ನಾನು ರಾಮರಾಜ್ಯ ಮಾಡದಿದ್ರೆ ರಾಜಕಾರಣದಲ್ಲಿ ಇರುವುದಿಲ್ಲ: ಹೆಚ್​​ಡಿ ಕುಮಾರಸ್ವಾಮಿ ಶಪಥ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 04, 2025 | 10:04 PM

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜೊತೆಗೂಡಿ ಐದು ವರ್ಷಗಳ ಸರ್ಕಾರ ರಚಿಸುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ತೀವ್ರವಾಗಿ ಟೀಕಿಸಿದ ಅವರು, ಕಾಂಗ್ರೆಸ್‌ನವರೇ ಹೆಚ್‌ಡಿಕೆ ನೇತೃತ್ವದ ಸರ್ಕಾರಕ್ಕೆ ಅವಕಾಶ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ. ರಾಮರಾಜ್ಯ ಸರ್ಕಾರ ನಿರ್ಮಾಣ ಮಾಡುವುದು ತಮ್ಮ ಗುರಿ ಎಂದಿದ್ದಾರೆ.

ನಾನು ರಾಮರಾಜ್ಯ ಮಾಡದಿದ್ರೆ ರಾಜಕಾರಣದಲ್ಲಿ ಇರುವುದಿಲ್ಲ: ಹೆಚ್​​ಡಿ ಕುಮಾರಸ್ವಾಮಿ ಶಪಥ
ನಾನು ರಾಮರಾಜ್ಯ ಮಾಡದಿದ್ರೆ ರಾಜಕಾರಣದಲ್ಲಿ ಇರುವುದಿಲ್ಲ: ಹೆಚ್​​ಡಿ ಕುಮಾರಸ್ವಾಮಿ ಶಪಥ
Follow us on

ಮೈಸೂರು, ಜನವರಿ 04: ಮುಂದೆ ಬಿಜೆಪಿ ಜೊತೆಗೆ ಸೇರಿ 5 ವರ್ಷದ ಸರ್ಕಾರ ತರಬೇಕು. ಆಗ ನಾವು ರಾಮರಾಜ್ಯದ ಸರ್ಕಾರ ಮಾಡಬಹುದು. ನಾನು ರಾಮರಾಜ್ಯ ಮಾಡದಿದ್ದರೆ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ನಗರದ ಸಾ.ರಾ.ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆ ಸರ್ಕಾರ ಮಾಡುತ್ತೇನೆ ಎಂದಿದ್ದಾರೆ.

ಹೆಚ್​ಡಿಕೆ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್​ನವರೇ ಅವಕಾಶ ಮಾಡಿಕೊಡ್ತಾರೆ

ಮುಂದಿನ ಬಾರಿ ಬಿಜೆಪಿ, ಜೆಡಿಎಸ್ ಸರ್ಕಾರ ತಪ್ಪಿಸಲು ಸಾಧ್ಯವಿಲ್ಲ. 2028ಕ್ಕೆ ಅಧಿಕಾರಕ್ಕೆ ಬರುತ್ತೇವೆಂದು ಕಾಂಗ್ರೆಸ್​ನವರು ಹೇಳುತ್ತಾರೆ. 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೇ ಅಂತಿಮವಲ್ಲ. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲ್ಲುವುದು ಸಾಮಾನ್ಯ. 18 ಶಾಸಕರನ್ನು ಕರೆದೊಯ್ದಿದ್ದ ವೇಳೆ ಬಿಜೆಪಿ 17 ಸ್ಥಾನದಲ್ಲಿ ಗೆದ್ದಿತ್ತು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಪಡೆದರು ಎಂದು ಪ್ರಶ್ನಿಸಿದ್ದಾರೆ.

2023ರಲ್ಲಿ ಬಿಜೆಪಿಗೆ ಆದ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೂ ಬರುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್​ಗೆ ಉತ್ತಮ ಭವಿಷ್ಯವಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತ. ಹೆಚ್​ಡಿಕೆ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್​ನವರೇ ಅವಕಾಶ ಮಾಡಿಕೊಡ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರ ಸತ್ಯ ಮೇವ ಜಯತೇ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ

ಸಿದ್ದರಾಮಯ್ಯನವರು ಸತ್ಯ ಮೇವ ಜಯತೇ ಎಂದು ಜಾಹೀರಾತುಗಳಲ್ಲಿ ಹಾಕಿಕೊಳ್ತಾರೆ, ಎಲ್ಲಿದೆ ಸತ್ಯಮೇವ ಜಯತೇ? ಬಾಣಂತಿಯರ ಸರಣಿ ಸಾವಿನ ಬಗ್ಗೆ ಉಲ್ಲೇಖಿಸಿದ ಕುಮಾರಸ್ವಾಮಿ, ಆರೋಗ್ಯ ಸಚಿವರು ಆನಂದವಾಗಿ ಸಾವಿನ ಬಗ್ಗೆ ಹೇಳುತ್ತಾರೆ. ಬಡ ಕುಟುಂಬದ ತಾಯಂದಿರ ಸಾವಾಗಿದೆ. ಸಿದ್ದರಾಮಯ್ಯ ಹೃದಯದಲ್ಲಿ ಕನಿಕರ ಅನ್ನೋದನ್ನೇ ನೋಡಲಿಲ್ಲ ಎಂದು ಕಿಡಿಕಾರಿದ್ದಾರೆ.

ಕೇಸ್​​ ದಾಖಲಿಸುವ ಬಗ್ಗೆ ಕಾರ್ಯಕರ್ತರು ಭಯಪಡಬೇಡಿ. ಕೇಂದ್ರ ಸಚಿವನಾಗಿರುವ ನನ್ನ ಮೇಲೆಯೇ ಕೇಸ್ ಹಾಕಿದ್ದಾರೆ. ಗವರ್ನರ್ ಕಚೇರಿಯಲ್ಲಿ ತನಿಖೆ ಮಾಡಲು ಅನುಮತಿ ಕೇಳ್ತಾನೆ. ನನ್ನ ಮೇಲೆ ಹಲವು ಕೇಸ್ ಹಾಕಿದ್ದಾರೆ. 2009ರಲ್ಲಿ ನನ್ನ ಮೇಲೆ ರಾಜಕೀಯವಾಗಿ ಕೇಸ್​ ಹಾಕಿದ್ದಾರೆ. ಅದನ್ನು ಇನ್ನೂ ಹಾಗೆಯೇ ಇಟ್ಟುಕೊಂಡಿದ್ದಾರೆ. ಎಷ್ಟು ವರ್ಷ ತನಿಖೆ ಮಾಡ್ತೀರಾ? ಇದಕ್ಕೆ ಹೆದರುವ ಪ್ರಶ್ನೆ ಇಲ್ಲ. ಕಾಲ ಬರುತ್ತದೆ, ಎಲ್ಲಾ ಬದಲಾಗುತ್ತೆ, ಯಾರೂ ಹೆದರಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ 18 ಲಕ್ಷ ಕೋಟಿ ರೂ ಸಾಲ ಮಾಡಿದೆ

ಸಾರಿಗೆ ಬಸ್ ಟಿಕೆಟ್ ದರ ಶೇಕಡಾ 15ರಷ್ಟು ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ 18 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸರ್ಕಾರದ ಬಂಡವಾಳ ಮುಂದಿನ ಬಜೆಟ್​ನಲ್ಲಿ ಗೊತ್ತಾಗುತ್ತದೆ. ರಾಜ್ಯದ ಜನ ಗಟ್ಟಿ ಇದ್ದೀರಲ್ಲ, ಸರ್ಕಾರದ ಸಾಲ ತೀರಿಸುತ್ತೀರಾ? ಬಸ್ ಟಿಕೆಟ್ ದರ 15% ಅಲ್ಲ, ಇನ್ನೂ 5% ಜಾಸ್ತಿ ಮಾಡಿ ಅಂತಾರೆ. ರಾಜ್ಯ ಸರ್ಕಾರ ಜಾಗ ಕೊಡದಿದ್ದರೆ ಕೈಗಾರಿಕೆ ತರಲು ಸಾಧ್ಯವಾಗಲ್ಲ. ರಾಜ್ಯಕ್ಕೆ ಕೈಗಾರಿಕೆ ತರಬೇಕಾದರೆ ಸರ್ಕಾರ ಕೈಜೋಡಿಸಬೇಕು. ಆದರೂ ಯಾವುದೇ ಕಾರಣಕ್ಕೂ ರಾಜ್ಯವನ್ನು ನಾವು ಕಡೆಗಣಿಸಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.