಳುವುದಾದರೆ ನನಗೆ ಮಂಡ್ಯವೇ ಬೇಕು ಎಂದಿದ್ದಾರೆ.
ಇದನ್ನೂ ಓದಿ: ಮಂಡ್ಯ ಲೋಕಸಭಾ ಜಿದ್ದಾಜಿದ್ದಿ: ಸುಮಲತಾಗೆ ಎಚ್ಚರಿಕೆಯ ಬೇಡಿಕೆ ಇಟ್ಟ ಕಾಂಗ್ರೆಸ್ ಶಾಸಕ
ಮಂಡ್ಯದಲ್ಲಿ ಯಾವುದೂ ಸುಲಭವಾಗಿ ನಡೆದಿಲ್ಲ. ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವುದೇ ನಿರ್ಧಾರ ತೆಗದುಕೊಳ್ಳಲ್ಲ. ಮಂಡ್ಯದ ಋಣ ಬಿಡುವ ಪ್ರಶ್ನೆ ಇಲ್ಲ. ರಾಜಕೀಯ ಬರುತ್ತದೆ, ಹೋಗುತ್ತದೆ. ರಾಜಕೀಯ ನಿರ್ಧಾರ ಮಂಡ್ಯದ ಜೊತೆಗೆ ಇರುತ್ತದೆ. ನಾನು ಇದರ ಬಗ್ಗೆ ಒಂದಷ್ಟು ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:31 pm, Sat, 30 March 24