ಬೆಳಗಾವಿ, ಏಪ್ರಿಲ್ 08: ಲೋಕಸಭಾ ಚುನಾವಣೆ (Lok Sabha Elections) ಹತ್ತಿರವಾಗುತ್ತಿದ್ದು, ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇತ್ತ ರಾಜ್ಯದಲ್ಲಿ ಪ್ರತಿಯೊಂದು ಪಕ್ಷಗಳು ಕೂಡ ಅಬ್ಬರದ ಪ್ರಚಾರ ನಡೆಸಿವೆ. ರಾಜಕಾರಣಿಗಳು ತಮ್ಮ ತಮ್ಮ ಭಾಷಣದಲ್ಲಿ ಆರೋಪ ಪ್ರತ್ಯಾರೋಪಗಳು ಮಾಡುವುದು ಸಹಜ. ಆದರೆ ಇದೀಗ ಕೆಲ ನಾಯಕರು ವೈಯಕ್ತಿಕವಾಗಿ ಆರೋಪಗಳಿಗೆ ಇಳಿದಿದ್ದಾರೆ. ಅದರಲ್ಲೂ ಜಾತಿ ವಿಚಾರವಾಗಿ ಆರೋಪ ಮಾಡುತ್ತಿದ್ದಾರೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಜಾತಿ ವಿಚಾರವಾಗಿ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಟಿವಿ9 ಜೊತೆ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ ಬಣಜಿಗ ಸಮುದಾಯದವರು. ವಿವಾಹ ಪೂರ್ವದಲ್ಲಿ ಲಕ್ಷ್ಮೀ ಹಟ್ಟಿಹೊಳಿ ಆಗಿದ್ದರು, ಆಗ ಪಂಚಮಸಾಲಿ. ರವೀಂದ್ರ ಹೆಬ್ಬಾಳ್ಕರ್ರನ್ನು ಮದುವೆಯಾದ ಬಳಿಕ ಲಕ್ಷ್ಮೀ ಬಣಜಿಗ ಆದರು. ಹೆಬ್ಬಾಳ್ಕರ್ ಬಣಜಿಗ ಆದ ಮೇಲೆ ಮೃಣಾಲ್ ಕೂಡ ಬಣಜಿಗ ಆಗ್ತಾರೆ. ಮೃಣಾಲ್ ಹೆಬ್ಬಾಳ್ಕರ್ ಯಾವುದೇ ಕಾರಣಕ್ಕೂ ಪಂಚಮಸಾಲಿ ಅಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಸಾಹುಕಾರ್ ಸೈಲೆಂಟ್: ಮೌನವಾಗಿಯೇ ಮೃಣಾಲ್ ಸೋಲಿಸಲು ರಮೇಶ್ ಜಾರಕಿಹೊಳಿ ತಂತ್ರ
ಲಕ್ಷ್ಮೀ ಹೆಬ್ಬಾಳ್ಕರ್ ರಾಣಿ ಚೆನ್ನಮ್ಮ ಜತೆ ಹೋಲಿಸುವುದು ಸರಿಯಲ್ಲ. ಚೆನ್ನಮ್ಮಗೆ ವಿಶೇಷ ಸ್ಥಾನಮಾನ ಇದೆ, ಬ್ರಿಟಿಷರನ್ನ ಸದೆಬಡೆದವರು ಚೆನ್ನಮ್ಮ. ಒಂದು ವರ್ಷವಾದ್ರೂ ಸಮುದಾಯಕ್ಕೆ ಯಾಕೆ ಮೀಸಲಾತಿ ಕೊಡಿಸಲಿಲ್ಲ. ನಿಜವಾದ ಪಂಚಮಸಾಲಿ ಆಗಿದ್ದರೆ ಸಿಎಂಗೆ ಹೇಳಿ ಮಾಡಿಸಿ ಕೊಡುತ್ತಿದ್ದರು. 2ಎ ಮೀಸಲಾತಿ ಕೊಡಿಸಿದ್ರೆ 1 ಕೆಜಿ ಚಿನ್ನಾಭರಣ ನೀಡಿ ಸನ್ಮಾನ ಮಾಡ್ತೀನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೋಕಾಕ್ಗೆ ಹೆಬ್ಬಾಳ್ಕರ್ ಎಂಟ್ರಿ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಅಲರ್ಟ್: ಶೆಟ್ಟರ್ ಜತೆ ಸಮಾಲೋಚನೆ
ನಮ್ಮ ಸರ್ಕಾರ ಬಂದರೆ ಕೇವಲ ಮೂರು ತಿಂಗಳಲ್ಲಿ ಮೀಸಲಾತಿ ಮಾಡಿಕೊಡ್ತೇನಿ ಅಂದಿದ್ದರು. ಒಂದು ವರ್ಷ ಆದ್ರೂ ಯಾಕೆ ಮೀಸಲಾತಿ ಮಾಡಿಸಿ ಕೊಡಲಿಲ್ಲ. ಜಗದೀಶ್ ಶೆಟ್ಟರ್ ಅವರು ಹೊರಗಿನವರು ಅಂತಾ ಹೇಳುತ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಯವರು ಅಲ್ಲಾ ಹೊರಗಿನವರು ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.