ಬೆಂಗಳೂರು, ಮೇ 04: ಹಾಸನದ ಸಂಸದ ಪ್ರಜ್ವಲ್ ರೇವಣ್ಣ (Prajwal video case) ಅಶ್ಲೀಲ ವಿಡಿಯೋ ಪ್ರಕರಣ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಪ್ರಜ್ವಲ್ ತಂದೆ, ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣರನ್ನು (HD Revanna) ಕೂಡ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು ಎನ್ನಲಾದ ಕೆಆರ್ ನಗರದ ಸಂತ್ರಸ್ತೆ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ (Bhavni Revanna) ಅವರ ಸಂಬಂಧಿಯೊಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದು ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಂಧನವಾಗಿದೆ.
ನಾಪತ್ತೆಯಾದ ಸಂತ್ರಸ್ತೆಯ ಪುತ್ರ ಶುಕ್ರವಾರ (ಮೇ 03) ರಂದು ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೆಚ್ಡಿ ರೇವಣ್ಣ ವಿರುದ್ಧ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರೇವಣ್ಣರನ್ನು ಆರೋಪಿ ಸಂಖ್ಯೆ 1 ಎಂದೂ ಸತೀಶ್ ಬಾಬು ಎಂಬವರನ್ನು ಆರೋಪಿ ಸಂಖ್ಯೆ 2 ಎಂದೂ ನಮೂದಿಸಲಾಗಿದೆ. ಸಂತ್ರಸ್ತೆಯ ಪತ್ತೆಗೆ ವಿಶೇಷ ತನಿಖಾ ದಳ (SIT) ಶುಕ್ರವಾರ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈ ಸ್ಥಳದಲ್ಲಿ ಮಹಿಳೆ ಇದ್ದಾಳೆಯೇ ಅಂತ ಶೋಧ ನಡೆಸಿತ್ತು.
ಇದನ್ನೂ ಓದಿ: ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಬಂಧಿಸುವುದು ಬಲು ಸುಲಭ: ಸಿದ್ದರಾಮಯ್ಯಗೆ ಕಾನೂನು ಪಾಠ ಮಾಡಿದ ಅಣ್ಣಾಮಲೈ
ಎಸ್ಐಟಿ ತಂಡಗಳು ಗುರುವಾರ ತಡರಾತ್ರಿಯಿಂದಲೇ ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳು ಮತ್ತು ಬೆಂಗಳೂರು ನಗರ ಸೇರಿದಂತೆ ವಿವಿಧಡೆ ಪರಿಶೀಲನೆ ನಡೆಸಿದ್ದವು. ಇನ್ನು ಪ್ರಕರಣ ಸಂಬಂಧ ಇಂದು ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದರೆ ರೇವಣ್ಣಗೂ ಬಂಧನ ಭೀತಿ ಎದುರಾಗಲಿದೆ. ಹೀಗಾಗಿ ಸದ್ಯ ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿದ್ದು ರೇವಣ್ಣ ವಕೀಲರ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.
ಈ ಮಧ್ಯೆ, ಇಂದು ಸಂಜೆಯೊಳಗೆ ವಿಚಾರಣೆಗೆ ಹಾಜರಾಗಲು ರೇವಣ್ಣಗೆ ಎಸ್ಐಟಿ ಎರಡನೇ ನೋಟಿಸ್ ನೀಡಿದೆ. ಇಂದು ನಿರೀಕ್ಷಣಾ ಜಾಮೀನು ಸಿಕ್ಕಿದರೆ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಹೊಳೆನರಸೀಪುರದ ಹೆಚ್ಡಿ ರೇವಣ್ಣ ಅವರ ಮನೆಗೆ ಎಸ್ಐಟಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮನೆಯಲ್ಲಿದ್ದ ಭವಾನಿ ರೇವಣ್ಣ ಜೊತೆ ಚರ್ಚೆ ನಡೆಸಿದ್ದಾರೆ. ಬೆಳಗ್ಗೆ 10 ಗಂಟೆ ಬಳಿಕ ಎಸ್ಐಟಿ ಸ್ಥಳ ಮಹಜರು ಮಾಡಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:55 am, Sat, 4 May 24