ಮೈಸೂರು, ಸೆಪ್ಟೆಂಬರ್ 11: ಸಿಎಂ ಸಿದ್ದರಾಮಯ್ಯನವರ (Siddaramaiah) ಮಾತು ಯಾವುದೇ ಬಣ್ಣ ಕಟ್ಟಿದ ಮಾತಲ್ಲ. ಅವರು ಏನೇ ಹೇಳಿದರು ನೇರವಾಗಿ ಹೇಳುತ್ತಾರೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ. ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಜಾರಿಮಾಡಿದ್ದು ಇದೇ ಸಿದ್ದರಾಮಯ್ಯ. ಅವರು ಅಂಧಕಾರ ಮಾಡಲು ಬಂದಿಲ್ಲ, ಬೆಳಕು ನೀಡಲು ಬಂದಿದ್ದಾರೆ. ಬಡವರ ಪರ ಸಾಕಷ್ಟು ಯೋಜನೆ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತೆ. ಯೋಜನೆಗಳ ಮೂಲಕ ಸಿದ್ದರಾಮಯ್ಯ ಬಡವರಿಗೆ ಬೆಳಕಾಗಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಮೊದಲ ಬಾರಿಗೆ ಕೆಂಪೇಗೌಡ ಜಯಂತಿ ಮಾಡಿದ್ದು ನಮ್ಮ ಸರ್ಕಾರ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಸಹ ನಮ್ಮ ಸರ್ಕಾರ. ಏರ್ಪೋರ್ಟ್ಗೆ ನಾಡಪ್ರಭು ಕೆಂಪೇಗೌಡರ ಹೆಸರಿಟ್ಟಿದ್ದು ನಾವೇ. ಶ್ರೀಗಳು ನನ್ನ ಮೇಲೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿದ್ದಾರೆ. ಬಾಲಗಂಗಾಧರನಾಥಶ್ರೀ, ನಿರ್ಮಲಾನಂದನಾಥಶ್ರೀಗೆ ಚಿರಋಣಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಧರ್ಮದ ಪಾಲನೆ ಮಾಡುತ್ತಿದ್ದಾರೆ: ಕೋಡಿ ಶೀಗಳು
ನಾವು ಆಕಸ್ಮಿಕವಾಗಿ ಬೇರೆ ಜಾತಿ ಧರ್ಮದಲ್ಲಿ ಹುಟ್ಟಿದ್ದೇವೆ. ನಾವು ವಿಶ್ವ ಮಾನವರಾಗಬೇಕೋ ಅಥವಾ ಅಲ್ಪ ಮಾನವರಾಗಬೇಕೋ ಎಂದು ಪ್ರಶ್ನಿಸಿದರು. ಕುವೆಂಪು ಅವರ ವಿಶ್ವಮಾನವ ಸಂದೇಶ ಪ್ರಸ್ತಾಪಿಸಿದರು. ಕೆಲವರು ಮನುಷ್ಯ ಮನುಷ್ಯರ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ಧರ್ಮ ಅಂದರೆ ಬದುಕುವ ಶೈಲಿ. ಧರ್ಮಕ್ಕಾಗಿ ಮನುಷ್ಯ ಇಲ್ಲ, ಮನುಷ್ಯನಿಗಾಗಿ ಧರ್ಮ ಇರುವುದು. ದಯೆ ಕರುಣೆಯಿಂದ ನೋಡುವುದೆ ಧರ್ಮ. ದಯೆ, ಕರುಣೆ ಇಲ್ಲದಿರುವುದು ಧರ್ಮವೇ ಅಲ್ಲ ಎಂದು ಹೇಳಿದರು.
ಮಠ ತುಂಬಾ ಸೊಗಸಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಮೈಸೂರು ನಗರಕ್ಕೆ ಇನ್ನು ಮುಂದೆ ಯಾವುದೇ ಸ್ವಾಮೀಜಿಗಳು ಬಂದರು ಇಲ್ಲೇ ಉಳಿದುಕೊಳ್ಳಬಹುದು. ಆದಿ ಚುಂಚನಗಿರಿ ಪ್ರಾಚೀನವಾದ ಕ್ಷೇತ್ರ. ಅದು ಈಶ್ವರನ ತಪೋ ಭೂಮಿ. ಇಂದು ಬಹಳ ಹೆಮ್ಮರವಾಗಿ ಬೆಳೆದಿದೆ. ಇದರಲ್ಲಿ ಬಾಲಗಂಗಾಧರ ನಾಥ ಸ್ವಾಮಿಗಳ ಪಾತ್ರ ದೊಡ್ಡದು ಎಂದು ನಾಥ ಪಂಥದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವರಿಸಿದರು.
ನಾಥ ಅಂದರೆ ಜಾತಿಹಿತವಾದ ಜಾತ್ಯಾತೀತವಾದ ಪಂಥ. ನಾವು ಮೂಲತಃ ಮನುಷ್ಯರು ಬೆಳೆಯುತ್ತಾ ಜಾತಿ ಮಾಡಿಕೊಂಡಿದ್ದೇವೆ. ಸಮಾಜದಲ್ಲಿ ಅಸಮಾನತೆ ನಿರ್ಮಾಣವಾಗಿದೆ. ಸಾಮಾಜಿಕ ಆರ್ಥಿಕ ಅಸಮಾನತೆ ಇದೆ. ಮೇಲು ಕೀಳು ಅನ್ನೋ ಭಾವನೆ ಇದೆ. ಇದನ್ನು ತೊಡೆದು ಹಾಕಲು ನಾಥ ಪಂಥ. ನಾನು ಮೊದಲು ಬಾಲಗಂಗಾಧರ ನಾಥ ಸ್ವಾಮೀಜಿ ಅವರನ್ನು ನೋಡಿದ್ದು ವಕೀಲನಾಗಿದ್ದಾಗ. ನನ್ನ ಸೀನಿಯರ್ ಚಿಕ್ಕಬೋರಯ್ಯ ಪ್ರತಿ ವರ್ಷ ನನ್ನನ್ನು ಆದಿ ಚುಂಚನಗಿರಿಗೆ ಕರೆದುಕೊಂಡು ಹೋಗುತ್ತಿದ್ದರು. ಆದಿ ಚುಂಚನಗಿರಿಯಲ್ಲಿ ಪೂಜೆ ಮಾಡಿಸುತ್ತಿದ್ದರು.
ಇದನ್ನೂ ಓದಿ: ಪಕ್ಷಾಂತರಿ ಸಿದ್ದರಾಮಯ್ಯ ಹಿಂದೊಮ್ಮೆ ಬಿಜೆಪಿ ಬೆಂಬಲಿತ ಸರ್ಕಾರದಿಂದಲೂ ಫಲ ಉಂಡಿದ್ದರು: ಆರ್ ಅಶೋಕ, ಬಿಜೆಪಿ ಶಾಸಕ
ಸಾವಿರಾರು ವರ್ಷ ಶೂದ್ರ ವರ್ಗ ಶಿಕ್ಷಣದಿಂದ ವಂಚಿತರಾಗಿದ್ದರು. ಸಂವಿಧಾನ ಬಂದ ಮೇಲೆ ಎಲ್ಲರಿಗೂ ಶಿಕ್ಷಣ ಸಿಕ್ಕಿದೆ. ಈಗ ಶಿಕ್ಷಣ ಎಲ್ಲರ ಹಕ್ಕು. ಶೂದ್ರರಂತೆ ಮಹಿಳೆಯರು ವಂಚಿತರಾಗಿದ್ದರು. ನಮಗೆ ಅದೃಷ್ಟ ಜನರ ಆಶೀರ್ವಾದ ಇತ್ತು. ಅದಕ್ಕೆ ರಾಜಕಾರಣದಲ್ಲಿ ಈ ಹಂತದಲ್ಲಿದ್ದೇವೆ. ಯಾರು ಜನರ ಪ್ರೀತಿ ವಿಶ್ವಾಸ ಗಳಿಸುತ್ತಾರು ಅವರು ನಾಯಕರಾಗುತ್ತಾರೆ.
ವಿದ್ಯಾರ್ಥಿ ನಿಲಯದಲ್ಲಿ 200 ವಿದ್ಯಾರ್ಥಿಗಳಿಗೆ ಆಶ್ರಯ ನೀಡಲಾಗಿದೆ. ವಿದ್ಯೆ ಕೊಡುವುದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿ ಎಲ್ಲರಿಗೂ ವಿದ್ಯೆ ಸಿಕ್ಕಾಗ ಬೆಳೆಯಲು ಸ್ವಾಭಿಮಾನದಿಂದ ಬದುಕಲು ಸಾಧ್ಯ. ಎಲ್ಲರೂ ಗುಣಮಟ್ಟದ ವೈಜ್ಞಾನಿಕ ವೈಚಾರಿಕ ವಿದ್ಯೆ ಕಲಿಯಬೇಕು. ಓದುವಾದು ಮಾತನಾಡುವುದು ವಿದ್ಯೆಯಲ್ಲ. ನಮ್ಮ ಯೋಚನೆ ವಿಚಾರ ವೈಚಾರಿಕ ವೈಜ್ಞಾನಿಕವಾಗಿರಬೇಕು. ವಿದ್ಯೆ ಕಲಿತು ಜಾತಿವಾದಿಗಳಾದರೆ ಪ್ರಯೋಜನವಿಲ್ಲ. 14ರಂದು ಸಂವಿಧಾನದ ಪೀಠಿಕೆ ಹೇಳಿ ಕೊಡುವ ಕೆಲಸ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.