ಪ್ರವಾಸಿಗರ ಗಮನಕ್ಕೆ: ಈ ಎರಡು ದಿನ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿಷೇಧ
ಸೆಪ್ಟೆಂಬರ್ 1 ಹಾಗೂ 2ರಂದು ಮೈಸೂರು ಅರಮನೆ ವೀಕ್ಷಣೆ ಮಾಡುವ ಪ್ಲ್ಯಾನ್ ಇದ್ದರೆ ಕ್ಯಾನ್ಸಲ್ ಮಾಡಿಕೊಂಡು ಬಿಡಿ. ಯಾಕಂದ್ರೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಅರಮನೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಆ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ.

ಬೆಂಗಳೂರು/ಮೈಸೂರು, (ಆಗಸ್ಟ್ 25): ರಾಷ್ಟ್ರಪತಿ ದ್ರೌಪದಿ ಮುರ್ಮು (president droupadi murmu) ಅವರು ಸೆಪ್ಟೆಂಬರ್ 1 ಮತ್ತು 2ರಂದು ಕರ್ನಾಟಕ (Karnataka) ಪ್ರವಾಸ ಕೈಗೊಳ್ಳಲಿದ್ದು, ಮೈಸೂರು ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿಯೂ ಭಾಗವಹಿಸಲಿದ್ದಾರೆ. ಇನ್ನು ಇದೇ ವೇಳೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರು ಅರಮನೆಗೆ (Mysuru palace) ಸಹ ಭೇಟಿ ನೀಡಲಿದ್ದಾರೆ. ಹೀಗಾಗಿ ಸೆಪ್ಟೆಂಬರ್ 1 ಹಾಗೂ 2ರಂದು ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (All India Institute of Speech and Hearing – AIISH) ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಬರುತ್ತಿದ್ದಾರೆ. ಈ ಸಂಸ್ಥೆಯು ವಾಕ್ ಮತ್ತು ಶ್ರವಣ ದೋಷಗಳಿರುವವರಿಗೆ ಚಿಕಿತ್ಸೆ ಮತ್ತು ತರಬೇತಿಯನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಇದನ್ನೂ ಓದಿ: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಘೋಷಣೆ
ಅರಮನೆಗೆ ರಾಷ್ಟ್ರಪತಿ ಭೇಟಿ
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 1 ರಂದು ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ. ಇದು ಮೈಸೂರಿನ ಇತಿಹಾಸದಲ್ಲಿ ಒಂದು ಸ್ಮರಣೀಯ ಕ್ಷಣವಾಗಿದ್ದು, ರಾಷ್ಟ್ರಪತಿಯವರ ಭೇಟಿಗಾಗಿ ಭರದ ಸಿದ್ಧತೆಗಳು ನಡೆದಿವೆ. ಈ ಭೇಟಿಯು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಪತ್ರದ ಮೇರೆಗೆ ನಡೆಯುತ್ತಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಸೆ.1 ರಿಂದ ಸೆ.2ರ ಮಧ್ಯಾಹ್ನದವರೆಗೆ ಮೈಸೂರು ಅರಮನೆಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.
ರಾಜವಂಶಸ್ಥರಿಂದ ಆಹ್ವಾನ
ಇನ್ನು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದು ಮೈಸೂರು ಅರಮನೆಗೆ ಭೇಟಿ ನೀಡುವಂತೆ ಕೋರಿದ್ದರು. ಅವರ ಆಹ್ವಾನವನ್ನು ಸ್ವೀಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 1 ರಂದು ಅರಮನೆಗೆ ಭೇಟಿ ನೀಡಲಿದ್ದಾರೆ. ಇದು ರಾಜವಂಶಸ್ಥರ ಮೇಲಿನ ಗೌರವ ಮತ್ತು ಮೈಸೂರು ಅರಮನೆಯ ಇತಿಹಾಸ, ಸಂಸ್ಕೃತಿಯ ಬಗ್ಗೆ ರಾಷ್ಟ್ರಪತಿಗಳ ಆಸಕ್ತಿಯನ್ನು ತೋರಿಸುತ್ತದೆ.
ರಾಷ್ಟ್ರಪತಿಯವರ ಭೇಟಿಯ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 1 ರಂದು ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲದೆ, ಭದ್ರತಾ ದೃಷ್ಟಿಯಿಂದ ಸೆಪ್ಟೆಂಬರ್ 2 ರ ಮಧ್ಯಾಹ್ನದವರೆಗೂ ಪ್ರವೇಶ ನಿಷೇಧ ಮುಂದುವರಿಯಲಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಈ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವಂತೆ ಅರಮನೆ ಮಂಡಳಿ ಮನವಿ ಮಾಡಿದೆ.
ಇನ್ನು ರಾಷ್ಟ್ರಪತಿಯವರ ಭೇಟಿ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅರಮನೆಯ ಸುತ್ತಮುತ್ತ ಮತ್ತು ರಾಷ್ಟ್ರಪತಿಗಳು ಪ್ರಯಾಣಿಸುವ ಮಾರ್ಗಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
Published On - 4:33 pm, Mon, 25 August 25




