ರಿಟ್ ಅರ್ಜಿಯಲ್ಲಿ ಕೋರ್ಟ್​ ಕಣ್ತಪ್ಪಿಸಿದ್ದಾರೆ ಸಿದ್ದರಾಮಯ್ಯ: ದೂರದಾರ ಸ್ನೇಹಮಹಿ ಕೃಷ್ಣ ಗಂಭೀರ ಆರೋಪ

| Updated By: ಗಣಪತಿ ಶರ್ಮ

Updated on: Aug 22, 2024 | 11:20 AM

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳು ಸುರಳಿಯಾಗಿ ಸುತ್ತಿಕೊಳ್ಳುತ್ತಿವೆ. ಸಿದ್ದರಾಮಯ್ಯ ಪತ್ನಿ ಪರ್ಯಾಯ ನಿವೇಶನ ಕೋರಿ ಬರೆದಿದ್ದರು ಎನ್ನಲಾದ ಪತ್ರವನ್ನು ಅಧಿಕಾರಿಗಳು ಹಗರಣ ಬೆಳಕಿಗೆ ಬಂದ ಮೇಲೆ ತಿರುಚಿರುವ ಅನುಮಾನ ವ್ಯಕ್ತವಾಗಿದೆ ಎಂದು ಬುಧವಾರವಷ್ಟೇ ವರದಿಯಾಗಿತ್ತು. ಇದೀಗ, ಸಿದ್ದರಾಮಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ರಿಟ್ ಅರ್ಜಿಯಲ್ಲಿ ಕೋರ್ಟ್​ ಕಣ್ತಪ್ಪಿಸಿದ್ದಾರೆ ಸಿದ್ದರಾಮಯ್ಯ: ದೂರದಾರ ಸ್ನೇಹಮಹಿ ಕೃಷ್ಣ ಗಂಭೀರ ಆರೋಪ
ಸಿದ್ದರಾಮಯ್ಯ
Follow us on

ಮೈಸೂರು, ಆಗಸ್ಟ್​ 22: ಮುಡಾ ಹಗರಣದ ಸಂಬಂಧ ರಿಟ್ ಅರ್ಜಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ಕಣ್ತಪ್ಪಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಇವರು ಸಿಎಂ ವಿರುದ್ಧ ಮುಡಾ‌ ಹಗರಣ ವಿಚಾರವಾಗಿ ದೂರು ನೀಡಿರುವವರಲ್ಲಿ ಒಬ್ಬರಾಗಿದ್ದಾರೆ.

ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿರುವುದು ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಿತ್ತು. ಸಿದ್ದರಾಮಯ್ಯ ಒಟ್ಟು 713 ಪುಟಗಳ ದಾಖಲೆ ಒಳಗೊಂಡ ರಿಟ್ ಅರ್ಜಿ ಹಾಕಿದ್ದಾರೆ. 531ನೇ ಪುಟವಾಗಿ ಪಾರ್ವತಿ ಬರೆದ ಅರ್ಜಿಯ ಮೊದಲ ಪುಟ ಇದೆ. ಆದರೆ‌ 532ನೇ ಪುಟದಲ್ಲಿ ಪಾರ್ವತಿ ಅವರು ಬರೆದ ಪತ್ರದ ಎರಡನೇ ಪುಟ ಇಲ್ಲ ಎಂದು ಅವರು ದೂರಿದ್ದಾರೆ.

ಅದರಲ್ಲಿಯೂ ಎರಡನೇ ಪುಟಕ್ಕೆ ವೈಟ್ನರ್ ಹಾಕಿ ಸಾಲೊಂದನ್ನು ಅಳಿಸಲಾಗಿದೆ. 532ನೇ ಪುಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಡಾವಳಿ ಪತ್ರ ಇದೆ. ವೈಟ್ನರ್ ಹಾಕಿ ಅಳಿಸಿರುವ ಕಾರಣಕ್ಕಾಗಿ ಎರಡನೇ ಪುಟ ಬಿಟ್ಟು ಕೇವಲ ಒಂದು ಪುಟ ಮಾತ್ರ ಕೋರ್ಟ್‌ಗೆ ಕೊಟ್ಟಿದ್ದಾರೆ. ಆ ಮೂಲಕ ರಾಜ್ಯ ಜನರಿಗೆ ಹಾಗೂ ಕೋರ್ಟ್‌ಗೆ ಸತ್ಯ ಮುಚ್ಚಿಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಇದೇ ವಿಚಾರದಲ್ಲಿ ‌ರಾಜ್ಯಪಾಲರಿಗೆ ಬರೆದಿರುವ ಶೋಕಾಸ್ ನೋಟಿಸ್​​ನಲ್ಲೂ ಸಿಎಂ ಉಲ್ಲೇಖಿಸಿದ್ದಾರೆ. ಶೋಕಾಸ್ ನೋಟಿಸ್ ಉತ್ತರದ 30 ನೇ ಪುಟದಲ್ಲಿ ತಮ್ಮ ಪತ್ನಿ ಪತ್ರ ಬರೆದ ಮಾಹಿತಿ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ಸತ್ಯ ಮುಚ್ಚಿಟ್ಟಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. 29 ರಂದು ವಿಚಾರಣೆಯ ಸಂದರ್ಭದಲ್ಲಿ ಎಲ್ಲಾ ವಿಚಾರವನ್ನು ನ್ಯಾಯಾಲದ ಗಮನಕ್ಕೆ ತರುತ್ತೇವೆ. ಸಿಎಂ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು‌ ಮಾಡುವಂತೆ ಮನವಿ ಮಾಡುತ್ತೇವೆ ಎಂದು ಸ್ನೇಹಮಹಿ‌ಕೃಷ್ಣ ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು? ಅನುಮಾನಕ್ಕೆ ಇದೆ ಕಾರಣ

ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಅಧಿಕಾರಿಗಳು ದಾಖಲೆಯನ್ನು ತಿರುಚಿದ್ದಾರೆಯೇ ಎಂಬ ಅನುಮಾನ ಬುಧವಾರವೇ ವ್ಯಕ್ತವಾಗಿತ್ತು. ಸಿದ್ದರಾಮಯ್ಯ ಪತ್ನಿ ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಮನವಿ ಮಾಡಿ ಸಲ್ಲಿಸಿರುವ ಪತ್ರದಲ್ಲಿ, ಯಾವ ಸ್ಥಳದಲ್ಲಿ ಪರ್ಯಾಯ ನಿವೇಶನ ಕೊಡಬೇಕು ಎಂದು ಬರೆದ ಜಾಗಕ್ಕೆ ವೈಟ್​​ನರ್ ಹಾಕಿರುವುದು ಬೆಳಕಿಗೆ ಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ