AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಿಧ ಮಠ, ಟ್ರಸ್ಟ್, ದೇಗುಲ​ಗಳಿಗೆ ಕರ್ನಾಟಕ ಸರ್ಕಾರದಿಂದ ಒಟ್ಟು 143 ಕೋಟಿ ಅನುದಾನ ಬಿಡುಗಡೆ

ಈ ಪಟ್ಟಿಯಲ್ಲಿ 178 ಮಠಗಳು, 59 ದೇವಸ್ಥಾನಗಳು, 26 ಸಂಘ-ಸಂಸ್ಥೆಗಳು ಸೇರಿವೆ. ಸಮಾಜಮುಖಿ ಚಟುವಟಿಕೆಗಳು, ಅಭಿವೃದ್ಧಿ, ಜೀರ್ಣೋದ್ಧಾರ ಕಾರ್ಯಗಳಿಗೆ ಈ ಹಣ ಬಳಸಿಕೊಳ್ಳಲು ಅವಕಾಶವಿದೆ.

ವಿವಿಧ ಮಠ, ಟ್ರಸ್ಟ್, ದೇಗುಲ​ಗಳಿಗೆ ಕರ್ನಾಟಕ ಸರ್ಕಾರದಿಂದ ಒಟ್ಟು 143 ಕೋಟಿ ಅನುದಾನ ಬಿಡುಗಡೆ
ಮುಜರಾಯಿ ಇಲಾಖೆ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 17, 2022 | 10:19 AM

ಬೆಂಗಳೂರು: ಕರ್ನಾಟಕದ ವಿವಿಧ ಸಮುದಾಯಗಳಿಗೆ ಸೇರಿದ ಮಠಗಳು, ದೇಗುಲ ಹಾಗೂ ಟ್ರಸ್ಟ್​ಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಒಟ್ಟು ₹ 142.59 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ 178 ಮಠಗಳು, 59 ದೇವಸ್ಥಾನಗಳು, 26 ಸಂಘ-ಸಂಸ್ಥೆಗಳು ಸೇರಿವೆ. ಸಮಾಜಮುಖಿ ಚಟುವಟಿಕೆಗಳು, ಅಭಿವೃದ್ಧಿ, ಜೀರ್ಣೋದ್ಧಾರ ಕಾರ್ಯಗಳಿಗೆ ಈ ಹಣ ಬಳಸಿಕೊಳ್ಳಲು ಅವಕಾಶವಿದೆ.

178 ಮಠಗಳಿಗೆ ₹ 108.24 ಕೋಟಿ, 59 ದೇವಸ್ಥಾನಗಳಿಗೆ ₹ 21.35 ಕೋಟಿ, 26 ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್​ಗಳಿಗೆ ₹ 13 ಕೋಟಿ ಅನುದಾನ ಘೋಷಿಸಲಾಗಿದೆ. ಆರ್ಥಿಕ ಇಲಾಖೆಯ ಸಹಮತದ ಮೇರೆಗೆ ಒಟ್ಟು ₹ 148.59 ಕೋಟಿ ಅನುದಾನಕ್ಕೆ ಸರ್ಕಾರವು ಆಡಳಿತಾತ್ಮಕ ಮಂಜೂರಾತಿ ನೀಡಿದೆ.

ಅನುದಾನವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರವು ಕೆಲ ಷರತ್ತುಗಳನ್ನು ವಿಧಿಸಿದೆ. ಅದರಂತೆ ಮಂಜುರಾದ ಅನುದಾನವನ್ನು ‘ಖಜಾನೆ-2’ ಮೂಲಕ ಜಿಲ್ಲಾಧಿಕಾರಿಗಳ ಡಿಡಿಒಒ ಸಂಕೇತಕ್ಕೆ ಅಪ್​ಲೋಡ್ ಮಾಡಬೇಕು. ಸಂಬಂಧಿಸಿದ ಜಿಲ್ಲಾಧಿಕಾರಿಗಳು ತಹಶೀಲ್ದಾರ್​ರ ಮೂಲಕ ನಿಯಮಾನುಸಾರ ಪ್ರಸ್ತಾವನೆ ಪಡೆದು, ಅನುದಾನ ಮಂಜೂರಾತಿಗೆ ಒಪ್ಪಿಗೆ ನೀಡಬೇಕು. ತಹಶೀಲ್ದಾರ್​ ಅವರೇ ಅನುದಾನದ ಮೊತ್ತವನ್ನು ಡ್ರಾ ಮಾಡಿ ಸಂಸ್ಥೆಗಳಿಗೆ ಕೊಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಅನುದಾನ ಪಡೆದುಕೊಂಡ ಸಂಸ್ಥೆಯು ನಿಯಮಾನುಸಾರ ‘ಮುಂಗಡ ರಸೀದಿ’ (Advance Receipt) ಪಡೆದು ಸಾದಿಲ್ವಾರು ಬಿಲ್​ಗೆ ಲಗತ್ತಿಸಿ ಸಂಸ್ಥೆಯ ಹೆಸರಿಗೆ ಖಜಾನೆಯ ಚೆಕ್ ನೀಡಬೇಕು. ಉದ್ದೇಶಿತ ಕಾಮಗಾರಿಗಳ ಅಂದಾಜುಪಟ್ಟಿಗೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಬೇಕು.

ಮಂಜೂರು ಮಾಡಿದ ಅನುದಾನದ ವಿವರಗಳು ಇರುವ ದಾಖಲೆ (Watch Register) ನಿರ್ವಹಿಸಬೇಕು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಮುಜರಾಯಿ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ಅನುದಾನ ಬಳಕೆಯಲ್ಲಿ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಹಾಗೂ ಇತರ ನಿಯಮಗಳು ಅನ್ವಯವಾಗುತ್ತವೆ ಎಂದು ಕಂದಾಯ ಇಲಾಖೆಯ (ಧಾರ್ಮಿಕ ದತ್ತಿ) ಸರ್ಕಾರದ ಕಾರ್ಯದರ್ಶಿ ಎಂ.ಎಲ್.ವರಲಕ್ಷ್ಮೀ ಸರ್ಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Published On - 10:19 am, Wed, 17 August 22