ಮಂಡ್ಯ ಸಂಸದೆ ಮನವೊಲಿಕೆಗೆ ವಿಜಯೇಂದ್ರ ಕಸರತ್ತು, ಸುಮಲತಾ ಅಂಬರೀಶ್ ಹೇಳಿದ್ದೇನು?
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ಈ ಟಿಕೆಟ್ ಸಸ್ಪೆನ್ಸ್ ಮುಗಿಯುತ್ತಿದ್ದಂತೆ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಇನ್ನು ಈ ಭೇಟಿ ಬಗ್ಗೆ ಸುಮಲತಾ ಮತ್ತು ವಿಜಯೇಂದ್ರ ಹೇಳಿದ್ದೇನು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಮಾರ್ಚ್ 29): ಮಂಡ್ಯ ಲೋಕಸಭಾ ಕ್ಷೇತ್ರ ಕೈತಪ್ಪಿ ಜೆಡಿಎಸ್ ಪಾಲಾಗಿರುವುದರಿಂದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಅವರನ್ನು ಮನವೊಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಣಕ್ಕಿಳಿದಿದ್ದು, ಇದರ ಭಾಗವಾಗಿ ಇಂದು (ಮಾರ್ಚ್ 29) ಬೆಂಗಳೂರಿನ ಜೆಪಿ ನಗರದಲ್ಲಿ ನಿವಾಸಕ್ಕೆ ವಿಜಯೇಂದ್ರ ಭೇಟಿ ನೀಡಿ ಸುಮಲತಾ ಜೊತೆ ಮಹತ್ವದ ಚರ್ಚೆ ಮಾಡಿದರು. ಅಲ್ಲದೇ ಮೈತ್ರಿ ಧರ್ಮ ಪಾಲನೆ ಪ್ರಚಾರಕ್ಕೆ ಬರುವಂತೆ ಮನವೊಲಿಸುವ ಪ್ರಯತ್ನ ಮಾಡಿದರು. ಆದ್ರೆ, ಸುಮಲತಾ ಅವರು ಸದ್ಯಕ್ಕೆ ಯಾವುದೇ ನಿರ್ಧಾರ ಹೇಳದೆ ಬೆಂಬಲಗರ ಅಭಿಪ್ರಾಯ ಕೇಳಿ ಮಂಡ್ಯದಲ್ಲಿ ತಮ್ಮ ನಿಲುವು ಪ್ರಕಟಿಸುವುದಾಗಿ ಹೇಳಿದ್ದಾರೆ.
ವಿಜಯೇಂದ್ರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಚುನಾವಣೆಗೆ ಬೆಂಬಲ ನೀಡಬೇಕೆಂದು ವಿಜಯೇಂದ್ರ ಕೇಳಿದ್ದಾರೆ. ಆದ್ರೆ, ಬೆಂಬಲಿಗರ ಸಭೆ ಬಳಿಕ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ಮಂಡ್ಯ ಕ್ಷೇತ್ರ ಬಿಟ್ಟು ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳಬೇಕಿತ್ತು. ನಾಳೆ(ಮಾರ್ಚ್ 30) ಮಂಡ್ಯದಲ್ಲಿ ನಾನು ಬೆಂಬಲಿಗರ ಜೊತೆ ಸಭೆ ನಡೆಸುತ್ತಿದ್ದೇನೆ. ನನ್ನ ನಿಲುವನ್ನು ಮಂಡ್ಯದಲ್ಲೇ ತಿಳಿಸಲು ಇಷ್ಟಪಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಮನ್ವಯ ಸಮಿತಿ ರಚನೆಗೆ ತೀರ್ಮಾನ: ಜೆಡಿಎಸ್-ಬಿಜೆಪಿ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು ಇಂತಿವೆ
ವಿಜಯೇಂದ್ರ ಹೇಳಿದ್ದೇನು?
ಸುಮಲತಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಇಂದು ಉತ್ತಮ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಮಂಡ್ಯ ಸಂಸದೆ ಸುಮಲತಾ ಜೊತೆ ಒಳ್ಳೆಯ ಚರ್ಚೆ ಆಗಿದ್ದು, ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ. ಸುಮಲತಾ ಅಂಬರೀಶ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಒಳ್ಳೆ ನಿರ್ಧಾರ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಇಂದಿನ ಭೇಟಿ ಮನವೊಲಿಸುವಂತಹದ್ದು ಅಲ್ಲ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಭೇಟಿ ಮಾಡಿ ಚರ್ಚೆ ಮಾಡುವಂತಹದ್ದು ನನ್ನ ಕರ್ತವ್ಯ. ಮಂಡ್ಯ ಕ್ಷೇತ್ರವನ್ನು ವರಿಷ್ಠರು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವಾಗ ಭೇಟಿ ಮಾಡಿ ಸಹಕಾರ ಕೇಳುವುದು ನಮ್ಮ ಕರ್ತವ್ಯ. ಸಾಕಷ್ಟು ವಿಚಾರ ಚರ್ಚೆ ಮಾಡಿದ್ದೇವೆ. ಸುಮಲತಾ ಸಕಾರಾತ್ಮಕವಾಗಿ ಸ್ಪಂದಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಅವರು ನಮ್ಮ ಜೊತೆಯಲ್ಲಿರುತ್ತಾರೆ, ನಮ್ಮ ಪಕ್ಷಕ್ಕೆ ಶಕ್ತಿ ತುಂಬುತ್ತಾರೆ ಎಂಬ ವಿಶ್ವಾಸವಿದೆ. ಇದು ಅವರಿಗೆ ತಾತ್ಕಾಲಿಕ ಹಿನ್ನೆಡೆ ಅಂತಾ ಅನ್ನಿಸಬಹುದು. ಮುಂದೆ ಭವಿಷ್ಯದದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಎಂಬುದನ್ನು ನಾನು ಮನವರಿಕೆ ಮಾಡಿದ್ದೇನೆ ಎಂದರು.
ಸಂಸದರಾಗಿ ಅವರು ಅವರ ಬೆಂಬಲಿಗರ ಸಲಹೆ ಪಡೆಯಬೇಕಾಗುತ್ತದೆ. ನಾನೂ ಕೂಡಾ ಅದೇ ಸಲಹೆ ಕೊಟ್ಟಿದ್ದೇನೆ. ಒಳ್ಳೆಯ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲವೂ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಿದೆ. ಸುಮಲತಾ ಅವರಿಗೂ ಈ ಬಗ್ಗೆ ಎಲ್ಲಾ ಮಾಹಿತಿ ಇದೆ. ಇದರ ನಡುವೆಯೂ ಮೋದಿಯವರಿಗೆ ಶಕ್ತಿ ತುಂಬಬೇಕು ಎಂಬ ಸದಭಿಪ್ರಾಯವೂ ಅವರಲ್ಲಿದೆ. ಸುಮಲತಾ ಅವರಿಗೆ ಜವಾಬ್ದಾರಿ ಕೊಡುವ ಬಗ್ಗೆ ರಾಷ್ಟ್ರೀಯ ನಾಯಕರು ಚರ್ಚೆ ಮಾಡುತ್ತಾರೆ. ಸುಮಲತಾ ಅವರಿಗೆ ಅವರದ್ದೇ ಶಕ್ತಿ ಇದೆ. ಅಂಬರೀಶ್ ಪರಂಪರೆಯನ್ನು ಮುಂದುವರಿಸಬೇಕಾದ ಜವಾಬ್ದಾರಿ ಅವರದ್ದೂ ಇದೆ. ಮಂಡ್ಯದಲ್ಲಿ ಅವರು ಪ್ರಚಾರ ಮಾಡುತ್ತಾರಾ ಎಂಬುದಕ್ಕೆ ಮುಂದೆ ಉತ್ತರ ಸಿಗುತ್ತದೆ ಎಂದು ತಿಳಿಸಿದರು.
ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವುದು ಬೇಡ ಎಂದು ಸುಮಲತಾ ಅಂಬರೀಶ್ ಇತ್ತೀಚೆಗೆ ದೆಹಲಿಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಹೇಳಿದ್ದರು. ಅಲ್ಲದೇ ಮಂಡ್ಯ ಬಿಜೆಪಿ ಟಿಕೆಟ್ಗಾಗಿ ನಾನಾ ಪ್ರಯತ್ನ ಮಾಡಿದ್ದರು. ಆದರೆ, ಬಿಜೆಪಿ ಅಂತಿಮವಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಇದರಿಂದ ಅಸಮಾಧಾನಗೊಂಡಿರುವ ಸುಮಲತಾ ಅಂಬರೀಶ್, ಮೌನಕ್ಕೆ ಜಾರಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ರೆಬೆಲ್ ನಡೆಯಿಂದ ಬಿಜೆಪಿ, ಜೆಡಿಎಸ್ ಮೈತ್ರಿಗೆ ಮುಜುಗರ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ವಿಚಾರಕ್ಕೆ ಅಸಮಾಧಾನಗೊಂಡಿದ್ದ ಸುಮಲತಾ ಅವರನ್ನು ಬಿ.ವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದಾರೆ. ಮಂಡ್ಯ ಟಿಕೆಟ್ ವಿಚಾರದಲ್ಲಿ ಸುಮಲತಾ ಅವರ ಮನವೊಲಿಕೆಗೆ ಬಿ.ವೈ ವಿಜಯೇಂದ್ರ ಅವರು ಪ್ರಯತ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:33 pm, Fri, 29 March 24