ಬೆಂಗಳೂರು, ಸೆಪ್ಟೆಂಬರ್ 27: ಮುಡಾ ಹಗರಣದಲ್ಲಿ ಲೋಕಾಯುಕ್ತ ಸುಳಿಗೆ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ದಿನ ದಿನಕ್ಕೂ ಆತಂಕ ಹೆಚ್ಚಾಗುತ್ತಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹಿನ್ನೆಲೆ, ಎಫ್ಐಆರ್ ದಾಖಲಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಲೋಕಾಯುಕ್ತ ಐಜಿಪಿ, ಎಡಿಜಿಪಿ, ಮೈಸೂರು ಲೋಕಾಯುಕ್ತ ಎಸ್‌ಪಿ ಗುರುವಾರ ಸಿಎಂ ವಿರುದ್ಧ ಮುಂದಿನ ಹಂತದ ತನಿಖೆ ಬಗ್ಗೆ ಸಭೆ ನಡೆಸಿದ್ದಾರೆ. ಸಭೆ ಬಳಿಕ ಲೋಕಾಯುಕ್ತ ಮೈಸೂರು ಎಸ್‌ಪಿ ಉದೇಶ್ ಅವ್ರು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಆದೇಶ ಪ್ರತಿ ಪಡೆದಿದ್ದಾರೆ.
ಇಂದು ಯಾವುದೇ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ. ಎಫ್ಐಆರ್ನಲ್ಲಿ ಸಿಎಂ ಸಿದ್ದರಾಮಯ್ಯ A1 (ಆರೋಪಿ ನಂಬರ್ 1) ಆಗುವ ಸಾಧ್ಯತೆ ಇದೆ. ಮತ್ತೊಂದೆಡೆ ಎಫ್ಐಆರ್ ದಾಖಲಿಸಲು ವಿಳಂಬವಾಗುತ್ತಿದೆ ಎಂದು ಆರೋಪಿಸಿದ ದೂರುದಾರ ಸ್ನೇಹಮಯಿ ಕೃಷ್ಣ, ಎಸ್‌ಪಿ ವಿರುದ್ಧವೇ ದೂರು ನೀಡಿದ್ದಾರೆ.
ಕೋಳಿವಾಡ ಹೇಳಿಕೆ ಹೊತ್ತಿಸಿದ ಕಿಡಿ
ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್‌ನಾಯಕ ಕೆಬಿ ಕೋಳಿವಾಡ ಹೇಳಿದ್ದರು. ಈ ಮಾತು ಪಕ್ಷದೊಳಗೆ ಕಿಡಿ ಹೊತ್ತಿಸಿದೆ.
ಸಿಎಂ ಬೆನ್ನಿಗೆ ನಿಂತಿರೋ ಡಿಸಿಎಂ ಡಿಕೆ ಶಿವಕುಮಾರ್, ಕೋಳಿವಾಡ ಏನು ಶಿಸ್ತು ಸಮಿತಿ ಅಧ್ಯಕ್ಷರಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಇನ್ನು ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಕೆ.ಬಿ.ಕೋಳಿವಾಡಗೆ ತಲೆಕೆಟ್ಟಿದೆ ಎಂದರೆ, ಕೋಳಿವಾಡ ರಾಜಕೀಯ ಕ್ಷೇತ್ರದಲ್ಲಿ ಇಲ್ಲ ಎಂದು ದಿನೇಶ್ ಗುಂಡೂರಾವ್ ಟಾಂಗ್ ಕೊಟ್ಟಿದ್ದಾರೆ.
ಸಿಎಂ ರಾಜೀನಾಮೆಗೆ ಒತ್ತಾಯಿಸಿ ನಿನ್ನೆ ವಿಧಾನಸೌಧ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಸಿದ್ದರಾಮಯ್ಯ ರಾಜೀನಾಮೆ ಕೊಡೋವರೆಗೂ ಬಿಡಲ್ಲ ಎಂದು ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.
ಸಿಎಂ ಹುದ್ದೆಯಲ್ಲಿ ಇದ್ದು ಸಿದ್ದರಾಮಯ್ಯ ತನಿಖೆ ಎದುರಿಸೋದು ಸರಿ ಅಲ್ಲ ಅಂದಿರುವ ಯತ್ನಾಳ್, ರಾಜಕೀಯ ಜಡ್ಜ್‌ಮೆಂಟ್ ಎಂದ ಜಮೀರ್ ಅಹ್ಮದ್ ತಲೆಯಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಪಕ್ಷವನ್ನು ಬೆತ್ತಲೆ ಮಾಡುವ ಮೊದಲು ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯಗೆ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಕಾಂಗ್ರೆಸ್ ನಾಯಕರ ಕೆರಳಿಸಿದ ಕೋಳಿವಾಡ ಹೇಳಿಕೆ! ಸಿಎಂ, ಡಿಸಿಎಂ ಹೇಳಿದ್ದೇನು?
ಮೈಸೂರಿನ ಜಿಲ್ಲಾ ಪಂಚಾಯ್ತಿ ಆವರಣದಲ್ಲಿಂದು ಸಿಎಂ ಕೆಡಿಪಿ ಸಭೆ ನಡೆಸಲಿದ್ದಾರೆ. ಆದರೆ ಈ ಸಭೆಗೆ ಮುತ್ತಿಗೆ ಹಾಕಲು, ಸಿಎಂ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶಿಸಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಮತ್ತೊಂದೆಡೆ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿಲು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಸಭೆ ಕರೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ