ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು: ಕಾಲೇಜು ಲವ್​ ಸ್ಟೋರಿ ಬಿಚ್ಚಿಟ್ಟ ಸಿದ್ದರಾಮಯ್ಯ

| Updated By: ರಮೇಶ್ ಬಿ. ಜವಳಗೇರಾ

Updated on: May 23, 2024 | 10:43 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮೇ 23) ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಕಾಲೇಜು ದಿನಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕಾಲೇಜು ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಎಂದುಕೊಂಡಿದ್ದ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು: ಕಾಲೇಜು ಲವ್​ ಸ್ಟೋರಿ ಬಿಚ್ಚಿಟ್ಟ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us on

ಮೈಸೂರು, (ಮೇ 23): ನನಗೂ ಅಂತರ್ಜಾತಿ ವಿವಾಹವಾಗುವ(inter caste Marriage) ಆಸೆ ಇತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಪ್ರೇಮಾಂಕುರದ ಕಹಾನಿ ಬಿಚ್ಚಿಟ್ಟಿದ್ದಾರೆ. ಮೈಸೂರಿನ (Mysuru) ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ ಎಂದು ಹೇಳಿದರು. ಈ ಮೂಲಕ ವಿದ್ಯಾರ್ಥಿ ಜೀವನದಲ್ಲಿನ ಲವ್​ ಸ್ಟೋರಿಯನ್ನು ನೆನಪು ಮಾಡಿಕೊಂಡಿದ್ದಾರೆ.

ನನಗೂ ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೂ ಒಪ್ಪಲಿಲ್ಲ. ಅವರ ಮನೆಯವರೂ ಒಪ್ಪಲಿಲ್ಲ. ಹಾಗಾಗಿ ನಮ್ಮ ಜನಾಂಗದ ಹುಡುಗಿಯನ್ನೇ ಮದುವೆ ಆಗಬೇಕಾಯಿತು ಎಂದು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. ಇದರೊಂದಿಗೆ ಪರೋಕ್ಷವಾಗಿ ಕಾಲೇಜು ದಿನಗಳಲ್ಲಿ ಓರ್ವ ಹುಡುಗಿಯನ್ನು ಇಷ್ಟಪಟ್ಟಿರುವುದನ್ನು ತಿಳಿಸಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕಾರಿಗೆ ಚಾಲಕನಾದ ಸಚಿವ ಭೈರತಿ ಸುರೇಶ್

ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ. ನಮ್ಮ ಸರ್ಕಾರ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಈ ಮೂಲಕ ಅಂತರ್ಜಾತಿ ವಿವಾಹಗಳ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 pm, Thu, 23 May 24