ಮುಡಾ ಹಗರಣ: ಹೈಕೋರ್ಟ್​ನಲ್ಲಿ ಪರ ಅಥವಾ ವಿರುದ್ಧ ತೀರ್ಪು ಬಂದರೆ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ವಿವರ

ಕರ್ನಾಟಕ ರಾಜಕೀಯದಲ್ಲಿ, ಅದರಲ್ಲೂ ಕಾಂಗ್ರೆಸ್ ಪಾಳಯದಲ್ಲಿ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ. ಏನಾಗುತ್ತದೆಯೋ ಏನೋ ಎಂಬ ಆತಂಕ ಕವಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಗ್ನಿಪರೀಕ್ಷೆ ಎದುರಾಗಿದ್ದು, ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ನೀಡಿರುವ ಅನುಮತಿ ಕುರಿತಾದ ಹೈಕೋರ್ಟ್ ತೀರ್ಪು ಪ್ರಕಟವಾಗಲಿದೆ.

ಮುಡಾ ಹಗರಣ: ಹೈಕೋರ್ಟ್​ನಲ್ಲಿ ಪರ ಅಥವಾ ವಿರುದ್ಧ ತೀರ್ಪು ಬಂದರೆ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ವಿವರ
ಹೈಕೋರ್ಟ್ & ಸಿಎಂ ಸಿದ್ದರಾಮಯ್ಯ
Follow us
| Updated By: ಗಣಪತಿ ಶರ್ಮ

Updated on: Sep 24, 2024 | 6:28 AM

ಬೆಂಗಳೂರು, ಸೆಪ್ಟೆಂಬರ್ 24: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಸುಳಿಗೆ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ಇವತ್ತು ಅಕ್ಷರಶಃ ನಿರ್ಣಾಯಕ ದಿನ. ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ತೀರ್ಪು ಪ್ರಕಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಚಿತ್ತ ರಾಜ್ಯಹೈಕೋರ್ಟ್‌ನತ್ತ ನೆಟ್ಟಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಹೈಕೋರ್ಟ್‌ ತೀರ್ಪು

ಸಿದ್ದರಾಮಯ್ಯ ಪತ್ನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಂದ್ರೆ ಮುಡಾದಿಂದ ಅಕ್ರಮವಾಗಿ 14 ಸೈಟ್‌ಗಳನ್ನು ಪಡೆದಿರುವ ಆರೋಪವಿದೆ. ಇದೇ ಪ್ರಕರಣ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದೆ. ಸಾವಿರಾರು ಪುಟಗಳ ದಾಖಲೆ, 6 ದಿನಗಳ ಸುದೀರ್ಘ ವಾದ ಮಂಡನೆ ಆಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತೀರ್ಪು ಪ್ರಕಟಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ತೀರ್ಪು ಪ್ರಕಟಿಸಲಿದೆ.

ಸಿಎಂ ಪರ ತೀರ್ಪು ಬಂದರೆ?

ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದರೆ ಸಿದ್ದರಾಮಯ್ಯ ನಿರಾಳರಾಗಬಹುದು. ಒಂದು ಅರ್ಥದಲ್ಲಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಂತಾಗಲಿದೆ. ಅಷ್ಟೇ ಅಲ್ಲ ರಾಜ್ಯ ರಾಜಕೀಯದಲ್ಲಿ ಮತ್ತು ಸರ್ಕಾರದಲ್ಲಿ ಸಿದ್ದರಾಮಯ್ಯ ಶಕ್ತಿ ಮತ್ತಷ್ಟು ಹೆಚ್ಚಲಿದೆ. ಪಕ್ಷದೊಳಗೆ ಸಿಎಂ ಬದಲಾವಣೆಯ ಕೂಗಿಗೂ ಫುಲ್‌ಸ್ಟಾಪ್ ಬೀಳಲಿದೆ. ಇನ್ನು ಸಿಎಂ ರಾಜೀನಾಮೆಗೆ ಪಟ್ಟುಹಿಡಿದಿರುವ ವಿಪಕ್ಷಗಳಿಗೂ ಹಿನ್ನಡೆಯಾಗಲಿದೆ.

ಸಿಎಂ ವಿರುದ್ಧ ತೀರ್ಪು ಬಂದರೆ?

ಇನ್ನು ಹೈಕೋರ್ಟ್ ರಾಜ್ಯಪಾಲರ ಆದೇಶ ಎತ್ತಿಹಿಡಿದರೆ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ. ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರುಗಳಿಗೆ ಮತ್ತೆ ಜೀವ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸುವ ಸಾಧ್ಯತೆಯಿದೆ. ಒಂದು ವೇಳೆ ಸಿಎಂ ವಿರುದ್ಧ ಎಫ್ಐಆರ್ ದಾಖಲಾದರೆ ರಾಜೀನಾಮೆ ಒತ್ತಡ ಹೆಚ್ಚಾಗಲಿದೆ. ಪ್ರತಿಪಕ್ಷಗಳು ಕೂಡ ಸಿಎಂ ರಾಜೀನಾಮೆಗೆ ಪಟ್ಟು ಹಿಡಿಯಲಿವೆ.

ಸಿಎಂ ಪರ ವಕೀಲರ ವಾದವೇನಿತ್ತು?

  • ಮುಡಾ ಹಗರಣದಲ್ಲಿ ಸಿಎಂ ಪಾತ್ರದ ಬಗ್ಗೆ ರಾಜ್ಯಪಾಲರು ತಿಳಿಸಿಲ್ಲ.
  • ಯಾವುದಾದರೂ ಕಡತಕ್ಕೆ ಸಿಎಂ ಸಹಿ ಹಾಕಿದ್ದಾರೆಯೇ ಹೇಳಿಲ್ಲ.
  • ವಿವೇಚನಾಧಿಕಾರವನ್ನು ವಿಶೇಷ ಸಂದರ್ಭದಲ್ಲಿ ರಾಜ್ಯಪಾಲರು ಬಳಸಬೇಕು.
  • ಪ್ರಕ್ರಿಯೆ ಪಾಲಿಸದೇ ತರಾತುರಿಯಲ್ಲಿ ರಾಜ್ಯಪಾಲರಿಂದ ಆದೇಶವಾಗಿದೆ.
  • ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿಯಲ್ಲಿ ಅನುಮತಿ.
  • ಪೊಲೀಸ್ ಅಧಿಕಾರಿಗಳಿಗೆ ಅನುಮತಿ ನೀಡಬಹುದೇ ಹೊರತು ಖಾಸಗಿ ವ್ಯಕ್ತಿಗಳಿಗೆ ಅನುಮತಿ ನೀಡುವಂತಿಲ್ಲ.
  • ಸಚಿವ ಸಂಪುಟದ ಶಿಫಾರಸ್ಸನ್ನು ರಾಜ್ಯಪಾಲರು ಒಪ್ಪಬೇಕಿತ್ತು.
  • ಏಕೆ ಒಪ್ಪಿಲ್ಲವೆಂಬುದಕ್ಕೆ ರಾಜ್ಯಪಾಲರು ಸೂಕ್ತ ಕಾರಣ ನೀಡಿಲ್ಲ.
  • ಬಿಜೆಪಿ, ಜೆಡಿಎಸ್ ನಾಯಕ ವಿರುದ್ಧದ ದೂರಿಗೆ ಅನುಮತಿ ನೀಡಿಲ್ಲ.
  • ಕೇವಲ ಸಿದ್ದರಾಮಯ್ಯ ವಿರುದ್ಧ ಮಾತ್ರ ಅನುಮತಿ ನೀಡಿದ್ದಾರೆ.
  • ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾನೂನುಬಾಹಿರ.

ತುಷಾರ್ ಮೆಹ್ತಾ ವಾದವೇನಿತ್ತು?

ಸೆಕ್ಷನ್ 17 ಎ ಅಡಿಯಲ್ಲಿ ರಾಜ್ಯಪಾಲರು ಮೇಲ್ನೋಟಕ್ಕೆ ಅಪರಾಧದ ಅಂಶಗಳಿವೆಯೇ ಎಂಬುದನ್ನಷ್ಟೇ ನೋಡಬೇಕು. ರಾಜ್ಯಪಾಲರು ತೀರ್ಪು ನೀಡುತ್ತಿಲ್ಲ, ತನಿಖೆಗೆ ಅನುಮತಿಯನ್ನಷ್ಟೇ ನೀಡುತ್ತಿರುವುದರಿಂದ ವಿವರವಾದ ಕಾರಣಗಳನ್ನು ಕೊಡಬೇಕಿಲ್ಲ. ಕೊಟ್ಟರೆ ತನಿಖಾಧಿಕಾರಿ ಮೇಲೆ ಪ್ರಭಾವವಾಗುವ ಸಾಧ್ಯತೆ ಇರುತ್ತದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿ ಖಾಸಗಿ ದೂರುದಾರರು ಕೂಡಾ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಬಹುದು. ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಸಚಿವ ಸಂಪುಟದ ಶಿಫಾರಸು ಒಪ್ಪದೇ ಇರಲು ರಾಜ್ಯಪಾಲರು ಕಾರಣ ಕೊಟ್ಟಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದ ಸಿಎಂ ವಿರುದ್ಧವೇ ಸಚಿವ ಸಂಪುಟ ನಿರ್ಣಯ ಕೈಗೊಳ್ಳುವುದೆಂದು ರಾಜ್ಯಪಾಲರು ಭಾವಿಸುವಂತಿಲ್ಲ. ರಾಜ್ಯಪಾಲರು ದೂರಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಡತಗಳನ್ನೂ ಅಧ್ಯಯನ ಮಾಡಿಯೇ ಅನುಮತಿ ನೀಡಿದ್ದಾರೆ. ಹೀಗಾಗಿ ರಾಜ್ಯಪಾಲರ ಆದೇಶ ಸಮರ್ಪಕವಾಗಿದೆ ಎಂದು ತುಷಾರ್ ಮೆಹ್ತಾ ಹೀಗಂತಾ ವಾದ ಮುಂದಿಟ್ಟಿದ್ದರು.

ಸರ್ಕಾರ ಬಿದ್ದರೂ ಸಹ ಆಶ್ಚರ್ಯ ಪಡಬೇಕಿಲ್ಲ: ವಿಜಯೇಂದ್ರ

ಸಿದ್ದರಾಯ್ಯ ಯಾವ ರಾಜೀನಾಮೆ ಕೊಡುತ್ತಾರೆ ಎಂದು ಕಾಂಗ್ರೆಸ್‌ನವರೇ ಕಾಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬಿದ್ದರೂ ಸಹ ಅಚ್ಚರಿ ಪಡಬೇಕಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲರ ನಡೆ ವಿರುದ್ದ ಕೈ ಪಡೆ ಕೆಂಡಾಮಂಡಲ: ರಾಷ್ಟ್ರಪತಿಗೆ ದೂರು ನೀಡಲು ಚಿಂತನೆ!

ಒಟ್ಟಾರೆ ಇಂದು ಹೈಕೋರ್ಟ್ ನೀಡುವ ತೀರ್ಪು ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧರಿಸಲಿದೆ. ರಾಜ್ಯ ರಾಜಕೀಯದ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆಯೂ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ