AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಂಗ್ಯೂ ಪರೀಕ್ಷೆ: ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು, ಬೆಂಗಳೂರಿನ ಲ್ಯಾಬ್​ಗಳಲ್ಲಿ 10 ಪಟ್ಟು ದರ ವಸೂಲಿ

ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾದ ಬೆನ್ನಲ್ಲೇ ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಬೆಂಗಳೂರಿನಲ್ಲಿ ಲ್ಯಾಬ್​ಗಳು ಇದನ್ನು ಉಲ್ಲಂಘಿಸಿ ಎರಡರಿಂದ ಹತ್ತು ಪಟ್ಟು ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವುದು ತಿಳಿದುಬಂದಿದೆ. ಬೆಂಗಳೂರಿನ ಯಾವ ಪ್ರದೇಶದಲ್ಲಿ ಡೆಂಗ್ಯೂ ಪರೀಕ್ಷೆಗೆ ಎಷ್ಟು ದರ ಪಡೆಯಲಾಗುತ್ತಿದೆ ಎಂಬ ವಿವರ ಇಲ್ಲಿದೆ.

ಡೆಂಗ್ಯೂ ಪರೀಕ್ಷೆ: ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು, ಬೆಂಗಳೂರಿನ ಲ್ಯಾಬ್​ಗಳಲ್ಲಿ 10 ಪಟ್ಟು ದರ ವಸೂಲಿ
ಡೆಂಗ್ಯೂ ಪರೀಕ್ಷೆ: ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು, ಬೆಂಗಳೂರಿನ ಲ್ಯಾಬ್​ಗಳಲ್ಲಿ 10 ಪಟ್ಟು ದರ ವಸೂಲಿ
Ganapathi Sharma
|

Updated on: Jul 10, 2024 | 11:54 AM

Share

ಬೆಂಗಳೂರು, ಜುಲೈ 10: ಕರ್ನಾಟಕದಲ್ಲಿ ಡೆಂಗ್ಯೂ ಪರೀಕ್ಷೆಗೆ ದರ ನಿಗದಿಪಡಿಸಲಾಗಿದ್ದರೂ ಬೆಂಗಳೂರು ನಗರದಾದ್ಯಂತ ಅನೇಕ ಲ್ಯಾಬ್​ಗಳು ನಿಗದಿತ ದರಕ್ಕಿಂತ 2ರಿಂದ 10 ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಿರುವುದು ಗೊತ್ತಾಗಿದೆ. ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳದೊಂದಿಗೆ ಕರ್ನಾಟಕ ಆರೋಗ್ಯ ಇಲಾಖೆಯು ಎನ್​ಎಸ್1 ಆ್ಯಂಟಿಬಾಡಿ ಇಎಲ್​ಐಎಸ್​ಎ ಮತ್ತು ಐಜಿಎಂ ಆ್ಯಂಟಿಬಾಡಿ ಪರೀಕ್ಷೆಗೆ 300 ರೂ. ದರ ನಿಗದಿಪಡಿಸಿತ್ತು. ಎನ್​​ಎಸ್​​​1 ಆ್ಯಂಟಿಬಾಡಿ, ಐಜಿಎಂ ಮತ್ತು ಐ​ಜಿಜಿ ಆ್ಯಂಟಿಬಾಡಿಗಳ ಕ್ಷಿಪ್ರ ಪರೀಕ್ಷೆಗಳಿಗೆ 250 ರೂ. ನಿಗದಿಪಡಿಸಲಾಗಿದೆ.

ಡೆಂಗ್ಯೂಗೆ ಸಂಬಂಧಿಸಿದ ಕ್ಷಿಪ್ರ ಪರೀಕ್ಷೆಯು ಎನ್​ಎಸ್1 ಪ್ರತಿಜನಕ, ಐ​ಜಿಜಿ ಮತ್ತು ಐ​ಜಿಎಂ ಆ್ಯಂಟಿಬಾಡಿಗಳನ್ನು ಪತ್ತೆ ಮಾಡುತ್ತದೆ ಮತ್ತು 1 ರಿಂದ 2 ಗಂಟೆಗಳಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ. ಇಎಲ್​ಐಎಸ್​ಎ ಪರೀಕ್ಷೆಯು ಜಿಜಿಎಂ ಆ್ಯಂಟಿಬಾಡಿಗಳ ಪತ್ತೆಹಚ್ಚುವಿಕೆಯಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ವರದಿ ಬರಲು ಸುಮಾರು 6 ರಿಂದ 8 ಗಂಟೆಗಳು ಅಥವಾ ಹೆಚ್ಚು ಸಮಯ ಬೇಕಾಗುತ್ತದೆ.

ಬಹುತೇಕ ಕೇಂದ್ರಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ಸಾಮಾನ್ಯವಾಗಿ 500 ರಿಂದ 1000 ರೂ. ತಗಲುತ್ತದೆ. ಇದಕ್ಕೆ ಸರ್ಕಾರ ದರಗಳನ್ನು ಮಿತಿಗೊಳಿಸಿದ ಸುಮಾರು ಒಂದು ವಾರದ ನಂತರ, ಬೆಂಗಳೂರು ನಗರದಾದ್ಯಂತ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಹೆಚ್ಚಿನ ದರ ವಿಧಿಸುತ್ತಿರುವುದು ತಿಳಿದುಬಂದಿದೆ.

ಶಿವಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊರಮಾವು, ರಾಜಾಜಿನಗರ, ಜಯನಗರ, ಜೆಪಿ ನಗರ, ಕಮ್ಮನಹಳ್ಳಿ, ವೈಟ್‌ಫೀಲ್ಡ್, ಕಸ್ತೂರಿ ನಗರ, ಮತ್ತು ಆರ್‌ಆರ್‌ನಗರದಂತಹ ಪ್ರದೇಶಗಳ ಪ್ರಮುಖ ಲ್ಯಾಬ್‌ಗಳಿಗೆ ಕರೆ ಮಾಡಿದಾಗ ಹೆಚ್ಚು ದರ ವಿಧಿಸುತ್ತಿರುವುದು ತಿಳಿದುಬಂದಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಕ್ಷಿಪ್ರ ಪರೀಕ್ಷೆಗಳಿಗೆ ದರಗಳು 250 ರಿಂದ 1,500 ರೂ. ವರೆಗೆ ಮತ್ತು ಇಎಲ್​ಐಎಸ್​ಎ ಪರೀಕ್ಷೆ ದರವು 1,200 ರೂ. ನಿಂದ ಆರಂಭವಾಗಿ 3,000 ರೂ.ವರೆಗೆ ಶುಲ್ಕ ವಿಧಿಸುತ್ತಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಒಂದೇ ದಿನ ಬೆಂಗಳೂರಿನಲ್ಲಿ 91 ಡೆಂಗ್ಯೂ ಪ್ರಕರಣ ಪತ್ತೆ; ಶಿವಮೊಗ್ಗದಲ್ಲಿ ಮಹಿಳೆ ಸಾವು

ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಕೇಂದ್ರವೊಂದರಲ್ಲಿ 3,000 ರೂ. ಶುಲ್ಕ ವಿಧಿಸುವುದು ತಿಳಿದುಬಂದಿದೆ. ಇದು ಸರ್ಕಾರ ನಿಗದಿಪಡಿಸಿದ ದರಕ್ಕಿಂತ 10 ಪಟ್ಟು ಹೆಚ್ಚಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ