ಮೈಸೂರು, (ನವೆಂಬರ್ 04): ಸದ್ಯ ವಕ್ಫ್ ಹಾಗೂ ಉಪಚುನಾವಣೆ ಗಲಾಟೆ ಮಧ್ಯ ಅತ್ತ ಮುಡಾ ಹಗರಣದ ತನಿಖೆ ಚುರುಕುಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಂಯ್ಯನವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ನವೆಂಬರ್ .6ರಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಈ ರೀತಿಯ ವಿಚಾರಣೆ ಎದುರಿಸಬೇಕಾಗಿ ಬಂದಿದೆ.
ಈಗಾಗಲೇ ಲೋಕಾಯುಕ್ತ ಎಲ್ಲಾ ಆರೋಪಿಗಳ ವಿಚಾರಣೆ ಮುಗಿಸಿದ್ದು, ಸಿದ್ದರಾಮಯ್ಯನವರ ವಿಚಾರಣೆಯೊಂದೇ ಬಾಕಿ ಇತ್ತು. ಇದೀಗ ಎ1 ಆರೋಪಿಗೂ ಸಹ ಲೋಕಾಯುಕ್ತ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಸಿದ್ದರಾಮಯ್ಯ ಜೀವನದ ಮೊದಲ ವಿಚಾರಣೆ ಇದಾಗಿದೆ. ಅವರು ಸುಮಾರ 40 ವರ್ಷಗಳಿಂದ ರಾಜಕಾರಣದಲ್ಲಿದ್ದು, ಯಾವುದೇ ರೀತಿ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸಿರಲಿಲ್ಲ. ಆದ್ರೆ, ಇದೀಗ ಸಿದ್ದರಾಮಯ್ಯನವರಿಗೆ ಮುಡಾ ಕಂಟಕ ಎದುರಾಗಿದ್ದು, ತಮ್ಮ 40 ವರ್ಷ ಸುದೀರ್ಘ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತದ ಮುಂದೆ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ: ಸಿಎಂ ಪತ್ನಿ ವಿಚಾರಣೆ ನಡೆಸಿದ ಲೋಕಾಯುಕ್ತ: ಮಹತ್ವ ಪಡೆದುಕೊಂಡ ಪಾರ್ವತಿ ಹೇಳಿಕೆ
ಈಗಾಗಲೇ ಎ2 ಪಾರ್ವತಿ ಸಿದ್ದರಾಮಯ್ಯ, ಎ3 ಮಲ್ಲಿಕಾರ್ಜುನ ಹಾಗೂ ಎ4 ದೇವರಾಜು ಸೇರಿ ಹಲವರ ವಿಚಾರಣೆಯನ್ನು ಲೋಕಾಯುಕ್ತ ವಿಚಾರಣೆ ನಡೆಸಿದೆ. ಇನ್ನು ಮುಡಾದ ಸೈಟ್ ಬಗ್ಗೆಯೂ ಸಹ ಲೋಕಾಯುಕ್ತ ಮಹತ್ವದ ದಾಖಲೆಗಳನ್ನು ಕಲೆಹಾಕಿದೆ. ಅಲ್ಲದೇ ಸಿಎಂ ಕುಟುಂಬಕ್ಕೆ ಹಂಚಿಕೆಯಾಗಿದ್ದ ಸೈಟ್ಗಳಿಗೂ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಿದ್ದರಾಮಯ್ಯನವರನ್ನು ವಿಚಾರಣೆಗೊಳಪಡಿಸುತ್ತಿಲ್ಲ. ಹಾಗೇ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ದೂರುದಾರ ಸ್ನೇಹಮಣಿ ಕೃಷ್ಣ ಆಗ್ರಹಿಸುತ್ತಿದ್ದರು. ಅಲ್ಲದೇ ಲೋಕಾಯುಕ್ತ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.
ಇದೀಗ ಕೊನೆಗೂ ಎ1 ಆರೋಪಿಯಾಗಿರುವ ಸಿದ್ದರಾಮಯ್ಯನವರ ವಿಚಾರಣೆಗ ಬರುವಂತೆ ನೋಟಿಸ್ ನೀಡಿದೆ. ಈ ಮೂಲಕ ಮುಡಾ ಹಗರಣ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮತ್ತೊಂದೆಡೆ ಇಡಿ ಅಧಿಕಾರಿಗಳು ಸಹ ಈ ಪ್ರಕರಣದಲ್ಲಿ ಪ್ರವೇಶ ಮಾಡಿದ್ದು, ಈಗಾಗಲೇ ಮುಡಾದ ಮಾಜಿ ಆಯುಕ್ತರ ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ ಅಲ್ಲದೇ ಸಿದ್ದರಾಂಯ್ಯನವರ ಆಪ್ತ ಪಾಪಣ್ಣ ನಿವಾಸದ ಮೇಲೂ ಸಹ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Mon, 4 November 24