AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಅಧಿಕೃತ ಎಂಟ್ರಿ: ಕ್ಷೇತ್ರ ಯಾವುದು ಗೊತ್ತಾ?

ನಿನ್ನೆ (ಜನವರಿ 04) ಅಷ್ಟೇ ಮಾಜಿ ಸಚಿವ, ಬಿಜೆಪಿ ನಾಯಕ ರಾಮದಾಸ್ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ ಇಂದು (ಜನವರಿ 05) ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅಧಿಕೃತವಾಗಿ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ. ಈ ಬಗ್ಗೆ ಅವರೇ ಖಾಸಗಿ ಕಾರ್ಯಕ್ರಮವೊಂದರಲ್ಲಿ ಘೋಷಣೆ ಮಾಡಿದ್ದಾರೆ. ಹಾಗಾದ್ರೆ, ಮುಂದಿನ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರ ಯಾವುದು ಎನ್ನುವ ಮಾಹಿತಿ ಇಲ್ಲಿದೆ.

ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಅಧಿಕೃತ ಎಂಟ್ರಿ: ಕ್ಷೇತ್ರ ಯಾವುದು ಗೊತ್ತಾ?
Pratap Simha
ರಮೇಶ್ ಬಿ. ಜವಳಗೇರಾ
|

Updated on: Jan 05, 2026 | 11:31 PM

Share

ಮೈಸೂರು, (ಜನವರಿ 05): ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ (Pratap Simha) ಮೊದಲ ಹೆಜ್ಜೆಯಲ್ಲೇ ಸಂಸದರಾಗಿ ರಾಜಕೀಯ ಪ್ರವೇಶ ಮಾಡಿದ್ದು, ಎರಡು ಬಾರಿ ಮೈಸೂರು-ಕೊಡಗು ಸಂಸದರಾಗಿದ್ದಾರೆ. ಆದ್ರೆ, ಪ್ರತಾಪ್ ಸಿಂಹಗೆ 2024 ಲೋಕಸಭಾ ಟಿಕೆಟ್ ಕೈತಪ್ಪಿತ್ತು.ಇದರೊಂದಿಗೆ ಹ್ಯಾಟ್ರಿಕ್ ಕನಸು  ನುಚ್ಚುನೂರಾಗಿತ್ತು. ಆದರೆ ಇದೀಗ ಪ್ರತಾಪ್ ಸಿಂಹ ರಾಷ್ಟ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣದತ್ತ (Karnataka State politics) ಹೆಜ್ಜೆ ಇಟ್ಟಿದ್ದಾರೆ. ಹೌದು…ಮೈಸೂರಿನಲ್ಲಿಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಅಲ್ಲದೇ ತಮಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವ ಒಲವಿದೆ ಎಂಬ ಕುರಿತೂ ಸಹ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅವರ ಮುಂದಿನ ರಾಜಕೀಯ ಹಾದಿ ಕುರಿತು ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.

ಮುಂದಿನ ರಾಜಕೀಯ ಹೆಜ್ಜೆ ಬಗ್ಗೆ  ಸಿಂಹ ಮಾತು

ಪ್ರತಾಪ್ ಸಿಂಹ ಸ್ನೇಹ ಬಳಗದ ವತಿಯಿಂದ ಚಾಮರಾಜ ವಿಧಾನಸಭಾ ಕ್ಷೇತ್ರದ ಗ್ರೀನ್ ಹೆರಿಟೇಜ್ ಹೋಟೆಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಾಪ್ ಸಿಂಹ ಅವರು, ಸ್ನೇಹ ಬಳಗದ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಈ ವೇಳೆ ಬಳ್ಳಾರಿ ಗಲಭೆ, ಕೋಗಿಲು ಒತ್ತುವರಿ ತೆರವು ಬಗ್ಗೆ ಮಾತನಾಡಿದರು. ಅಲ್ಲದೇ ತಮ್ಮ ರಾಜಕೀಯದ ಮುಂದಿನ ನಡೆ ಬಗ್ಗೆ ಸಹ ಮಹತ್ವದ ಸುಳಿವು ಕೊಟ್ಟಿದ್ದಾರೆ. ರಾಜ್ಯ ರಾಜಕಾರಣಕ್ಕೆ ಯಾವಾಗ ಬರ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ನಾನು ಈ ಹಿಂದೆಯೇ ಹಲವು ಬಾರಿ ಹೇಳಿದ್ದೇನೆ. ಕೇಂದ್ರಕ್ಕೆ ಹೋಗಿಲ್ಲ ಎಂದರೆ, ರಾಜ್ಯದಲ್ಲಿ ಇರಲೇಬೇಕಲ್ಲವೇ? ಎಂದಿದ್ದಾರೆ. ಈ ಮೂಲಕ ಕರ್ನಾಟಕ ರಾಜಕೀಯ ಎಂಟ್ರಿ ಬಗ್ಗೆ ತಿಳಿಸಿದ್ದಾರೆ.

ಇದನ್ನೂ ನೋಡಿ: Mysuru: ಚುನಾವಣಾ ರಾಜಕೀಯಕ್ಕೆ ರಾಮದಾಸ್​​ ನಿವೃತ್ತಿ: ಕಾರಣ ಬಿಚ್ಚಿಟ್ಟ ಮಾಜಿ ಸಚಿವ

ಚಾಮರಾಜ ಕ್ಷೇತ್ರ ಆಯ್ಕೆ ಯಾಕೆ?

ಇನ್ನು ಚಾಮರಾಜ ವಿಧಾನಸಭಾ ಕ್ಷೇತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನಿಗೆ ಉತ್ತರಿಸಿದ ಪ್ರತಾಪ್ ಸಿಂಹ, ಚಾಮರಾಜ ಕ್ಷೇತ್ರ ಹಣದ ಪ್ಯಾಕೇಟ್ ಕೊಟ್ಟು ಗೆಲ್ಲುವ ಕ್ಷೇತ್ರ ಅಲ್ಲ. ಇಲ್ಲಿಯ ಮತದಾರರು ಕೆಲಸ ನೋಡಿ ಪ್ರೀತಿ ತೋರಿಸುವ ಜನ. ಒಕ್ಕಲಿಗ ಲೆಕ್ಕದಲ್ಲೇ ಈ ಕ್ಷೇತ್ರ ನೋಡುತ್ತಿಲ್ಲ. ಇಲ್ಲಿ ಎಲ್ಲ ರೀತಿಯ ವರ್ಗದ ಜನರಿದ್ದಾರೆ. ಪ್ರಜ್ಞಾವಂತ ಬುದ್ಧಿವಂತರಿದ್ದಾರೆ. ಹೀಗಾಗಿ ಸಹಜವಾಗಿ ನನ್ನ ಆಯ್ಕೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಸ್ಪರ್ಧೆ ಮಾಡುವ ವಿಧಾನಸಭಾ ಕ್ಷೇತ್ರ ಯಾವುದು?

ಇನ್ನು ಇಲ್ಲಿರುವ ನಮ್ಮ ಹಿತೈಷಿಗಳು ಎಲ್ಲರೂ ಚಾಮರಾಜ ಕ್ಷೇತ್ರದವರೇ ಆಗಿದ್ದಾರೆ. ಸದ್ಯ ಇಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಆದರೆ, ಶಂಕರಲಿಂಗೇಗೌಡ ಅವರಂತಹ ಜನಪರ ವ್ಯಕ್ತಿ, ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ ನಾಯಕನನ್ನು ಸತತವಾಗಿ 4 ಸಾರಿ ಗೆಲ್ಲಿಸಿರುವ ಕ್ಷೇತ್ರ (ಚಾಮರಾಜ) ಇದಾಗಿದೆ. ಒಳ್ಳೆಯತನಕ್ಕೆ ಬೆಲೆ ಕೊಡುವ, ಮಣೆ ಹಾಕುವ ಕ್ಷೇತ್ರ ಇದು. ಹೀಗಾಗಿ ಸಹಜವಾಗಿಯೇ ಈ ಬಗ್ಗೆ ಯೋಜನೆ ಮಾಡಿದ್ದೇನೆ. ನಮ್ಮ ಕಾರ್ಯಕರ್ತರು, ಹಿತೈಷಿಗಳ ಅಪೇಕ್ಷೆಯೂ ಇದೇ ಆಗಿದೆ. ಎಲ್ಲಾ ಸಾಧಕ, ಬಾಧಕಗಳನ್ನು ಯೋಚನೆ ಮಾಡಿ, ನಾನು ಕೂಡ ಚುನಾವಣೆಗೆ ಸಿದ್ಧತೆ ಆರಂಭಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಆ್ಯಕ್ಟೀವ್

ಈಗಾಗಲೇ ಪ್ರತಾಪ್ ಸಿಂಹ ಅವರು ಕೆಲ ತಿಂಗಳುಗಳಿಂದ ಚಾಮರಾಜ ಕ್ಷೇತ್ರದಲ್ಲಿ ಸದ್ದಿಲ್ಲದೇ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಕ್ಷೇತ್ರದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅಲ್ಲದೇ ಕ್ಷೇತ್ರದ ಸಭೆ ಸಮಾರಂಭಕ್ಕೂ ಹಾಜರಾಗುತ್ತಿದ್ದಾರೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕ್ಷೇತ್ರದ ಮುಖಂಡರ ಕಟುಂಬಸ್ಥರ ಜನ್ಮದಿನಕ್ಕೂ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಯಶ ಕೋರುವ ಮೂಲಕ ಗಮನಸೆಳೆಯುತ್ತಿದ್ದಾರೆ.

ಚಾಮರಾಜ ಕ್ಷೇತ್ರದ ರಿಸಲ್ಟ್​

ಇನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಹಿಂದಿನ ಫಲಿತಾಂಶವನ್ನು ನೋಡುವುದಾದರೆ 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎಲ್ ನಾಗೇಂದ್ರ ಅವರು ಕಾಂಗ್ರೆಸ್​​ನ ಕೆ, ಹರೀಶ್ ಗೌಡ ಎದುರು ಕೇವಲ 4094 ಮತಗಳ ಅಂತರದಿಂದ ಸೋಲು ಕಂಡಿದ್ದರು. ಹರೀಶ್ ಗೌಡ 72,931 ಮತಗಳು ಪಡೆದುಕೊಂಡಿದ್ದರೆ, ನಾಗೇಂದ್ರ 68,837 ಮತ ಪಡೆಯುವ ಮೂಲಕ ಭಾರೀ ಪೈಪೋಟಿ ನೀಡಿದ್ದರು. ಇನ್ನು 2018ರ ಚುನಾವಣೆಯಲ್ಲಿ ಇದೇ ನಾಗೇಂದ್ರ ಅವರು ಕಾಂಗ್ರೆಸ್​​​ನ ವಾಸು ಎದುರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇನ್ನು 2013ರ ಚುನಾವಣೆಯಲ್ಲಿ ನಾಗೇಂದ್ರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಒಟ್ಟಿನಲ್ಲಿ ಪ್ರತಾಪ್ ಸಿಂಹ ಹತ್ತು ವರ್ಷಗಳ ಕಾಲ ರಾಷ್ಟ್ರ ರಾಜಕಾರಣ ಮಾಡಿ ಇದೀಗ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡುತ್ತಿದ್ದು, ಭಾರೀ ಸಂಚಲನ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.