ಮೈಸೂರಿನ ಕೆ.ಎಸ್ ಮಧುಸೂದನ್ಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರಕಟ; ಸೆ. 5ರಂದು ರಾಷ್ಟ್ರಪತಿಯಿಂದ ಪ್ರದಾನ
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ 45 ಶಿಕ್ಷಕರಿಗೆ ಕೇಂದ್ರ ಶಿಕ್ಷಣ ಇಲಾಖೆಯಿಂದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಘೋಷಿಸಲಾಗಿದೆ. ಈ 45 ಶಿಕ್ಷಕರಲ್ಲಿ ಕರ್ನಾಟಕದ ಓರ್ವ ಶಿಕ್ಷಕರು ಕೂಡ ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಮೈಸೂರಿನ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಕೆ.ಎಸ್. ಮಧುಸೂದನ್ ಅವರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ನವದೆಹಲಿ, ಆಗಸ್ಟ್ 25: ಶಿಕ್ಷಕರ ದಿನಾಚರಣೆ (Teacher’s Day) ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಇಲಾಖೆಯಿಂದ ಈ ವರ್ಷದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗಳ ಪಟ್ಟಿಯನ್ನು (National Teachers Award List) ಪ್ರಕಟಿಸಲಾಗಿದೆ. ಈ ವರ್ಷ 45 ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಅವರಲ್ಲಿ ಕರ್ನಾಟಕದ ಮೈಸೂರಿನ ಶಿಕ್ಷಕರು ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೈಸೂರಿನ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ವಿಜ್ಞಾನ ಶಿಕ್ಷಕರಾಗಿರುವ ಕೆ.ಎಸ್. ಮಧುಸೂದನ್ ಅವರಿಗೆ ಈ ವರ್ಷದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಘೋಷೆಯಾಗಿದೆ. ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧುಸೂದನ್ ಸೇರಿದಂತೆ ಒಟ್ಟು 45 ಶಿಕ್ಷಕರಿಗೆ ಪ್ರಶಸ್ತಿ ನೀಡಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು 45 ಶಾಲಾ ಶಿಕ್ಷಕರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಿದ್ದಾರೆ. ಶಿಕ್ಷಣದಲ್ಲಿ ಮತ್ತು ಯುವಜನರ ಬೆಳವಣಿಗೆಗೆ ಸಹಾಯ ಮಾಡಿದ್ದಕ್ಕಾಗಿ ಶಿಕ್ಷಕರಿಗೆ ಧನ್ಯವಾದ ಹೇಳಲು ಈ ಕಾರ್ಯಕ್ರಮವು ಪ್ರತಿ ವರ್ಷ ನಡೆಯುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಯೊಬ್ಬ ಶಿಕ್ಷಕರಿಗೆ ಪ್ರಮಾಣಪತ್ರ, ನಗದು ಬಹುಮಾನ ಮತ್ತು ಬೆಳ್ಳಿ ಪದಕವನ್ನು ನೀಡಲಾಗುತ್ತದೆ. ಪ್ರತಿವರ್ಷ ಶಿಕ್ಷಕರ ದಿನವಾದ ಸೆಪ್ಟೆಂಬರ್ 5ರಂದು ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ 17 ಸಾವಿರ ಶಿಕ್ಷಕರ ನೇಮಕ: ಮಧು ಬಂಗಾರಪ್ಪ
ಈ ವರ್ಷ ಆಯ್ಕೆಯಾದ ಶಿಕ್ಷಕರಲ್ಲಿ ಮೂವರು ಮಹಾರಾಷ್ಟ್ರದವರು, ಮೂವರು ಬಿಹಾರದವರನ್ನು ಆಯ್ಕೆ ಮಾಡಲಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್, ಉತ್ತರ ಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ, ಹರಿಯಾಣ, ಪುದುಚೆರಿ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಲಕ್ಷದ್ವೀಪ, ಜಾರ್ಖಂಡ್, ಅಸ್ಸಾಂ, ತ್ರಿಪುರ, ಮೇಘಾಲಯ, ಸಿಕ್ಕಿಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಂಡಮಾನ್ ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಗೋವಾ, ರಾಜಸ್ಥಾನ, ಚಂಡೀಗಢ, ಉತ್ತರಾಖಂಡ, ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶದ ತಲಾ ಓರ್ವ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ ದ್ರೌಪದಿ ಮುರ್ಮು
ಪ್ರಶಸ್ತಿ ಪುರಸ್ಕೃತರಿಗೆ ಪ್ರಮಾಣಪತ್ರ, 50,000 ರೂ. ನಗದು ಬಹುಮಾನ ಮತ್ತು ಬೆಳ್ಳಿ ಪದಕ ನೀಡಲಾಗುವುದು. ಶಿಕ್ಷಣ ಸಚಿವಾಲಯವು ಆಯ್ಕೆಯಾದ ಶಿಕ್ಷಕರಿಗೆ ಸೆಪ್ಟೆಂಬರ್ 3ರಿಂದ ಸೆಪ್ಟೆಂಬರ್ 6ರವರೆಗೆ ನವದೆಹಲಿಯ ಹೋಟೆಲ್ ‘ದಿ ಅಶೋಕ್’ನಲ್ಲಿ ತಂಗಲು ವ್ಯವಸ್ಥೆ ಮಾಡಿದೆ. ಶಿಕ್ಷಕರ ಸಭೆ ಸೆಪ್ಟೆಂಬರ್ 3ದು ಸಂಜೆ 5 ಗಂಟೆಗೆ ಹೋಟೆಲ್‌ನಲ್ಲಿ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Mon, 25 August 25




