ರಾಜೀನಾಮೆಗೆ ಮುಂದಾಗಿದ್ದ ಕೋಲಾರ ಕೈ ಶಾಸಕರಿಗೆ ಸಿಎಂ-ಡಿಸಿಎಂ ತರಾಟೆ, ಇಲ್ಲಿದೆ ಸಭೆಯ ಇನ್ಸೈಡ್ ಡಿಟೇಲ್ಸ್
ಕೋಲಾರ ಕಾಂಗ್ರೆಸ್ ಟಿಕೆಟ್ ಕೋಲಾಹಲ ಇನ್ನೂ ತಣ್ಣಗಾದಂತೆ ಕಾಣಿಸುತ್ತಿಲ್ಲ. ನಿನ್ನೆ ಅಷ್ಟೇ ಸಿಎಂ-ಡಿಸಿಎಂ ಸಂಧಾನ ಸಭೆ ಮಾಡಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದರು. ಆದ್ರೆ, ನಾಯಕರಲ್ಲಿ ಅಭ್ಯರ್ಥಿ ಯಾರು ಎನ್ನುವ ಗೊಂದಲ ಇನ್ನೂ ಮುಂದುವರೆದಿದೆ. ಇನ್ನು ನಿನ್ನೆಯ ಸಭೆಯಲ್ಲಿ ಕೋಲಾರ ಕಾಂಗ್ರೆಸ್ ಶಾಸಕರ ನಡೆಗೆ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಗರಂ ಆಗಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಾದ್ರೆ, ಸಭೆಯಲ್ಲಿ ಏನೆಲ್ಲಾ ಆಯ್ತು ಎನ್ನುವ ಇನ್ಸೈಡ್ ವಿವರ ಈ ಕೆಳಗಿನಂತಿದೆ.
ಬೆಂಗಳೂರು, (ಮಾರ್ಚ್ 29): ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಕೋಲಾರ (Kolar) ಕಾಳಗದ ಕೋಲಾಹಲ ಎದ್ದಿದೆ. ಟಿಕೆಟ್ ಘೋಷಣೆ ಆಗ್ಬೇಕಿರೋ ಕೋಲಾರ ಲೋಕಸಭಾ (Kolar Loksabha) ಕ್ಷೇತ್ರದಲ್ಲಿ ಸಚಿವ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಿನ ಜೋರಾಗಿದ್ದು, ಯಾರಿಗೆ ಟಿಕೆಟ್ ನೀಡಬೇಕೆಂದು ವರಿಷ್ಠರಿಗೆ ದೊಡ್ಡ ತಲೆನೋವಾಗಿದೆ. ನಿನ್ನೆ(ಮಾರ್ಚ್ 28) ಕೋಲಾರ ಶಾಸಕರ ಸಂಧಾನ ಸಭೆಯಾಗಿತ್ತು. ಆದ್ರೆ, ಅಭ್ಯರ್ಥಿ ಯಾರು ಎನ್ನುವ ಗೊಂದಲ ನಾಯಕರ ನಡುವೆ ಏರ್ಪಟ್ಟಿದೆ. ಇನ್ನು ಸಂಧಾನ ಸಭೆಯಲ್ಲಿ ಎರಡೂ ಬಣಗಳನ್ನು ಬಿಟ್ಟು ಮೂರನೇ ವ್ಯಕ್ತಿಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪವಾಗಿದೆ. ಅಲ್ಲದೇ ಇದೇ ವೇಳೆ ಸಿಎಂ-ಡಿಸಿಎಂ ಕೋಲಾರ ಶಾಸಕರ ನಡೆಗೆ ಕೆಂಡಾಮಂಡಲವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೋಲಾರ ಅತೃಪ್ತ ಶಾಸಕರ ಜತೆಗಿನ ಸಿಎಂ ಇನ್ಸೈಡ್ ಡಿಟೇಲ್ಸ್
ಸಭೆ ಆರಂಭವಾಗುತ್ತಿದ್ದಂತೆ ಚಿಕ್ಕಪೆದ್ದಣ್ಣ ಬದಲಾಗಿ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ರಮೇಶ್ ಕುಮಾರ್ ಬಣದ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಮೊದಲಿಗೆ ಶಾಸಕ ಕೊತ್ತೂರು ಮಂಜುನಾಥ್ ಬಾಯಿಂದಲೇ ಪ್ರತ್ಯೇಕ ಅಭ್ಯರ್ಥಿ ಮಾತು ಬಂದಿದ್ದು, ಬೇರೆ ಯಾರಿಗಾದ್ರೂ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರದೇ ಇದ್ದರೆ ನಾನು ಬೆಂಗಳೂರಿಗೆ ಕಾಲಿಡಲ್ಲ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿಕೊಂಡೇ ನಿಮ್ಮ ಮನೆಗೆ ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಿಎಂ, ಡಿಸಿಎಂ ಮುಂದೆ ಮುನಿಯಪ್ಪರ ದಲಿತ ಎಡಗೈ-ಬಲಗೈ ಸಮುದಾಯದ ಪ್ರಾತಿನಿಧ್ಯದ ವಾದ
ಸಚಿವ ಎಂ.ಸಿ.ಸುಧಾಕರ್ ಅವರಿಂದಲೂ ಬೇರೆ ಅಭ್ಯರ್ಥಿಯನ್ನು ಘೋಷಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಬೇರೆ ಅಭ್ಯರ್ಥಿ ಕೊಡಿ ಸರ್.. ಇಲ್ಲವಾದಲ್ಲಿ ನಾವುಗಳು ಕೆಲಸ ಮಾಡುವುದು ಕಷ್ಟವಾಗುತ್ತೆ ಎಂದಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯಪ್ರವೇಶಿಸಿ, ಮೊದಲಿಗೆ ನಿಮಗೆ ಚಿಕ್ಕಪೆದ್ದಣ್ಣನೇ ಅಭ್ಯರ್ಥಿ ಎಂದು ಹೇಳಿದ್ದು ಯಾರು? ನಿಮಗೆ ಹೇಗೆ ಅವರೇ ಅಭ್ಯರ್ಥಿ ಎಂದು ಗೊತ್ತಾಯ್ತು? ಹೈಕಮಾಂಡ್ ನವರು ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಾಯಕರು ಪ್ರತಿಕ್ರಿಯಿಸಿ, ಈ ರೀತಿ ಮಾತು ಹರಿದಾಡುತ್ತಿದೆ ಸರ್. ಅವರೇ ಫೈನಲ್ ಎಂದು ಹೇಳುತ್ತಿದ್ದಾರೆ ಎಂದರು.
ನಾನಾಗಲಿ, ಡಿ.ಕೆ.ಶಿವಕುಮಾರ್ ಆಗಲಿ ಚಿಕ್ಕಪೆದ್ದಣ್ಣ ಹೆಸರು ಹೇಳಿಲ್ಲ. ದೆಹಲಿಯ ಹೈಕಮಾಂಡ್ ಗೂ ಯಾವುದೇ ಪಟ್ಟಿ ನಾವು ಕಳುಹಿಸಿಲ್ಲ. ನೀವು ನೀವೇ ಎಲ್ಲವನ್ನು ಊಹೆ ಮಾಡಿಕೊಂಡು ಗಲಾಟೆ ಮಾಡಿದ್ರೆ ಹೇಗೆ? ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್, ಶಾಸಕರು ಹಾಗೂ ಪರಿಷತ್ ಸದಸ್ಯರಿಗೆ ತರಾಟೆ ತೆಗೆದುಕೊಂಡರು.
ನೀವು ಮಾಡಿರುವ ಕೆಲಸದಿಂದ (ರಾಜೀನಾಮೆ ನೀಡುವ ಹಂತಕ್ಕೆ) ನನಗೆ ಹಾಗೂ ಪಕ್ಷಕ್ಕೆ ಮುಜುಗರ ಆಗಿದೆ. ದೆಹಲಿ ಹೈಕಮಾಂಡ್ ನಾಯಕರು ಸಹ ನಮಗೆ ಕರೆ ಮಾಡಿ ಕೇಳುತ್ತಿದ್ದಾರೆ. ಸಭಾಪತಿ ಕಚೇರಿಗೆ ಹೋಗಿ ರಾಜೀನಾಮೆ ನೀಡುವಂತೆ ಸ್ಥಿತಿ ಏನಿತ್ತು? ನೀವು ಈ ರೀತಿ ಮಾಡಿದ್ದು ಬಿಲ್ ಕುಲ್ ಸರಿ ಅಲ್ಲ ಸಿದ್ದರಾಮಯ್ಯ ಜಾಡಿಸಿದರು. ಇದಕ್ಕೆ ನಾಯಕರು ಕ್ಷಮಾಪಣೆ ಕೇಳಿದ್ದಾರೆ.
ಇನ್ನು ಇದೇ ವೇಳ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್, ಕೋಲಾರ ಕ್ಷೇತ್ರಕ್ಕೆ ಮೂವರ ಅಭ್ಯರ್ಥಿಗಳ ಹೆಸರು ಹೇಳಿದರು. ಪಕ್ಷದ ಅಧ್ಯಕ್ಷರೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸಿದ್ದರಾಂಯ್ಯ ಹೇಳಿದ್ದು, ಯಾರಿಗೇ ಟಿಕೆಟ್ ಕೊಟ್ರು ನೀವು ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಖಡಕ್ ಸೂಚನೆ ನೀಡಿ ಕೋಲಾರ ಅಭ್ಯರ್ಥಿ ಆಯ್ಕೆಯನ್ನು ಡಿಕೆ ಶಿವಕುಮಾರ್ ಹೆಗಲಿ ಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.