ಮೈಸೂರು, ಮಾ.28: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಎಲ್ಲಾ 28 ಸ್ಥಾನಗಳನ್ನು ಗೆದ್ದುಕೊಳ್ಳಲು ಬಿಜೆಪಿ-ಜೆಡಿಎಸ್ (BJP-JDS) ಪಕ್ಷಗಳುಯ ಭರ್ಜರಿ ತಯಾರಿಗಳನ್ನು ನಡೆಸುತ್ತಿವೆ. ಸಭೆಗಳ ಮೂಲಕ ರಣತಂತ್ರಗಳನ್ನು ರೂಪಿಸುತ್ತಿವೆ. ಯಾವುದೇ ಭಿನ್ನಮತ ಇಲ್ಲದೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಭೆಗಳನ್ನು ನಡೆಸುತ್ತಿವೆ. ಮೈಸೂರಿನಿಂದಲೇ (Mysuru) ಜಂಟಿ ಕೋರ್ ಕಮಿಟಿ ಸಭೆ ನಡೆಸಿ ಹಳೆ ಜಗಳಗಳಿಗೆ ಇತಿಶ್ರೀ ಹಾಡಲಾಗಿದೆ. ಅಲ್ಲದೆ, ಪರಸ್ಪರ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ಪಡೆಯಲು ಬಗ್ಗೆ ಬಿ.ವೈ. ವಿಜಯೇಂದ್ರ (B.Y. Vijayendra) ಹಾಗೂ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಭರವಸೆ ನೀಡಿದ್ದಾರೆ.
ಬಿಜೆಪಿ ಜೆಡಿಎಸ್ ನಾಯಕರು ಭಾಗಿಯಾಗಿದ್ದ ಕೋರ್ ಕಮಿಟಿ ಸಭೆಯಲ್ಲಿ ಎಲ್ಲಾ ಕಾರ್ಯಕರ್ತರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು. ಬೂತ್ ಮಟ್ಟದಲ್ಲಿ ಸಮನ್ವಯತೆ ಸಾಧಿಸಬೇಕು. 28 ಕ್ಷೇತ್ರಗಳಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಬೇಕು. ಮೋದಿ ನಾಯಕತ್ವ ಮೆಚ್ಚಿ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿದೆ. ಹೆಚ್ಡಿ ದೇವೇಗೌಡರ ಆಶಯದಂತೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಉಭಯ ನಾಯಕರು ಹೇಳಿದ್ದಾರೆ.
ಎಲ್ಲೂ ಗೊಂದಲ ಆಗದಂತೆ ಮುಂದುವರಿಯಲು ಜಂಟಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಪ್ರಚಾರ ಸಭೆ ಏನೇ ಆದರೂ ಬಿಜೆಪಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಿ ವಿಜಯೇಂದ್ರ ಖಡಕ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಚಾಮುಂಡೇಶ್ವರಿ ಸನ್ನಿದಾನದಲ್ಲಿ ಮೊದಲ ಮೈತ್ರಿ ಸಮನ್ವಯ ಸಭೆ: ಕಾಂಗ್ರೆಸ್ಗೆ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?
ಕೋರ್ ಕಮಿಟಿ ಸಭೆಯಲ್ಲಿ ಸಮನ್ವಯದ ಪಾಠ ಮಾಡಿದ ಕುಮಾರಸ್ವಾಮಿ ಹಾಗೂ ವಿಜಯೇಂದ್ರ, ಹಳೆಯ ಕೇಸ್, ಹಳೆಯ ಜಗಳ ಅಂತ ಯಾವುದು ಇರಕೂಡದು. ರಾಜಕೀಯವಾಗಿ ಬಿಜೆಪಿಯವರು ಜೆಡಿಎಸ್ ಮೇಲೆ ಮತ್ತು ಜೆಡಿಎಸ್ನವರು ಬಿಜೆಪಿ ಮೇಲೆ ಕೇಸ್ ಹಾಕಿಸಿದ್ದರೆ ಅದನ್ನ ತೆಗೆಸುತ್ತೇವೆ. ಆ ಕೇಸ್ಗಳ ಪಟ್ಟಿಯಿದ್ದರೆ ನಮ್ಮ ಕೈಗೆ ಕೊಡಿ. ತುರ್ತಾಗಿ ಅದನ್ನ ತೆಗೆಸುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿಯಿಂದ ಕಾಂಗ್ರೆಸ್ಗೆ ಹೋದವರನ್ನ ಮರಳಿ ವಾಪಸ್ ಕರೆದುಕೊಂಡು ಬನ್ನಿ ಎಂದು ಸೂಚಿಸಿದ್ದಾರೆ. ಆ ಮೂಲಕ ಅಪರೇಷನ್ ಹಸ್ತಕ್ಕೆ ಪರ್ಯಾಯವಾಗಿ ಅಪರೇಷನ್ ದೋಸ್ತಿ ಶುರುವಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅಬ್ಬರಕ್ಕೆ ಹೆದರಬೇಡಿ. ನಾವು ನಿಮ್ಮ ಜೊತೆಯಲ್ಲಿದ್ದೇವೆ. ಅವರು ಅಬ್ಬರಿಸುವ ಕೆಲಸ ಮಾಡುತ್ತಾರೆ. ಸಿಎಂ ಮೈಸೂರಿನಲ್ಲಿದ್ದಾರೆ, ಮ್ಯಾಜಿಕ್ ಆಗುತ್ತದೆ ಅಂತ ಬಿಂಬಿಸುತ್ತಾರೆ. ಯಾವ ಮ್ಯಾಜಿಕ್ಗಳು ನಡೆಯುವುದಿಲ್ಲ. ನಮ್ಮ ಅಭ್ಯರ್ಥಿ ಜಾತಿ ಮೀರಿದ ವ್ಯಕ್ತಿ. ಅದು ನಮಗೆ ಬಹು ದೊಡ್ಡ ಪ್ಲಸ್ ಪಾಯಿಂಟ್. ಇಂತಹ ಅವಕಾಶ ಯಾವ ಕ್ಷೇತ್ರದಲ್ಲಿಯೂ ಇರುವುದಿಲ್ಲ. ಮೈಸೂರಿನ ದೋಸ್ತಿ ಪಾಲಿಗೆ ಅಭ್ಯರ್ಥಿಯೆ ವರದಾನ. ಇದನ್ನ ಉಪಯೋಗಿಸಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 am, Thu, 28 March 24