ಮಾ.27 ರಂದು ಮೈಸೂರು ಅಖಾಡಕ್ಕೆ ವಿಜಯೇಂದ್ರ ಎಂಟ್ರಿ, ಬಿಜೆಪಿ-ಜೆಡಿಎಸ್ ಸಮ್ಮಿಲನ ಕಾರ್ಯಕ್ರಮ
ಲೋಕಸಭೆ ಚುನಾವಣೆ (Lok sabha election) ದಿನಾಂಕ ನಿಗದಿಯಾಗುತ್ತಿದ್ದಂತೆ ಪ್ರಚಾರದ ಕಾವು ಜೋರಾಗಿದೆ. ಅದರಂತೆ ನಾಳೆ(ಮಾ.27) ಮೈಸೂರು ಪ್ರವಾಸ ಕೈಗೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(B. Y. Vijayendra) ಅವರು, ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ.

ಮೈಸೂರು, ಮಾ.26: ಲೋಕಸಭೆ ಚುನಾವಣೆ (Lok sabha election) ದಿನಾಂಕ ನಿಗದಿಯಾಗುತ್ತಿದ್ದಂತೆ ಪ್ರಚಾರದ ಕಾವು ಜೋರಾಗಿದೆ. ಅದರಂತೆ ನಾಳೆ (ಮಾ.27) ಬುಧವಾರ ಸಿದ್ದರಾಮಯ್ಯನವರ ತವರು ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(B. Y. Vijayendra) ಭೇಟಿ ನೀಡಲಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮಗಳ ವಿವರ ಇಲ್ಲಿದೆ
ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಬಿ ವೈ ವಿಜಯೇಂದ್ರ ಅವರು ಬೆಳಿಗ್ಗೆ 8 ಗಂಟೆಗೆ ಯದುವೀರ್ ಜೊತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ಅಲ್ಲಿಂದ ಬೆಳಿಗ್ಗೆ 10 ಗಂಟೆಗೆ ಕುಶಾಲನಗರಕ್ಕೆ ಪ್ರಯಾಣ ಬೆಳಸಲಿದ್ದಾರೆ. ನಂತರ 10.30ಕ್ಕೆ ಮಡಿಕೇರಿಯಲ್ಲಿ ಯದುವೀರ್ ಜೊತೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ ಬೆನ್ನಲ್ಲೇ ಅನ್ನಪೂರ್ಣೇಶ್ವರಿ ಮೊರೆಹೋದ ಯಡಿಯೂರಪ್ಪ: ಶತ್ರುನಾಶಕ್ಕೆ ಚಂಡಿಕಾಯಾಗ
ಮಧ್ಯಾಹ್ನ 11ಕ್ಕೆ ಮಡಿಕೇರಿಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೋಳ್ಳಲಿರುವ ಅವರು, ಸಂಜೆ 4 ಗಂಟೆಗೆ ಮೈಸೂರು ಸದರನ್ ಸ್ಟಾರ್ ಹೋಟೆಲ್‌ನಲ್ಲಿ ಬಿಜೆಪಿ-ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ತದನಂತರ ಸಂಜೆ 5ಕ್ಕೆ ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ.
ಮೈಸೂರು ಗೆಲ್ಲೋಕೆ ರಣತಂತ್ರ ರೂಪಿಸಿರುವ ಸಿಎಂ ಸಿದ್ದರಾಮಯ್ಯ
ಇನ್ನು ತಮ್ಮ ತವರು ಜಿಲ್ಲೆಯಲ್ಲಿ ಗೆಲುವು ಸಾಧಿಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಮೈಸೂರಿನ ರೆಸಾರ್ಟ್ನಲ್ಲಿ ಕುಳಿತುಕೊಂಡೇ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಇದಕ್ಕೆ ಟಕ್ಕರ್ ಕೊಡಲು ನಾಳೆ ಮೈಸೂರಿಗೆ ಬಿವೈ ವಿಜಯೇಂದ್ರ ಆಗಮಿಸಲಿದ್ದಾರೆ. ಇದೀಗ ಬಿ ವೈ ವಿಜಯೇಂದ್ರ ಅವರ ಮೈಸೂರು ಪ್ರವಾಸ ಕುತೂಹಲ ಕೆರಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



