ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ 14 ಸೈಟ್​ ನೀಡಲಾಗಿದೆ; ವಿಜಯೇಂದ್ರ ಆರೋಪ

ಮುಡಾ ಹಗರಣ ಸಿಎಂ ಸಿದ್ದರಾಮಯ್ಯಗೆ ದಿನೇ ದಿನೇ ಉರುಳಾಗಿ ಸುತ್ತಿಕೊಳ್ಳುತ್ತಿದೆ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮುಡಾ ಹಗರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅವರಿಗೆ ಅರ್ಹತೆಗೂ ಮೀರಿ ಹೆಚ್ಚಿನ ಸೈಟ್​ಗಳನ್ನು ನೀಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ 14 ಸೈಟ್​ ನೀಡಲಾಗಿದೆ; ವಿಜಯೇಂದ್ರ ಆರೋಪ
ಶಾಸಕ ಬಿವೈ ವಿಜಯೇಂದ್ರ
Follow us
ವಿವೇಕ ಬಿರಾದಾರ
|

Updated on:Jul 10, 2024 | 1:12 PM

ಬೆಂಗಳೂರು, ಜುಲೈ 10: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (MUDA) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗೆ ಅರ್ಹತೆಗೂ ಮೀರಿ ಎರಡು ಕೋಟಿ ರೂ. ಬೆಲೆಬಾಳುವ 14 ನಿವೇಶನ​ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪ ಮಡಿದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಹತೆ ಪ್ರಕಾರ ಪಾರ್ವತಿ ಅವರಿಗೆ ನೀಡಬೇಕಾಗಿದ್ದು ಕೇವಲ ಎರಡು ಜಮೀನು ಮಾತ್ರ. ಆದರೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮೈಸೂರಿನ ಕೆಸರೇ ಗ್ರಾಮದಲ್ಲಿದ್ದ 3.16 ಜಮೀನನ್ನು ಹೊಂದಿದ್ದರು. ಈ ಜಮೀನನ್ನು 2014ರಲ್ಲಿ ಮುಡಾ ಬಳಸಿಕೊಂಡಿದೆ ಎಂದು ಪಾರ್ವತಿ ಅವರು ಮುಡಾಗೆ ದೂರು ನೀಡಿದ್ದರು. ಈ ಬಗ್ಗೆ 2017ರಲ್ಲಿ ತನಿಖೆ ಮಾಡಿ ಪರಿಹಾರದ ಭೂಮಿಯನ್ನು ನೀಡಲು ನಿರ್ಧರಿಸಲಾಯಿತು. 2021ರಲ್ಲಿ ಪ್ರತಿ ಚದರ್​ ಅಡಿಗೆ 9 ಸಾವಿರ ರೂಪಾಯಿ ಬೆಲೆ ಬಾಳುವ 14 ನಿವೇಶಗಳನ್ನು ಅರ್ಹತೆಗೂ ಮೀರಿ ನೀಡಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಪತ್ನಿ ಅವರಿಗೆ ನೀಡಬೇಕಾಗಿದ್ದಿದ್ದು ಕೇವಲ ಎರಡೇ ನಿವೇಶನ ಎಂದು ತಿಳಿಸಿದರು.

ಇದೇ ವರ್ಷ ಏಪ್ರಿಲ್​ 15 ರಂದು ಓರ್ವ ವ್ಯಕ್ತಿಗೆನೇ 42 ನಿವೇಶನ ನೀಡಿದ್ದಾರೆ. ಈ ಸರ್ಕಾರ ಬಂದ ಮೇಲೆ ಸಾವಿರಾರು ನಿವೇಶಗಳನ್ನು ಅಕ್ರಮವಾಗಿ ನೀಡಿದ್ದಾರೆ. ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆಸಿ ಈಗ ಸಿದ್ದರಾಮಯ್ಯ ಅವರು ಪರಿಹಾರ ಕೇಳುತ್ತಿದ್ದಾರೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ತಪ್ಪು ಮಾಹಿತಿ ನೀಡಲು ಯತ್ನಿಸಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಮುಖವಾಡ ಕಳಚಿ ಬಿದ್ದಿದೆ. ಪ್ರತಿ ಹಂತದಲ್ಲೂ ಹಗರಣದ ವಾಸನೆ ಹೊರಬರುತ್ತಿದೆ ಎಂದರು.

ಇದನ್ನೂ ಓದಿ: ಮುಡಾ ಅಕ್ರಮ ಆರೋಪ: ಬಾಮೈದ ಜಮೀನನ್ನ ಅರಿಶಿನ, ಕುಂಕಮ ರೀತಿಯಲ್ಲಿ ನನ್ನ ಹೆಂಡಿತಿಗೆ ಗಿಫ್ಟ್​​ ನೀಡಿದ್ದಾನೆ; ಸಿದ್ದರಾಮಯ್ಯ

ಮುಡಾ ಹಗರಣದಲ್ಲಿ ಎರಡು ಪ್ರಕರಣಗಳು ಇವೆ. ಸಿದ್ದರಾಮಯ್ಯ ಪತ್ನಿ ಹೆಸರಿನ‌ ಒಂದು ಪ್ರಕರಣ, ಇನ್ನೊಂದು ಸಚಿವ ಭೈರತಿ ಸುರೇಶ್ ಅವರ ಹೆಸರಿನಲ್ಲಿ. ಮುಡಾದ ಹಗರಣ ಬಯಲಾಗುತ್ತಿದ್ದಂತೆ ಭೈರತಿ ಸುರೇಶ ತುರ್ತಾಗಿ ಮೈಸೂರಿಗೆ ಹೋಗುತ್ತಾರೆ. ಆತುರವಾಗಿ ಸಭೆ ಕರೆದು ಎಲ್ಲ ಮಾಹಿತಿ ಪಡೆದಕೊಂಡು ಅಧಿಕಾರಗಳನ್ನು ವರ್ಗಾವಣೆ ಮಾಡುತ್ತಾರೆ. ಸಚಿವರು ಹಗರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಕೆ ರಾಜೇಂದ್ರ ಅವರು ಮುಡಾದಲ್ಲಿ ನಡೆದಿದ್ದ ಹಗರಣದ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ ಅವರನ್ನೂ ವರ್ಗಾವಣೆ ಮಾಡಿದ್ದಾರೆ. ಮುಡಾ ಕಚೇರಿಯಲ್ಲಿರುವ‌ ಕಡತ ಎಲ್ಲವನ್ನ ಬೆಂಗಳೂರಿಗೆ ತಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ‌, ಭೈರತಿ ಸುರೇಶ್ ಹಗರಣ ‌ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಮುಡಾ ಹಗರಣದ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊರಬೇಕು ಎಂದರು.

ಯಾರ ಅವಧಿಯಲ್ಲಿ ಅಕ್ರಮವಾಗಿದರೂ ಕೂಡ ಅಕ್ರಮ ಅಕ್ರಮನೇ. ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ಆಗಬೇಕು. ವಾಲ್ಮೀಕಿ ಹಾಗೂ ಮುಡಾ ಹಗರಣವನ್ನ ಒಂದು ತಾರ್ಕಿಕ ಅಂತ್ಯಕ್ಕೆ‌ ಕೊಂಡೋಯ್ಯುತ್ತೇವೆ. ಶುಕ್ರವಾರ ನಾನು, ಆರ್​ ಅಶೋಕ್, ಅಶ್ವತ್ಥ್ ನಾರಾಯಣ್ ಸೇರಿ ಮೈಸೂರಲ್ಲಿ ಸಿಎಂ ಹಾಗೂ ಅವರ ಸಚಿವರ ವಿರುದ್ಧ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಮುಡಾ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:04 pm, Wed, 10 July 24