ಮುಡಾ ಹಗರಣ: ಹೈಕೋರ್ಟ್ ತೀರ್ಪು ಬೆನ್ನಲ್ಲೇ ಜನಪ್ರತಿನಿಧಿಗಳ ಕೋರ್ಟ್​​ನಲ್ಲಿ ಮುಂದಿನ ಪ್ರಕ್ರಿಯೆ ಏನು?

| Updated By: ರಮೇಶ್ ಬಿ. ಜವಳಗೇರಾ

Updated on: Sep 24, 2024 | 4:06 PM

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ. ಈ ಮೂಲಕ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ ಅನುಮತಿ ಆದೇಶವನ್ನು ಎತ್ತಿ ಹಿಡಿದಿದೆ. ಮತ್ತೊಂದೆಡೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಮುಂದಿನ ಪ್ರಕ್ರಿಯೆ ಹೇಗಿರಲಿದೆ? ಎನ್ನುವ ವಿವರ ಇಲ್ಲಿದೆ.

ಮುಡಾ ಹಗರಣ: ಹೈಕೋರ್ಟ್ ತೀರ್ಪು ಬೆನ್ನಲ್ಲೇ ಜನಪ್ರತಿನಿಧಿಗಳ ಕೋರ್ಟ್​​ನಲ್ಲಿ ಮುಂದಿನ ಪ್ರಕ್ರಿಯೆ ಏನು?
ಸಿದ್ದರಾಮಯ್ಯ
Follow us on

ಬೆಂಗಳೂರು, (ಸೆಪ್ಟೆಂಬರ್ 24): ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕೋರ್ಟ್​ನಲ್ಲಿ ಹಿನ್ನಡೆ ಆಗಿದೆ. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್​​ಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಪ್ರಕರಣದ ಬಗ್ಗೆ ತನಿಖೆ ಆಗಬೇಕು ಎಂದು ಹೈಕೋರ್ಟ್​ ಹೇಳಿದೆ. ಇದರ ಬೆನ್ನಲ್ಲೇ ಮತ್ತೊಂದೆಡೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಖಾಸಗಿ ದೂರಿನ ವಿಚಾರಣೆ ನಾಳೆಗೆ (ಸೆಪ್ಟೆಂಬರ್ 24) ನಿಗದಿಯಾಗಿದೆ.  ಈ ಹಿನ್ನೆಲೆಯಲ್ಲಿ ದೂರುದಾರರಾದ ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಾಹಂ ಹೈಕೋರ್ಟ್ ನ ತೀರ್ಪಿನ ಪ್ರತಿ ಹಿಡಿದು ಜನಪ್ರತಿನಿಧಿಗಳ ಕೋರ್ಟ್ ಮೆಟ್ಟಿಲೇರಿದ್ದು, ತನಿಖೆಗೆ ಆದೇಶ ನೀಡುವಂತೆ ಮನವಿ ಮಾಡಲು ಸಿದ್ಧತೆ ನಡೆಸಿದ್ದಾರೆ.

ಇದೇ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ  ಅವರು ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್​ಗೆ ಖಾಸಗಿ ದೂರು ದಾಖಲಿಸಿದ್ದರು. ಇನ್ನೇನು ವಿಚಾರಣೆ ನಡೆಯುವ ಸಮಯಕ್ಕೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಸಿಎಂ ಹೈಕೋರ್ಟ್​ ಮೆಟ್ಟಿಲೇರಿದ್ದರು. ಹೀಗಾಗಿ ಹೈಕೋರ್ಟ್​, ಜನಪ್ರತಿನಿಧಿಗಳ ಕೋರ್ಟ್​ ವಿಚಾರಣೆಗೆ ತಡೆ ನೀಡುವಂತೆ ಸೂಚಿಸಿತ್ತು. ಈಗ ಹೈಹೈಕೋರ್ಟ್​ ತೀರ್ಪು ಪ್ರಕಟಿಸಿದೆ.

ಇದನ್ನೂ ಓದಿ: ಮುಡಾ ಹಗರಣ: ಹೈಕೋರ್ಟ್​ನಲ್ಲಿ ಪರ ಅಥವಾ ವಿರುದ್ಧ ತೀರ್ಪು ಬಂದರೆ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ವಿವರ

ಇದೀಗ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ.ಅಬ್ರಹಾಂ ಅವರು ಹೈಕೋರ್ಟ್​ ಆದೇಶದ ಪ್ರತಿಯೊಂದಿಗೆ ಖಾಸಗಿ ದೂರಿನ ವಿಚಾರಣೆಗೆ ಮನವಿ ಮಾಡಲಿದ್ದು, ನಾಳೆ(ಬುಧವಾರ) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಕೋ್ಟ್​, ವಿಚಾರಣೆ ಮತ್ತೆ ಮುಂದೂಡಬಹುದು. ಇಲ್ಲ ಹೈಕೋರ್ಟ್​ನ ಆದೇಶವನ್ನು ಗಮನಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಹ ತನಿಖೆಗೆ ಆದೇಶ ನೀಡಬಹುದು. ಅಥವಾ ಆದೇಶವನ್ನು ಕಾಯ್ಯಿರಿಸಬಹುದು.

ಒಂದು ವೇಳೆ ಜನಪ್ರತಿನಿಧಿಗಳ ನ್ಯಾಯಾಲಯವು ದೂರುದಾರರ ಅರ್ಜಿ ಆಧರಿಸಿ  ತನಿಖೆಗೆ ಆದೇಶ ನೀಡಿದರೆ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಾಗಲಿದೆ. ಅಲ್ಲದೇ ಲೋಕಾಯುಕ್ತ ಇಲ್ಲವೇ ಎಸ್‌ಐಟಿಯಿಂದ ಈ ಕುರಿತು ವಿಚಾರಣೆಗೂ ಸೂಚನೆ ನೀಡಬಹುದು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಜನಪ್ರತಿನಿಧಿ ಕೋರ್ಟ್​ ವಿಚಾರಣೆಗೆ ತಡೆ ನೀಡಿದ್ದ ಹೈಕೋರ್ಟ್​

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ನೇಹಮಯಿ ಕೃಷ್ಣ ಎಂಬುವವರು ಜನಪ್ರತಿನಿಧಿಗಳ ಕೋರ್ಟ್​​ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಇದನ್ನು ವಿಚಾರಣೆಗೆ ನಡೆಸಬೇಕೋ ಬೇಡ್ವಾ ಎನ್ನುವ ಆದೇಶ ಕಾಯ್ದಿರಿಸಿ​ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿತ್ತು. ಅಷ್ಟರಲ್ಲಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಅನುಮತಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​, ಜನಪ್ರತಿನಿಧಿಗಳ ಕೋರ್ಟ್​ನಲ್ಲಿನ ವಿಚಾರಣೆಗೆ ತಡೆ ನೀಡಿತ್ತು. ಆದ್ರೆ, ಇದೀಗ ಹೈಕೋರ್ಟ್​ ಸಿದ್ದರಾಮಯ್ಯನವರ ಅರ್ಜಿ ವಜಾ ಮಾಡಿದ್ದು, ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದೆ. ಇದರಿಂದ ಇತ್ತ ಜನಪ್ರತಿನಿಧಿಗಳ ಕೋರ್ಟ್​ ಸಹ ಖಾಸಗಿ ದೂರಿನ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಇನ್ನು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಎಫ್‌ಐಆರ್‌ ದಾಖಲು ಮಾಡಲು ಆದೇಶ ಆದರೆ ಅಲ್ಲಿಯೂ ಸಿದ್ದರಾಮಯ್ಯ ಅವರು ಕಾನೂನು ಹೋರಾಟ ಮಾಡುವ ಸನ್ನಿವೇಶಗಳು ಎದುರಾಗಬಹುದು. ಹೀಗಾಗಿ ಜನಪ್ರತಿನಿಧಿ ನೀಡುವ ಆದೇಶದ ಮೇಲೆ ಸಿಎಂ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಹೈಕೋರ್ಟ್​ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದ್ದರಿಂದ ಈಗಾಗಲೇ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಡ ಜೋರಾಗಿಯೇ ಇದೆ. ಒಂದು ವೇಳೆ ಜನಪ್ರತಿನಿಧಿಗಳ ಕೋರ್ಟ್​ ಸಹ ತನಿಖೆಗೆ ಆದೇಶ ನೀಡಿದರೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಇದನ್ನು ಇನ್ನಷ್ಟು ತೀವ್ರಗೊಳಿಸಬಹುದು. ಹೋರಾಟವನ್ನೂ ಆರಂಭಿಸಬಹುದು.

ಇನ್ನು ಕಾಂಗ್ರೆಸ್‌ನಲ್ಲಿಯೂ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಲು ಈಗಾಗಲೇ ಸದ್ದಿಲ್ಲದೇ ಪ್ರಯತ್ನಗಳು ನಡೆದಿವೆ. ಇದು ಒಳಗೊಳಗೆ ಇನ್ನಷ್ಟು ತೀವ್ರಗೊಳ್ಳಬಹುದು. ಇದಕ್ಕಾಗಿ ಸಭೆಗಳು ನಡೆಯಬಹುದು. ಈಗಾಗಲೇ ಸಿಎಂ ಸ್ಥಾನದ ಆಕಾಂಕ್ಷಿಗಳು ಮಾತನಾಡುತ್ತಿದ್ದು. ಇದು ಇನ್ನಷ್ಟು ತೀವ್ರವೂ ಆಗಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ