ಮಂಡ್ಯ: ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ದುರಂತ ಸಾವು
ಕುಟುಂಬಸ್ಥರು ಮತ್ತು ಗೆಳೆಯರು ಸೇರಿಕೊಂಡು ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ನಾಲ್ವರು ಈಜಾಡಲೆಂದು ಕಾವೇರಿ ನದಿಗೆ ಇಳಿದಿದ್ದು, ಈ ವೇಳೆ ಮುಳುಗಿ ನಾಲ್ವರು ಸಾವನ್ನಪ್ಪಿದ್ದಾರೆ. ಓರ್ವನ ರಕ್ಷಣೆಗೆ ಹೋದ ಮೂವರು ದುರಂತ ಅಂತ್ಯಕಂಡಿದ್ದಾರೆ.
ಮೈಸೂರು, (ಮಾರ್ಚ್ 26): ಈಜಲು ಹೋದ ನಾಲ್ವರು ಕಾವೇರಿ ನದಿಯಲ್ಲಿ (Cauvery river) ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ. ಮೈಸೂರು ಮೂಲದ ನಾಗೇಶ್(40), ಭರತ್(17), ಗುರು(32), ಮಹದೇವ್(16) ಮೃತ ದುರ್ವೈವಿಗಳು. ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.
ಕುಟುಂಬಸ್ಥರು, ಸ್ನೇಹಿತರು ಸೇರಿ ಒಂದೇ ಬಸ್‌ನಲ್ಲಿ 40 ಜನ ಮೈಸೂರಿನಿಂದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ನಾಲ್ವರು ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದು, ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ರಕ್ಷಣೆ ಮಾಡಲು ಉಳಿದ ಮೂವರು ಹೋಗಿ ದುರಂತ ಅಂತ್ಯಕಂಡಿದ್ದಾರೆ.
ಇದನ್ನೂ ಓದಿ: ಉಡುಪಿ: ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು
ಈಜಲು ಹೋಗಿ ನೀರುಪಾಲಾದ ಯುವಕ
ಕೆರೆಯಲ್ಲಿ ಈಜಾಡಲು ಹೋಗಿ ಯುವಕನೊಬ್ಬ ನೀರುಪಾಲಾಗಿದ್ದಾನೆ. ಯಾದಗಿರಿ ತಾಲೂಕಿನ ಅರಕೇರಾ ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಸವಲಿಂಗಪ್ಪ (18) ಮೃತ ದುರ್ದೈವಿ. ಇಂದು(ಮಾರ್ಚ್ 26) ಬೆಳಗ್ಗೆ ಸ್ನೇಹಿತರ ಜತೆ ಬಣ್ಣದೋಕಳಿ ಆಡಿ ನಂತರ ತಮ್ಮನೊಟ್ಟಿಗೆ ಕೆರೆಗೆ ಈಜಾಡಲು ತೆರಳಿದ್ದಾನೆ. ಆದರೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳೀಯರು ಮೃತದೇಹವನ್ನು ಹೊರ ತೆಗೆದಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸೀತಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲು
ಉಡುಪಿ: ಮೀನು ಹಿಡಿಯಲು ಹೋದ ಇಬ್ಬರಿಬ್ಬರು ನೀರುಪಾಲಾದ (Drowned in River) ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ (Seeta river) ನಡೆದಿದೆ. ಹೊಸಾಳ ಗ್ರಾಮದ ಶ್ರೀಶ (21) ಹಾಗೂ ಪ್ರಶಾಂತ್ ಪೂಜಾರಿ (30) ಮೃತಪಟ್ಟವರು. ಸೋಮವಾರ ಬೆಳಗ್ಗೆ ಮೀನು ಹಿಡಿಯಲೆಂದು ನಾಗರಮಠದ ಸೀತಾ ನದಿಗೆ ಹೋಗಿದ್ದರು. ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಇದೇ ವೇಳೆ ಅಲ್ಲಿದ್ದ ಸ್ಥಳೀಯರು ಮುಳುಗುತ್ತಿರುವವರ ರಕ್ಷಣೆಗೆ ಯತ್ನಿಸಿದ್ದಾರೆ. ಆದರೆ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ, ಈಜು ತಜ್ಞ ಈಶ್ವರ್ ಮಲ್ಪೆ ಹಾಗೂ ಸ್ಥಳೀಯರ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ