ಅಭಿಮನ್ಯು ಆನೆ ಅಭಿಮಾನಿಗಳಿಗೆ ಸಿಹಿ ಸುದ್ದಿ: ಈ ಬಾರಿಯ ಮೈಸೂರು ದಸರೆಯಲ್ಲಿ ‘ನಿಶಾನೆ ಆನೆ’ಯಾಗಿ ರಾಜಗಾಂಭೀರ್ಯದ ನಡಿಗೆ

ಮೈಸೂರು ದಸರಾ 2026ರಲ್ಲಿ ಅಭಿಮನ್ಯು ಆನೆ ನಿಶಾನೆ ಆನೆಯಾಗಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತನಾಗಿದ್ದರೂ, ಆತನ ಸೇವೆಯನ್ನು ಗೌರವಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರು ಬಾರಿ ಕ್ಯಾಪ್ಟನ್‌ ಆಗಿ ಕಾರ್ಯನಿರ್ವಹಿಸಿದ್ದ ಅಭಿಮನ್ಯುಗೆ ಇದು ಗೌರವಪೂರ್ವಕ ವಿದಾಯವಾಗಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಅಭಿಮನ್ಯು ಆನೆ ಅಭಿಮಾನಿಗಳಿಗೆ ಸಿಹಿ ಸುದ್ದಿ: ಈ ಬಾರಿಯ ಮೈಸೂರು ದಸರೆಯಲ್ಲಿ ನಿಶಾನೆ ಆನೆಯಾಗಿ ರಾಜಗಾಂಭೀರ್ಯದ ನಡಿಗೆ
ಅಭಿಮನ್ಯು ಆನೆ
Edited By:

Updated on: Aug 22, 2026 | 1:57 PM

ಮೈಸೂರು, ಆ.22: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಅಭಿಮನ್ಯು ಆನೆ ಪ್ರಮುಖ ಬದಲಾವಣೆಯೊಂದಿಗೆ ಕಾಣಿಸಿಕೊಳ್ಳಲಿದೆ. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತನಾಗಿದ್ದರೂ, 2026ರ ದಸರೆಯಲ್ಲಿ ಆತ ನಿಶಾನೆ ಆನೆಯಾಗಿ ಭಾಗವಹಿಸಲಿದ್ದಾನೆ. ಈ ನಿರ್ಧಾರವು ಅಭಿಮನ್ಯುಗೆ ನೀಡುವ ಗೌರವಪೂರ್ವಕ ವಿದಾಯವಾಗಿದ್ದು, ಆತನ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಸತತ ಆರು ಬಾರಿ ದಸರೆಯ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದ ಅಭಿಮನ್ಯು, ತನ್ನ ಕರ್ತವ್ಯ ನಿಷ್ಠೆ ಮತ್ತು ಗಾಂಭೀರ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ. 2026ರಲ್ಲಿ ಅಭಿಮನ್ಯು ದಸರೆಯಲ್ಲಿ ಭಾಗವಹಿಸುವುದಿಲ್ಲ ಎಂಬ ಸುದ್ದಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಆದರೆ, ಇದೀಗ ಆತನಿಗೆ ನಿಶಾನೆ ಆನೆಯ ಪಾತ್ರವನ್ನು ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಲು ಅರಣ್ಯ ಇಲಾಖೆ ಮುಂದಾಗಿದೆ. ನಿಶಾನೆ ಆನೆ ಎಂದರೆ, ಜಂಬೂ ಸವಾರಿ ಮೆರವಣಿಗೆ ಆರಂಭವಾಗುವ ಮೊದಲು, ಮೊದಲ ಸಾಲಿನಲ್ಲಿ ಬಾವುಟ ಹಿಡಿದು ಸಾಗುವ ಆನೆಯಾಗಿರುತ್ತದೆ. ಈ ಮೂಲಕ ಆತ ಮುಂಚೂಣಿಯಲ್ಲಿ ನಿಂತು ಎಲ್ಲರಿಗೂ ವಿದಾಯ ಹೇಳುವ ಕೆಲಸ ಮಾಡಲಿದ್ದಾನೆ.

ಇದೇ ರೀತಿಯ ಗೌರವವನ್ನು ಈ ಹಿಂದೆ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆಗೂ ಸಹ ನೀಡಲಾಗಿತ್ತು. ಅರ್ಜುನ ನಿವೃತ್ತಿಯ ನಂತರ ಒಂದು ವರ್ಷ ನಿಶಾನೆ ಆನೆಯಾಗಿ ದಸರೆಯಲ್ಲಿ ಭಾಗವಹಿಸಿತ್ತು. ಇದೇ ಕಾರಣಕ್ಕಾಗಿ, ಸತತ ಆರು ಬಾರಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ ಅಭಿಮನ್ಯುವಿಗೂ ಇದೇ ರೀತಿಯ ಗೌರವಪೂರ್ವಕ ವಿದಾಯ ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಅಭಿಮನ್ಯು ಕೇವಲ ದಸರಾದಲ್ಲಿ ಮಾತ್ರವಲ್ಲದೆ, ಅರಣ್ಯ ಇಲಾಖೆಯ ವಿವಿಧ ಕಾರ್ಯಾಚರಣೆಗಳಲ್ಲೂ ಪ್ರಮುಖ ಪಾತ್ರ ವಹಿಸಿದ್ದಾನೆ. ಕಾಡಾನೆಗಳು ನಾಡಿಗೆ ಲಗ್ಗೆ ಇಟ್ಟಾಗ ಅವುಗಳನ್ನು ವಾಪಸ್ ಕಾಡಿಗೆ ಅಟ್ಟುವ ಕೆಲಸವಿರಬಹುದು, ಅಥವಾ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಿರಬಹುದು, ಎಲ್ಲದರಲ್ಲೂ ಅಭಿಮನ್ಯು ತನ್ನ ಶೌರ್ಯ ಮತ್ತು ಧೈರ್ಯದಿಂದ ನಂಬರ್ ಒನ್ ಸ್ಥಾನ ಗಳಿಸಿದ್ದಾನೆ. ಆತನ ಶಕ್ತಿ, ಧೈರ್ಯ ಮತ್ತು ಸೌಮ್ಯ ಸ್ವಭಾವ ಈ ಕಾರ್ಯಗಳಿಗೆ ಹೇಳಿ ಮಾಡಿಸಿದಂತಿತ್ತು. ಕಾಡಾನೆಗಳನ್ನು ನಿಯಂತ್ರಿಸುವ ಸಾಮರ್ಥ್ಯದ ಜೊತೆಗೆ, ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುವ ಮನೋಭಾವವೂ ಅಭಿಮನ್ಯುವಿನಲ್ಲಿತ್ತು.

ಇಲ್ಲಿದೆ ನೋಡಿ ವಿಡಿಯೋ:

Mysuru Special Report: 750 KG ಚಿನ್ನದ ಅಂಬಾರಿ ಹೊರದಿದ್ರೂ ಹಿರಿಯಣ್ಣನ ಸ್ಥಾನದಲ್ಲಿ ಇರ್ತಾನೆ ಅಭಿಮನ್ಯು | #TV9D

ಅಭಿಮನ್ಯು ತನ್ನ ಮಾವುತ ವಸಂತ ಮತ್ತು ಕಾವಾಡಿ ರಾಜು ಅವರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದ. ಬೃಹದಾಕಾರವಾಗಿ ಕಂಡರೂ, ಆತ ಅತ್ಯಂತ ಸೌಮ್ಯ ಸ್ವಭಾವದವನು. ಯಾರಿಗೂ ಯಾವುದೇ ರೀತಿಯ ತೊಂದರೆ ನೀಡಿದವನಲ್ಲ. ಸಾಮಾನ್ಯವಾಗಿ ಕಾಡಾನೆಗಳನ್ನು ಪಳಗಿಸಿದಾಗ ಮಾವುತ ಮತ್ತು ಕಾವಾಡಿಗಳನ್ನು ಹೊರತುಪಡಿಸಿ ಯಾರನ್ನೂ ಹತ್ತಿರ ಬಿಡುವುದಿಲ್ಲ. ಆದರೆ, ಅಭಿಮನ್ಯು ಎಲ್ಲರ ಜೊತೆಗೂ ಪ್ರೀತಿಯಿಂದ ಇರುತ್ತಿದ್ದ. ವೈದ್ಯರು, ಮಾವುತರ ಮಕ್ಕಳು ಸೇರಿದಂತೆ ಯಾರೇ ಆತನ ಬಳಿ ಸುಳಿದಾಡಿದರೂ, ಆತ ಎಂದಿಗೂ ತೊಂದರೆ ಮಾಡುತ್ತಿರಲಿಲ್ಲ.

ಇದನ್ನೂ ಓದಿ: ಭೀಮನ ಅಭಿಮಾನಿಗಳಿಗೆ ನಿರಾಸೆ: ಈ ಬಾರಿಯ ಜಂಬೂಸವಾರಿಯಲ್ಲಿ ಭಾಗವಹಿಸಲ್ಲ; ಕಾರಣವೇನು ಗೊತ್ತಾ?

ಈ ಎಲ್ಲಾ ಗುಣಗಳು, ರಾಜಗಾಂಭೀರ್ಯ ನಡಿಗೆ, ಮತ್ತು ಕರ್ತವ್ಯ ಪ್ರಜ್ಞೆ ಅಭಿಮನ್ಯುವನ್ನು ಎಲ್ಲರಿಗೂ ಅಚ್ಚುಮೆಚ್ಚಿನ ಆನೆಯನ್ನಾಗಿ ಮಾಡಿತ್ತು. ಆತನಿಲ್ಲದೆ ದಸರಾ ಬಣಗುಟ್ಟಲಿದೆ ಎಂಬ ಆತಂಕದಲ್ಲಿದ್ದ ಅಭಿಮಾನಿಗಳಿಗೆ, ನಿಶಾನೆ ಆನೆಯಾಗಿ ಆತ ಕಾಣಿಸಿಕೊಳ್ಳುವ ಸುದ್ದಿ ನಿಜಕ್ಕೂ ಖುಷಿ ತಂದಿದೆ. ಕಾರ್ಯಾಚರಣೆಗಳ ಸಂದರ್ಭದಲ್ಲಿ ತನ್ನ ಮಾವುತ, ಕಾವಾಡಿಗಳ ಜೀವವನ್ನು ಕಾಪಾಡಿದ ಉದಾಹರಣೆಗಳೂ ಇವೆ. ಹೀಗಾಗಿ, ಮಾವುತ ವಸಂತ ತನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಅಭಿಮನ್ಯುವಿನ ಆರೈಕೆ ಮಾಡುತ್ತಾನೆ. ಅಭಿಮನ್ಯುವಿನ ಈ ಎಲ್ಲಾ ಸೇವೆಯನ್ನು ಗುರುತಿಸಿ, ಆತನಿಗೆ ಒಂದು ಗೌರವಪೂರ್ವಕ ವಿದಾಯ ನೀಡಲು ಮತ್ತು ಆತನ ಕರ್ತವ್ಯ ಪ್ರಜ್ಞೆಗೆ ಸೆಲ್ಯೂಟ್ ಸಲ್ಲಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us