ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಆಗ್ತಾರಾ ನಿಖಿಲ್ ಕುಮಾರಸ್ವಾಮಿ? ಜಿಡಿ ಹರೀಶ್ ಗೌಡ ಅಚ್ಚರಿ ಹೇಳಿಕೆ
ಹೆಚ್‌ಡಿಕೆ ಕೇಂದ್ರ ಸಚಿವರಾಗಿರುವ ಕಾರಣ ವಾರದಲ್ಲಿ ನಾಲ್ಕು ದಿನ ದೆಹಲಿಯಲ್ಲಿದ್ದು, ಎಲ್ಲಾ ರಾಜ್ಯಗಳಿಗೆ ಹೋಗಬೇಕು. ಹೀಗಾಗಿ ವಾರದಲ್ಲಿ 1 ದಿನ ಕರ್ನಾಟಕಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ಯಾರಿಗೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಇದೀಗ ನಿಖಿಲ್ ಕುಮಾರಸ್ವಾಮಿ ಪಕ್ಷವನ್ನ ರಾಜ್ಯದಲ್ಲಿ ಕಟ್ಟುತ್ತಾರೆ ಎಂದು ಶಾಸಕ ಜಿಡಿ ಹರೀಶ್ ಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಮೈಸೂರು, ಜು.27: ಇತ್ತೀಚೆಗಷ್ಟೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ(H. D. Kumaraswamy) ಅವರು ನೇತೃತ್ವದಲ್ಲಿ ಸಭೆ ನಡೆಸಿ, ಪಕ್ಷವನ್ನ ಬಲಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪಕ್ಷದ ನಾಯಕರುಗಳು ಚರ್ಚಿಸಿದ್ದರು. ಅದರಲ್ಲೂ ಕುಮಾರಸ್ವಾಮಿ ಅವರು ಸಚಿವರಾಗಿದ್ದರಿಂದ ಪಕ್ಷ ಸಂಘಟನೆ ಕಡೆ ಗಮನಹರಿಸುವುದು ಸಾಧ್ಯವಿಲ್ಲ. ಹೀಗಾಗಿ ಆ ಜವಾಬ್ದಾರಿ ಹೊರಲು ಸಮರ್ಥ ನಾಯಕರ ಹೆಸರುಗಳಲ್ಲಿ ನಿಖಿಲ್ ಅವರ ಹೆಸರು ಕೂಡ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಶಾಸಕ ಜಿಡಿ ಹರೀಶ್ ಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಇಂದು(ಶನಿವಾರ) ಮೈಸೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಡಿ ಹರೀಶ್ ಗೌಡ, ‘ ಹೆಚ್‌ಡಿಕೆ ಕೇಂದ್ರ ಸಚಿವರಾಗಿರುವ ಕಾರಣ ವಾರದಲ್ಲಿ ನಾಲ್ಕು ದಿನ ದೆಹಲಿಯಲ್ಲಿದ್ದು, ಎಲ್ಲಾ ರಾಜ್ಯಗಳಿಗೆ ಹೋಗಬೇಕು. ಹೀಗಾಗಿ ವಾರದಲ್ಲಿ 1 ದಿನ ಕರ್ನಾಟಕಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ಯಾರಿಗೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಹೆಚ್.ಡಿ.ಕುಮಾರಸ್ವಾಮಿ ಅವರು ನಮ್ಮೆಲ್ಲರ ಜತೆ ಚರ್ಚೆ ನಡೆಸಿದ್ದಾರೆ. ಇದರಿಂದ ನಿಖಿಲ್ ಕುಮಾರಸ್ವಾಮಿ ಪಕ್ಷವನ್ನ ರಾಜ್ಯದಲ್ಲಿ ಕಟ್ಟುತ್ತಾರೆ. ಪಕ್ಷದ ನಾಯಕತ್ವದ ಬಗ್ಗೆ ಮಾತನಾಡುತ್ತಿದಂತೆ ಮಾಹಿತಿ ಬಹಿರಂಗಪಡಿಸದಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಹರೀಶ್ ಗೌಡ ಸೂಚನೆ ನೀಡಿದರು.
ಇದನ್ನೂ ಓದಿ:ಬಿಜೆಪಿ-ಜೆಡಿಎಸ್ ಅಹೋರಾತ್ರಿ ಧರಣಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ, ಭಜನೆ!
ನಿಖಿಲ್ ರಾಜ್ಯದಲ್ಲಿ ಉತ್ತಮವಾಗಿ ಪಕ್ಷ ಸಂಘಟನೆ ಮಾಡುತ್ತಾರೆ
ಮತ್ತೆ ಮಾತು ಮುಂದುವರೆಸಿದ ಶಾಸಕ ಹರೀಶ್ ಗೌಡ, ‘ಎಲ್ಲವೂ ತೀರ್ಮಾನ ಆಗಿದೆ ಬಿಡಣ್ಣ ಎಂದು ಸುರೇಶ್ ಬಾಬುಗೆ ಉತ್ತರಿಸಿದರು. ‘ಯಾವುದೇ ಹುದ್ದೆ ಪಡೆಯದೆ ಪಕ್ಷ ಕಟ್ಟುತ್ತೇನೆಂದು ನಿಖಿಲ್ ಹೇಳಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ನಟಿಸಲ್ಲ ಎಂದು ಕೂಡ ಘೋಷಿಸಿದ್ದಾರೆ. ನಿಖಿಲ್ ರಾಜ್ಯದಲ್ಲಿ ಉತ್ತಮವಾಗಿ ಪಕ್ಷ ಸಂಘಟನೆ ಮಾಡುತ್ತಾರೆ ಎಂದು ಪರೋಕ್ಷವಾಗಿ ಅವರೇ ಮುಂದಿನ ಜೆಡಿಎಸ್ ರಾಜ್ಯಾಧ್ಯಕ್ಷ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ