AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗ್ರೇಟರ್ ಮೈಸೂರು’ ಮೊದಲ ಸಭೆ: ಅಧಿಕಾರಿಗಳಿಗೆ ಸಿಎಂ ಕೊಟ್ಟ ಪ್ರಮುಖ ಸೂಚನೆಗಳೇನು?

ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು "ಗ್ರೇಟರ್ ಮೈಸೂರು" ಸಭೆ ನಡೆಸಿ, ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ನೀಡಿರುವ ಸೂಚನೆಗಳೇನು, ಸಭೆಯಲ್ಲಿ ಯಾವೆಲ್ಲಾ ವಿಚಾರಗಳ ಕುರಿತಾಗಿ ಚರ್ಚೆ ಮಾಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

‘ಗ್ರೇಟರ್ ಮೈಸೂರು’ ಮೊದಲ ಸಭೆ: ಅಧಿಕಾರಿಗಳಿಗೆ ಸಿಎಂ ಕೊಟ್ಟ ಪ್ರಮುಖ ಸೂಚನೆಗಳೇನು?
ಗ್ರೇಟರ್ ಮೈಸೂರು ಸಭೆ
ಗಂಗಾಧರ​ ಬ. ಸಾಬೋಜಿ
|

Updated on: Nov 03, 2025 | 6:05 PM

Share

ಮೈಸೂರು, ನವೆಂಬರ್​ 03: ಸಿಎಂ ಸಿದ್ದರಾಮಯ್ಯ (Siddaramaiah) ಅಧ್ಯಕ್ಷತೆಯಲ್ಲಿ ಸೋಮವಾರ ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಮೊದಲ “ಗ್ರೇಟರ್ ಮೈಸೂರು” (Greater Mysuru) ಸಭೆ ಮಾಡಲಾಗಿದೆ. ಸಭೆಯಲ್ಲಿ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ಮಾಡಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಗ್ರೇಟರ್ ಮೈಸೂರು ಆಗಬೇಕು. ಆದರೆ ನಗರದ ಈಗಿನ ಘನತೆ, ಸಂಸ್ಕೃತಿ, ವಿಶಾಲತೆಗೆ ಧಕ್ಕೆ ಆಗಬಾರದು‌. ಇದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೀಡಿದ ಪ್ರಮುಖ ಸೂಚನೆಗಳಿವು

  • ಬೆಂಗಳೂರಿನ‌ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, ಎಸ್‌ಟಿಪಿ ಯಾವುದರ ಸಮಸ್ಯೆಯೂ ಇರದಂತೆ ಜಿಲ್ಲಾಡಳಿತವು ಸ್ಪಷ್ಟವಾದ, ವೈಜ್ಞಾನಿಕವಾದ ಬ್ಲೂ ಪ್ರಿಂಟ್ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು.

ಸಿಎಂ ಸಿದ್ದರಾಮಯ್ಯ ಟ್ವೀಟ್​​

  • ಗ್ರೇಟರ್ ಮೈಸೂರು ಸುಸಜ್ಜಿತವಾಗಿರಬೇಕು ಮತ್ತು ವ್ಯವಸ್ಥಿತವಾಗಿರಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಾಗ ಈಗಿನ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸದೆ, ಮುಂದಿನ 15-20 ವರ್ಷಗಳ ಮುಂದಾಲೋಚನೆಯಿಂದ ವೈಜ್ಞಾನಿಕ ಯೋಜನೆ ರೂಪಿಸಬೇಕಿದೆ.
  • ಟ್ರಾಫಿಕ್ ಸಮಸ್ಯೆ ಯಾವುದೇ ಕಾರಣಕ್ಕೂ ಇರಬಾರದು.
  • ಉದ್ಯೋಗ ಸೃಷ್ಟಿಯಿಂದ ಘನ ತ್ಯಾಜ್ಯ ನಿರ್ವಹಣೆವರೆಗೂ ಆಧುನಿಕ‌ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು.
  • ತ್ಯಾಜ್ಯ ವಿಲೇವಾರಿ, ಕೈಗಾರಿಕಾ ತ್ಯಾಜ್ಯ ವಿಲೇವಾರಿ ಎಲ್ಲವೂ ವೈಜ್ಞಾನಿಕವಾಗಿರಬೇಕು. ಬಡಾವಣೆಗಳ ನಿರ್ಮಾಣ ಆಗುವಾಗ ಚರಂಡಿ, ರಸ್ಯೆಗಳು, ಒಳಚರಂಡಿ, ನೀರು, ವಿದ್ಯುತ್ ಸಂಪರ್ಕದ ಜೊತೆಗೆ ಪಾರ್ಕ್ ಗಳು ಕೂಡ ವ್ಯವಸ್ಥಿತವಾಗಿರಬೇಕು.
  • ಮೈಸೂರಿಗೆ ಮತ್ತೊಂದು ಹೊರ ವರ್ತುಲ ರಸ್ತೆ ಅಗತ್ಯ ಬೀಳುತ್ತದೆ. ಇದಕ್ಕೆ ಈಗಲೇ ಯೋಜನೆ ಸಿದ್ಧ ಮಾಡಬೇಕು. ಆದಾಯವೂ ಹೆಚ್ಚಾಗಬೇಕು. ಇದಕ್ಕೆ ಸ್ಪಷ್ಟ ಅಂದಾಜು, ಯೋಜನೆ ರೂಪಿಸಿಕೊಳ್ಳಬೇಕು.
  • ವಿಶಾಲವಾದ ರಸ್ತೆಗಳು ಮೈಸೂರಿನ ಹೆಗ್ಗಳಿಕೆ, ಗ್ರೇಟರ್ ಮೈಸೂರು ಇನ್ನಷ್ಟು ಯೋಜನಾ ಬದ್ಧವಾಗಿರಬೇಕು. ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಾಗಬೇಕಿದೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ಒಂದು ಸಮಗ್ರವಾದ ಪ್ರಗತಿ ಯೋಜನೆ ಸಿದ್ಧಪಡಿಸಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಪ್ರಮುಖ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಬೆನ್ನಲ್ಲೇ ಚುನಾವಣೆಗೆ ಸಿದ್ಧತೆ: ಅಧಿಕಾರಿಗಳನ್ನ ನೇಮಿಸಿದ ಆಯೋಗ

ಜಿಲ್ಲಾ ಉಸ್ತುವಾರಿ ಸಚಿವ ಸಿಎಂ ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ, ಚಾಮರಾಜನಗರ ಸಂಸದ ಸುನಿಲ್ ಬೋಸ್, ಶಾಸಕ ತನ್ವೀರ್ ಸೇಠ್, ಜಿ.ಟಿ.ದೇವೇಗೌಡರು ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರುಗಳು, ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us