ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದವರು ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಪ್ರಶ್ನೆ

ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಕಾಡಿನಿಂದ ನಾಡಿಗೆ ಬಂದ ಗಜಪಡೆಗಳು ತಾಲೀಮು ಆರಂಭಿಸಿವೆ. ದಸರಾ ಉದ್ಘಾಟಕರ ಹೆಸರು ಸಹ ಅಂತಿಮವಾಗಿದೆ. ಸರ್ಕಾರ ಅದ್ದೂರಿಯಾಗಿ ದಸರಾ ನಡೆಸಲು ತೀರ್ಮಾನಿಸಿದೆ. ಈ ನಡುವೆ ದಸರಾ ಉದ್ಘಾಟಕರ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ಯಾಕೆ? ವಿವರಗಳು ಇಲ್ಲಿವೆ.

ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದವರು ಚಾಮುಂಡೇಶ್ವರಿಯನ್ನು ಒಪ್ಪಿ ಪುಷ್ಪಾರ್ಚನೆ ಮಾಡಿಯಾರೇ: ಪ್ರತಾಪ್ ಸಿಂಹ ಪ್ರಶ್ನೆ
ಪ್ರತಾಪ್ ಸಿಂಹ & ಬಾನು ಮುಷ್ತಾಕ್
Edited By:

Updated on: Aug 25, 2025 | 1:05 PM

ಮೈಸೂರು, ಆಗಸ್ಟ್ 25: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಎಂದರೆ ರಾಜ ಪರಂಪರೆ, ಗತಕಾಲದ ವೈಭವ. ಅಷ್ಟೇ ಅಲ್ಲ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಉತ್ಸವ. ಈ ಬಾರಿ ಸೆಪ್ಟೆಂಬರ್ 22ರಂದು ವಿಶ್ವವಿಖ್ಯಾತ ಮೈಸೂರು ದಸರಾಗೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಾಲನೆ ಸಿಗುತ್ತಿದೆ. ಅಂದಿನಿಂದ ಅಕ್ಟೋಬರ್ 2ರ ವರೆಗೆ, ಅಂದರೆ 11 ದಿನಗಳ ಕಾಲ ದಸರಾ ಕಲರವ ಜೋರಾಗಿರಲಿದೆ. ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಅಂತರರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡತಿ ಬಾನು ಮುಷ್ತಾಕ್ (Banu Mushtaq) ಅವರನ್ನು ಆಯ್ಕೆ ಮಾಡಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ.

ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಾಡಹಬ್ಬಕ್ಕೆ ಪ್ರತಿ ವರ್ಷ ಚಾಲನೆ ನೀಡಲಾಗುತ್ತದೆ. ಇದು ಧಾರ್ಮಿಕ ಹಬ್ಬ, ಹಿಂದುಗಳ ಹಬ್ಬ. ತಾಯಿ ಚಾಮುಂಡೇಶ್ವರಿ ಬಗ್ಗೆ ನಂಬಿಕೆ ಇಟ್ಟವರು ಆಕೆಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟಿಸುವುದು ಪರಂಪರೆ. ಆದರೆ ಸಿಎಂ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ಮುಸ್ಲಿಂ ಒಬ್ಬರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ ಎಂಬುದು ಮಾಜಿ ಸಂಸ್ ಪ್ರತಾಪ್ ಸಿಂಹ ಆರೋಪ.

ಬೂಕರ್ ಪ್ರಶಸ್ತಿಯನ್ನು ಪಡೆದಿರುವ ಬಾನು ಮುಷ್ತಾಕ್ ಅವರನ್ನು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮಾಡಿ, ಆದರೆ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಪ್ರತೀಕವಾಗಿರುವ ದಸರಾ ಉದ್ಘಾಟನೆಗೆ ಕರೆಯುವುದು ಸೂಕ್ತವೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ರವರು ಮಾಡಿದ ಭಾಷಣದ ವಿಡಿಯೋ ತುಣುಕನ್ನು ಎಕ್ಸ್​​ ತಾಣದಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ, ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಮುಷ್ತಾಕ್ ಬಾನು ಎಂದು ಪ್ರಶ್ನಿಸಿದ್ದಾರೆ.

ಪ್ರತಾಪ್ ಸಿಂಹ ಎಕ್ಸ್ ಸಂದೇಶ


ಈ ಹಿಂದೆ 2017ರಲ್ಲಿ ನಿಸಾರ್ ಅಹಮದ್ ಸಹ ದಸರಾ ಉದ್ಘಾಟನೆ ಮಾಡಿದ್ದರು. ಅವರು ತಾಯಿ ಚಾಮುಂಡೇಶ್ವರಿಯ ದೇಗುಲದ ಒಳಗೆ ಹೋಗದೆ ನೇರವಾಗಿ ವೇದಿಕೆ ಕಾರ್ಯಕ್ರಮಕ್ಕೆ ಬಂದು ದಸರಾ ಉದ್ಘಾಟನೆ ಮಾಡಿದ್ದರು. ಅಷ್ಟೇ ಅಲ್ಲ, ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾಸ್ತಿಕರಾಗಿದ್ದ ಗಿರೀಶ್ ಕಾರ್ನಾಡ್ ಅವರಿಗೆ ದಸರಾ ಉದ್ಘಾಟಿಸಲು ಆಯ್ಕೆ ಮಾಡಿದ್ದರು. ಎರಡು ವರ್ಷಗಳ ಹಿಂದೆ ಹಂಸಲೇಖ ಅವರಿಗೂ ಅವಕಾಶ ನೀಡಿದರು. ಆಗಲೂ ಸಹ ಉದ್ಘಾಟಕರ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ

ಸದ್ಯ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರನ್ನಾಗಿ‌ ಮುಸ್ಲಿಂ ಸಮುದಾಯದ ಮಹಿಳೆಯ ಆಯ್ಕೆ ವಿಚಾರವಾಗಿ ಮಾಜಿ ಸಂಸದ ಪ್ರತಾಪ ಸಿಂಹ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಕಿಡಿ ಹಚ್ಚಿದ್ದಾರೆ. ಇದು ಮುಂದೆ ರಾಜ್ಯಾದ್ಯಂತ ಯಾವ ರೀತಿಯಾದ ಚರ್ಚೆಗೆ ಕಾರಣವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ