AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ

ಕೊನೆಗೂ ಜೆಡಿಎಸ್ ತನ್ನ ಪಾಲಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅದರಲ್ಲೂ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಖುದ್ದು ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ. ಹಾಗಾದರೆ ಇನ್ನುಳಿದ ಕ್ಷೇತ್ರಗಳಲ್ಲಿ ಯಾರೆಲ್ಲಾ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ವಿವರ ಇಲ್ಲಿದೆ.

ಮೂರು ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ
ಹೆಚ್​ಡಿ ಕುಮಾರಸ್ವಾಮಿ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Mar 26, 2024 | 6:44 PM

Share

ಬೆಂಗಳೂರು, (ಮಾರ್ಚ್ 26): ಲೋಕಸಭಾ ಚುನಾವಣೆಯಲ್ಲಿ(Loksabha  Elections 2024) ಬಿಜೆಪಿ (BJP)ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವ ಜೆಡಿಎಸ್‌(JDS) ಕೊನೆಗೂ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡಿದ್ದು, ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಮಲ್ಲೇಶ್ ಬಾಬುಗೆ ನೀಡಲಾಗಿದೆ. ಇನ್ನು ತೀವ್ರ ಕುತೂಲಕ್ಕೆ ಕಾರಣವಾಗಿದ್ದ ಮಂಡ್ಯ ಕ್ಷೇತ್ರದಿಂದ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರೇ ಕಣಕ್ಕಿಳಿಯಲಿದ್ದಾರೆ.

ಹಾಸನಕ್ಕೆ ಪ್ರಜ್ವಲ್ ರೇವಣ್ಣ ಅವರೇ ಫೈನಲ್ ಆಗಿದೆ. ಕೋಲಾರದಲ್ಲಿ ಸ್ಪರ್ಧಿಸಲು ಮೂರು ನಾಯಕರ ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಸಮೃದ್ಧಿ ಮಂಜುನಾಥ, ಮಲ್ಲೇಶ್ ಬಾಬು, ನಿಸರ್ಗ ನಾರಾಯಣಸ್ವಾಮಿ ಹೆಸರು ರೇಸ್​ನಲ್ಲಿದ್ದವು. ಈ ಪೈಕಿ ಸಮೃದ್ಧಿ ಮಂಜುನಾಥ್ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ, ಅಂತಿಮವಾಗಿ ಮಲ್ಲೇಶ್ ಬಾಬು ಅವರಿಗೆ ಮಣೆ ಹಾಕಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ರೆ ಚನ್ನಪಟ್ಟಣದಲ್ಲಿ ನಿಖಿಲ್ ಪ್ರತಿಷ್ಠಾಪನೆ: ಯೋಗೇಶ್ವರ್​ಗೆ ಕಾಂಗ್ರೆಸ್ ಗಾಳ

ಮಂಡ್ಯ ನಾಯಕರ ಒತ್ತಡಕ್ಕೆ ಮಣಿದ ಕುಮಾರಸ್ವಾಮಿ

ಹೌದು…ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಥವಾ ಎಚ್​ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕೆಂದು ಜಿಲ್ಲೆಯ ನಾಯಕ, ಮುಖಂಡರು ಆಗ್ರಹಿಸಿದ್ದರು. ಆದ್ರೆ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಕುಮಾರಸ್ವಾಮಿಯೇ ಸ್ಪರ್ಧೆ ಅನಿವಾರ್ಯವಾಯ್ತು. ಇನ್ನು ಇವರಿಬ್ಬರ ಮಧ್ಯೆ ಸಿಎಸ್ ಪುಟ್ಟರಾಜು ಅವರ ಹೆಸರು ಸಹ ಕೇಳಿಬಂದಿತ್ತು. ಮತ್ತೊಂದು ಕುಮಾರಸ್ವಾಮಿ ಅವರು ಚನ್ನಪಟ್ಟಣ ಬಿಟ್ಟು ಮಂಡ್ಯಗೆ ಹೋಗಬಾರದು ಎಂದು ಚನ್ನಪಟ್ಟಣ ಕಾರ್ಯಕರ್ತರು ಪಟ್ಟು ಹಿಡಿದಿದ್ದರು.  ಆದ್ರೆ, ಕುಮಾರಸ್ವಾಮಿಯೇ  ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಒತ್ತಡಕ್ಕೆ ಮಣಿದಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಗತಿ ಏನು?

ಇನ್ನು ಒಂದು ವೇಳೆ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಗೆಲುವು ಸಾಧಿಸಿದರೆ ಇತ್ತ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಗತಿ ಏನು ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಮೂಲಗಳ ಪ್ರಕಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗುವ ಉಪಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಎಚ್​ಡಿಕೆ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.  ಇನ್ನು ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿ ಸಿಪಿ ಯೋಗೇಶ್ವರ್ ಅವರು ಬಿಟ್ಟು ಕೊಡುತ್ತಾರಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿಯಾಗಿದ್ದರಿಂದ ಒಬ್ಬರು ಸ್ಪರ್ಧೆ ಮಾಡಬಹುದು. ಒಂದು ವೇಳೆ ಚನ್ನಪಟ್ಟಣ ಕ್ಷೇತ್ರದ ಉಪವುನಾವಣೆ ವೇಳೆ ಮೈತ್ರಿ ಇಲ್ಲವಾದಲ್ಲಿ ಜೆಡಿಎಸ್​ನಿಂದ ನಿಖಿಲ್ ಕುಮಾರಸ್ವಾಮಿ ಇನ್ನು ಬಿಜೆಪಿಯಿಂದ ಸಿಪಿ ಯೀಗೇಶ್ವರ್​ ಕಣಕ್ಕಿಳಿಯಬಹುದು. ಒಂದು ವೇಳೆ ಮೈತ್ರಿ ಹಾಗೇ ಮುಂದುವರೆದು ಚನ್ನಪಟ್ಟಣದ ಟಿಕೆಟ್​ ನಿಖಿಲ್​ಗೆ ನೀಡಿದ್ದೆ ಆದಲ್ಲಿ ಸಿಪಿ ಯೋಗೇಶ್ವರ್ ನಡೆ ಏನು ಎನ್ನುವುದು ಕುತೂಹಲ. ಒಂದು ವೇಳೆ ಅವರು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದರೂ ಅಚ್ಚರಿಪಡಬೇಕಿಲ್ಲ. ಯಾಕಂದ್ರೆ ಈಗಲೇ ಕಾಂಗ್ರೆಸ್​ ಶಾಸಕ ಎಚ್​ಸಿ ಬಾಲಕೃಷ್ಣ ಅವರು ಯೀಗೇಶ್ವರ್​ಗೆ ಆಹ್ವಾನ ನೀಡಿದ್ದಾರೆ. ಅಲ್ಲದೇ ಎಂಎಲ್​ಎ ಆಗಬಹುದು ಎಂದು ಆಫರ್​ ಸಹ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣನತ್ತ ಮುಖ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Tue, 26 March 24