ಮೈಸೂರು: ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇರುವುದು ತಿಳಿದುಬಂದಿದೆ. ಬಾಳೆಕಾಯಿ ಸಾಗಿಸುವ ಲಾರಿ ಜೊತೆ ಬರುತ್ತಿದ್ದ ಆರೋಪಿಗಳು ಮೈಸೂರಲ್ಲೇ ವಾಸ್ತವ್ಯ ಹೂಡುತ್ತಿದ್ದರು ಎಂದು ತಿಳಿದುಬಂದಿದೆ. ನಂತರ ನಿರ್ಜನ ಪ್ರದೇಶದಲ್ಲಿ ದರೋಡೆ ಮಾಡುವುದೇ ಇವರ ಟಾರ್ಗೆಟ್ ಆಗಿರುತ್ತಿತ್ತು. ನಿರ್ಜನ ಪ್ರದೇಶದಲ್ಲಿ ರಾಬರಿ ಮಾಡಿಕೊಂಡು ಮತ್ತೆ ಪರಾರಿ ಆಗುತ್ತಿದ್ದರು. ಚಾಮುಂಡಿ ಬೆಟ್ಟದ ಸುತ್ತಲಿನ ನಿರ್ಜನ ಪ್ರದೇಶವೇ ಟಾರ್ಗೆಟ್ ಆಗಿರುತ್ತಿತ್ತು. ಇದೇ ರೀತಿ ಟಾರ್ಗೆಟ್ ಮಾಡಿ ದರೋಡೆ ಮಾಡ್ತಿದ್ದ ಗ್ಯಾಂಗ್ ಹಲವು ಬಾರಿ ಇಂತಹ ಕೃತ್ಯ ನಡೆಸುತ್ತಿತ್ತು. ಆದರೆ, ಈವರೆಗೆ ದೂರು ದಾಖಲಾಗಿರಲಿಲ್ಲ. ನಿರ್ಜನ ಪ್ರದೇಶಕ್ಕೆ ನೀವ್ಯಾಕೆ ಹೋಗಿದ್ರಿ ಎಂದು ಪ್ರಶ್ನಿಸುತ್ತಾರೆ ಎಂದು ಭಯಪಟ್ಟು ಜನರು ದೂರು ಕೊಡಲು ಹೋಗುತ್ತಿರಲಿಲ್ಲ. ಈ ರೀತಿ ಮುಚ್ಚಿಹೋಗಿರುವ ಸಾಕಷ್ಟು ಪ್ರಕರಣಗಳು ಇವೆ ಎಂದು ಮಾಹಿತಿ ಲಭ್ಯವಾಗಿದೆ.
ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿರುವುದೇ ರೋಚಕ
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿರುವುದೇ ರೋಚಕವಾಗಿದೆ. ತಾವೇ ಬಿಟ್ಟು ಹೋಗಿದ್ದ ಸುಳಿವಿನಿಂದ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಟಿವಿ9ನಲ್ಲಿ ಮೈಸೂರು ಪೊಲೀಸರ ಬೇಟೆಯ ಡಿಟೇಲ್ಸ್ ಲಭ್ಯವಾಗಿದೆ. ಅತ್ಯಾಚಾರಿ ಆರೋಪಿಗಳ ಸೆರೆಗೆ ಮೊದಲ ಸುಳಿವೇ ಟಿಕೆಟ್. ಗ್ಯಾಂಗ್‌ರೇಪ್ ಸ್ಥಳದಲ್ಲಿ ತಾಳವಾಡಿ ಬಸ್ ಟಿಕೆಟ್ ಸಿಕ್ಕಿತ್ತು. ಆರೋಪಿಗಳು ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿಯಿಂದ ಬಸ್ನಲ್ಲಿ ಬಂದಿದ್ದರು ಎಂದು ಅದರಿಂದ ತಿಳಿದುಬಂದಿದೆ.
ಆರೋಪಿಗಳು ಗ್ಯಾಂಗ್‌ರೇಪ್ ಆದ ಸ್ಥಳದಲ್ಲಿ ಟಿಕೆಟ್ ಬೀಳಿಸಿದ್ದ. ಬಸ್ ಟಿಕೆಟ್ನಿಂದಲೇ ಪೊಲೀಸರು ‘ರೂಟ್’ ಜಾಲಾಡಿದ್ದರು. ಮೊದಲ ದಿನವೇ ಪೊಲೀಸರಿಗೆ ಬಸ್ ಟಿಕೆಟ್ ಸಿಕ್ಕಿತ್ತು ಎಂದು ಟಿವಿ9ಗೆ ತನಿಖಾಧಿಕಾರಿಗಳ ತಂಡದ ಮೂಲಗಳ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಸೆರೆಗೆ 2ನೇ ಸುಳಿವೇ ಮೊಬೈಲ್ ಟವರ್ ಆಗಿದೆ. ಟವರ್ ಡಿಟೇಲ್ಸ್ ನೀಡಿದ್ದ ಪೊಲೀಸರ ಟೆಕ್ನಿಕಲ್ ಟೀಮ್ ಪೊಲೀಸರಿಗೆ ಮೊಬೈಲ್ ನಂಬರ್ ಬೆನ್ನುಹತ್ತುವಂತೆ ಮಾಡಿತ್ತು. ಬಾಳೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯ ಮೊಬೈಲ್ ನಂಬರ್ ಪತ್ತೆಯಾಗಿತ್ತು. ಆರೋಪಿಯ ಮೊಬೈಲ್ ನಂಬರ್ ಪತ್ತೆಯಿಂದ ಕೇಸ್ಗೆ ಟ್ವಿಸ್ಟ್ ಸಿಕ್ಕಿತ್ತು. ಎರಡು ಕಡೆಗಳಲ್ಲಿ ಮೊಬೈಲ್ ಟವರ್ ಡಂಪ್ ನಡೆದಿತ್ತು. ಎರಡೂ ಕಡೆಗಳಲ್ಲಿ ಸಿಕ್ಕಿದ್ದು ಒಂದೇ ಸಿಮಿಲರ್ ನಂಬರ್ ಆಗಿತ್ತು.
ಸಾಮೂಹಿಕ ಅತ್ಯಾಚಾರ ಆರೋಪಿಗಳನ್ನು ಬಂಧಿಸಿದ ತಂಡದ ಪೊಲೀಸರು ಇವರು
ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳನ್ನು ಬಂಧಿಸಿದ ತಂಡದಲ್ಲಿ ಹಲವು ಪೊಲೀಸರು ಭಾಗಿಯಾಗಿದ್ದರು. ಮುಖ್ಯ ತಂಡದಲ್ಲಿದ್ದ ಪೊಲೀಸರ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಎಸಿಪಿ ಶಿವಶಂಕರ್, ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಮಹದೇವಸ್ವಾಮಿ, ಪ್ರಕಾಶ್, ಅಜರುದ್ದೀನ್, ಜಯಪ್ರಕಾಶ್, ಎಎಸ್ಐಗಳಾದ ಅನಿಲ್, ಅಲೆಕ್ಸ್, ಹೆಡ್ ಕಾನ್ಸ್ಟೇಬಲ್ಗಳಾದ ರಮೇಶ್, ಜೀವನ್, ಕಾಂತರಾಜ್, ಭಗತ್, ಶರೀಫ್, ಮಹದೇವ್, ರಾಜು, ಕಾನ್ಸ್ಟೇಬಲ್ಗಳಾದ ಗಿರೀಶ್, ಸಾಗರ್, ಮಂಜುನಾಥ, ಕಿಶೋರ್ ಲತೀಫ್, ಮಂಜು ಎಂಬವರು ಪೊಲೀಸ್ ತಂಡದಲ್ಲಿದ್ದರು.
ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ, ಎಸ್.ಟಿ. ಸೋಮಶೇಖರ್
ಪ್ರಕರಣ ಸಂಬಂಧ ಐವರು ಆರೋಪಿಗಳನ್ನ ಬಂಧಿಸಿದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಪೊಲೀಸರಿಗೆ ಟ್ವೀಟ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಪ ಸಮಯದಲ್ಲಿ ಐವರು ಆರೋಪಿಗಳನ್ನು ಸೆರೆಹಿಡಿದು, ವಿಚಾರಣೆಗೆ ಒಳಪಡಿಸುವ ಮೂಲಕ ದಕ್ಷತೆಯಿಂದ ಕೆಲಸ ಮಾಡಿದ್ದಾರೆ ಎಂದು ಪೊಲೀಸರನ್ನು ಮುಖ್ಯಮಂತ್ರಿ ಬೊಮ್ಮಾಯಿ ಅಭಿನಂದಿಸಿದ್ದಾರೆ.
ಹೀಗಾಗಿ ನಾನು ಗೃಹ ಸಚಿವ ಅರಗ ಜ್ಞಾನೇಂದ್ರ, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಮೈಸೂರು ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ವಿಚಾರಣೆಯನ್ನು ಅತಿ ಶೀಘ್ರದಲ್ಲಿ ಮುಗಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸಲು ಸೂಚಿಸಿದ್ದೇನೆ.
— Basavaraj S Bommai (@BSBommai) August 28, 2021
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ರೇಪ್ ಪ್ರಕರಣವನ್ನು ಬೇಧಿಸಿ, ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕ ಪೊಲೀಸರ ದಕ್ಷತೆ ಮತ್ತೊಮ್ಮೆ ಸಾಬೀತಾಗಿದೆ. ಪೊಲೀಸರು ಇನ್ನೋರ್ವ ಆರೋಪಿಯನ್ನೂ ಸಹ ಶೀಘ್ರ ಬಂಧಿಸಲಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಲಭಿಸುವಂತೆ ಮಾಡಲಿದ್ದಾರೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ: ಮದುವೆ ಮಾಡಿಕೊಟ್ಟಿಲ್ಲ ಎಂದು ಹುಡುಗಿಯ ತಂದೆಯನ್ನೇ ಕೊಂದಿದ್ದ; ಮೈಸೂರು ರೇಪ್ ಕೇಸ್ ಆರೋಪಿಯ ಹಿನ್ನೆಲೆ ಬಯಲಿಗೆ
Published On - 6:28 pm, Sat, 28 August 21