AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಕಾಂಗ್ರೆಸ್ ನಾಯಕರ ಕೆರಳಿಸಿದ ಕೋಳಿವಾಡ ಹೇಳಿಕೆ! ಸಿಎಂ, ಡಿಸಿಎಂ ಹೇಳಿದ್ದೇನು?

ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಹೇಳಿರುವುದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಯಾರು ಏನಂದರು ಎಂಬ ವಿವರ ತಿಳಿಯಲು ಮುಂದೆ ಓದಿ.

ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಕಾಂಗ್ರೆಸ್ ನಾಯಕರ ಕೆರಳಿಸಿದ ಕೋಳಿವಾಡ ಹೇಳಿಕೆ! ಸಿಎಂ, ಡಿಸಿಎಂ ಹೇಳಿದ್ದೇನು?
ಮಾಜಿ ಸ್ಪೀಕರ್ ಕೆಬಿ ಕೋಳಿವಾಡ
Ganapathi Sharma
|

Updated on: Sep 26, 2024 | 2:41 PM

Share

ಬೆಂಗಳೂರು, ಸೆಪ್ಟೆಂಬರ್ 26: ಮುಡಾ ಹಗರಣದಲ್ಲಿ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ಕೋರ್ಟ್​ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿವೆ. ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿವೆ. ಈ ಮಧ್ಯೆ ಕಾಂಗ್ರೆಸ್​ನವರೇ ಆದ ಮಾಜಿ ಸ್ಪೀಕರ್ ಕೆಬಿ ಕೋಳಿವಾಡ, ಪಕ್ಷದ ಹಿತದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್​​ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ.

ಕೆಬಿ ಕೋಳಿವಾಡ ಹೇಳಿದ್ದೇನು?

‘ಟಿವಿ9’ ಜತೆ ಮಾತನಾಡಿರುವ ಕೆಬಿ ಕೋಳಿವಾಡ, ಸಿಎಂ ಸಿದ್ದರಾಮಯ್ಯ ಎಷ್ಟೇ ಕಳಂಕ ರಹಿತರಾದರೂ ಪಕ್ಷದ ದೃಷ್ಟಿಯಿಂದ ರಾಜೀನಾಮೆ ನೀಡಲಿ. ನಿಷ್ಕಳಂಕರಾಗಿ ಹೊರಬಂದ ಬಳಿಕ ಮತ್ತೆ ಸಿಎಂ ಆಗಲಿ. ಸಿಎಂ ಸಿದ್ದರಾಮಯ್ಯ ಜೊತೆ ಪಕ್ಷದ 136 ಶಾಸಕರು ಇದ್ದಾರೆ. ಪಕ್ಷದ ದೃಷ್ಟಿಯಿಂದ ರಾಜೀನಾಮೆ ನೀಡಿ ನಿಷ್ಕಳಂಕರಾಗಲಿ ಎಂದಿದ್ದಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಬಿಜೆಪಿಯವರು ಕಾಂಗ್ರೆಸ್​ಗೆ ಮುಜುಗರ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ವಿಚಾರದಲ್ಲಿ ಪಕ್ಷಕ್ಕೆ ಮುಜುಗರವುಂಟು ಮಾಡುತ್ತಿದ್ದಾರೆ. ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಅನೇಕ ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಆ ಪೈಕಿ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ ನಂಬರ್ 1 ಸಿಎಂ ಸಿದ್ದರಾಮಯ್ಯ. ಬಿಜೆಪಿ ಈಗ ಪರಿಸ್ಥಿತಿಯ ದುರ್ಬಳಕೆ ಮಾಡುವ ಕೆಲಸ ಮಾಡುತ್ತಿದೆ. ಪಕ್ಷವನ್ನು ಮುಜುಗರಕ್ಕೀಡು ಮಾಡುವ ಕುತಂತ್ರವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಕೋಳಿವಾಡ ಹೇಳಿದ್ದಾರೆ.

ರಾಜೀನಾಮೆ ಇಲ್ಲ: ಡಿಕೆಶಿ ಖಡಕ್ ಪ್ರತಿಕ್ರಿಯೆ

ಕೋಳಿವಾಡ ಹೇಳಿಕೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ. ನಾನು ಹೇಳುತ್ತೇನೆ, ಮುಖ್ಯಮಂತ್ರಿ ಅವರು ರಾಜೀನಾಮೆ ನೀಡುವ ಪ್ರಸ್ತಾವವೇ ಇಲ್ಲ. ಇದು ಬಿಜೆಪಿ ಜೆಡಿಎಸ್ ಷಡ್ಯಂತ್ರ ಅಷ್ಟೆ. ಐದು ಗ್ಯಾರಂಟಿ ಯೋಜನೆಗಳು ಹಾಗೂ ಕಾಂಗ್ರೆಸ್ ಬೆಳವಣಿಗೆ ವಿರೋಧ ಪಕ್ಷಗಳಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದಿಂದ ಇದ್ದಾರೆ. ರಾಜೀನಾಮೆ ನೀಡುವ ಪ್ರಸಂಗ ಬರಲ್ಲ. ದೆಹಲಿಯಿಂದ ಹಳ್ಳಿಯವರೆಗೂ ಸಿಎಂ ಪರ ಇದ್ದೇವೆ. ಪ್ರಧಾನಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ. ಅವರ ಕಳಂಕಿತ ಮಂತ್ರಿಗಳನ್ನು ಕ್ಯಾಬಿನೆಟ್​​ನಲ್ಲಿ ಯಾಕೆ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಏನಂದರು?

ಹಿರಿಯ ನಾಯಕ ಕೋಳಿವಾಡ ಅವರ ಅಭಿಪ್ರಾಯ ಹೇಳಿದ್ದಾರೆ. ಹಾಗೆಂದು ನಾನು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್: ಹೆಚ್​ಡಿ ಕುಮಾರಸ್ವಾಮಿ ಅಚ್ಚರಿಯ ಪ್ರತಿಕ್ರಿಯೆ

ಗೋಧ್ರಾ ಗಲಭೆ ಪ್ರಕರಣದಲ್ಲಿ ಆಗ ಸಿಎಂ ಆಗಿದ್ದ ಪ್ರಧಾನಿ ಮೋದಿ ರಾಜೀನಾಮೆ ನೀಡಿದ್ದರೇ? ಹೆಚ್​ಡಿ ಕುಮಾರಸ್ವಾಮಿ ನರೇಂದ್ರ ಮೋದಿ ಸರ್ಕಾರದಲ್ಲಿ ಇದ್ದಾರಲ್ಲವೇ? ಅವರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ತಾನೇ, ಅವರು ರಾಜೀನಾಮೆ ಕೊಟ್ಟಿದ್ದಾರೆಯೇ? ಇಲ್ಲವಲ್ಲ. ಹಾಗೆಯೇ ನಾನು ಕೂಡ ರಾಜೀನಾಮೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ