ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಶಾಕ್: ಯಡಿಯೂರಪ್ಪ ಆಪ್ತ ಹೆಚ್ವಿ ರಾಜೀವ್ ಕಾಂಗ್ರೆಸ್ಗೆ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶಾಸಕ ಎಸ್ಟಿ ಸೋಮಶೇಖರ್ ಆಪ್ತ, ಬಿಜೆಪಿ ಮುಖಂಡ ಹೆಚ್.ವಿ ರಾಜೀವ್ ಮಾರ್ಚ್ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಹೆಚ್.ವಿ ರಾಜೀವ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಮೈಸೂರು, ಮಾರ್ಚ್ 24: ಲೋಕಸಭೆ ಚುನಾವಣೆ (Lok Sabha Election) ಹೊಸ್ತಿಲಿನಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಹಳೆ-ಮೈಸೂರು ಭಾಗದಲ್ಲಿ ಪಕ್ಷವನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ (Congress) ಬಿಜೆಪಿಯ (BJP) ಪ್ರಭಲನಾಯಕನಿಗೆ ಗಾಳ ಹಾಕಿದೆ. ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಮಾರ್ಚ್ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಹೆಚ್.ವಿ ರಾಜೀವ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶಾಸಕ ಎಸ್ಟಿ ಸೋಮಶೇಖರ್ ಆಪ್ತರಾಗಿದ್ದಾರೆ.
ಹೆಚ್.ವಿ ರಾಜೀವ್ ಕೆ.ಆರ್ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಅವರು ಕೆಲವು ದಿನಗಳಿಂದ ತಮ್ಮ ಮೂಲ ಪಕ್ಷ ಚಟುವಟಿಕೆಗಳಿಂದ ದೂರ ಉಳಿದಿದ್ದು, ಕಾಂಗ್ರೆಸ್ ಅಂಗಳದಲ್ಲಿ ನಿಂತಿದ್ದಾರೆ. ಅಲ್ಲದೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಶುರುವಾಯ್ತು ಪಕ್ಷಾಂತರ: ಕಾಂಗ್ರೆಸ್ ತೊರೆದು ವಾಪಸ್ ಬಿಜೆಪಿ ಸೇರ್ಪಡೆಗೆ ಮುಂದಾದ ಮಾಜಿ ಶಾಸಕ!
ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಹೆಚ್.ವಿ ರಾಜೀವ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಕೇವಲ ಒಂದೂವರೆ ವರ್ಷದಲ್ಲಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಶಾಸಕಾರಿಗಿದ್ದ ಎಸ್.ಎ ರಾಮದಾಸ್ ಅವರಿಗೆ ಟಿಕೆಟ್ ತಪ್ಪಿ ತಮಗೆ ಸಿಗುತ್ತದೆ ಎಂಬ ಗ್ಯಾರೆಂಟಿಯಲ್ಲಿದ್ದರು.
ತಮಗೆ ಟಿಕೆಟ್ ಸಿಗುತ್ತದೆ ಎಂದು ಕೇಂದ್ರ ಹಾಗೂ ರಾಜ್ಯ ನಾಯಕರಿಂದ ಸೂಚನೆಯನ್ನೂ ಪಡೆದಿದ್ದ ಹೆಚ್.ವಿ ರಾಜೀವ್ ಸಾಕಷ್ಟು ಪ್ರಚಾರವನ್ನೂ ಮಾಡಿದ್ದರು. ಆದರೆ ಟಿಕೆಟ್ ಘೋಷಣೆಯಾದಾಗ ಆಘಾತಕ್ಕೆ ಒಳಗಾದರು. ಬ್ರಾಹ್ಮಣ ಸಮುದಾಯದವರೇ ಆದ ಬಿಜೆಪಿ ನಗರ ಅಧ್ಯಕ್ಷ ಎಸ್.ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ಪಕ್ಷದ ಚಟುವಟಿಕೆಯಿಂದ ದೂರ ಉಳಿದರು. ಇದೀಗ ಕಮಲ ತೊರೆದು ಕೈ ಹಿಡಿಯಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 am, Sun, 24 March 24