
ಮೈಸೂರು, ಜನವರಿ 05: ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಕುರ್ಚಿ ಕದನ ಇನ್ನೂ ಅಂತ್ಯ ಕಾಣದಿರುವ ಹಿನ್ನೆಲೆಯಲ್ಲಿ ಇದೀಗ ದಲಿತ ನಾಯಕರು ಹಾಗೂ ದಲಿತ ಸಮುದಾಯದ ಸ್ವಾಮೀಜಿಗಳು ಅಖಾಡಕ್ಕೆ ಇಳಿದಿದ್ದಾರೆ. ವಿಶೇಷವೆಂದರೆ, ಈ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿಯೇ ನಡೆದಿದೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ದಲಿತ ಸಮಾಜದ ಪ್ರಮುಖ ಮುಖಂಡರು ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ನಾಯಕರು, ಸಿದ್ದರಾಮಯ್ಯ ಅವರು ಅಹಿಂದ ರಾಜಕಾರಣದಲ್ಲಿ ‘ಅ’ ಮತ್ತು ‘ದ’ ಅಂದರೆ ಅಲ್ಪಸಂಖ್ಯಾತರು ಹಾಗೂ ದಲಿತರ ಪಾತ್ರವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ, ದಲಿತ ಸಮುದಾಯದ ನಾಯಕನನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಸಭೆಯಲ್ಲಿ ಜೋರಾಗಿ ಕೇಳಿಬಂತು. “ನನ್ನ ನಂತರ ದಲಿತರು ಸಿಎಂ” ಎಂದು ಸಿದ್ದರಾಮಯ್ಯ ಘೋಷಿಸಿದರೆ, ಅವರು ದಿ. ದೇವರಾಜ ಅರಸು ಅವರಿಗಿಂತಲೂ ಒಂದು ಹಂತ ಮೇಲಕ್ಕೆ ಹೋಗುತ್ತಾರೆ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ. ಪರಮೇಶ್ವರ್ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ ಸ್ವಾಮೀಜಿ, ಡಿ.ಕೆ. ಶಿವಕುಮಾರ್ ಕೂಡ ಮುಂದೆ ಮುಖ್ಯಮಂತ್ರಿ ಆಗಲಿ, ಆದರೆ ಮೊದಲು ದಲಿತರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. 75 ವರ್ಷಗಳಿಂದ ಕಾಂಗ್ರೆಸ್ ಜೊತೆ ನಿಂತಿರುವ ದಲಿತ ಸಮುದಾಯಕ್ಕೆ ನ್ಯಾಯ ಸಿಗಬೇಕು. ಈಗಾಗಲೇ ಶೇ.70ರಷ್ಟು ದಲಿತರು ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ, ಬೇಡಿಕೆ ಈಡೇರದಿದ್ದರೆ ಉಳಿದ ಶೇ.30ರಷ್ಟು ಜನರೂ ದೂರವಾಗುತ್ತಾರೆ ಎಂದು ಸಭೆಯಲ್ಲಿ ಆಕ್ರೋಶ ಹೊರಹಾಕಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.