ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಆಗಸ್ಟ್ 14 ರಂದು ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ಆಗಸ್ಟ್ 14 ರಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ.
ಮೈಸೂರು, ಆಗಸ್ಟ್ 12: ತಮಿಳುನಾಡಿಗೆ (Tamil Nadu) ನೀರು ಬಿಡುತ್ತಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ರೈತರು ಆಗಸ್ಟ್ 14 ರಂದು ನಂಜನಗೂಡಿನಲ್ಲಿ ಬೃಹತ್ ಪ್ರತಿಭಟನೆಗೆ (Protest) ಕರೆ ನೀಡಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಲಿದೆ.
ನಂಜನಗೂಡಿನ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರದ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ನಾಲೆಗಳಲ್ಲಿ ಹೂಳು ತೆಗೆದಿಲ್ಲ, ಗಿಡ ಗಂಟೆಗಳನ್ನು ತೆರವು ಮಾಡಿಲ್ಲ. ಕಬಿನಿ ಬಲದಂಡೆ ಮತ್ತು ಎಡದಂಡೆ ಹಾಗೂ ನುಗು ನಾಲೆಗಳ ಕಡೆಯ ಭಾಗದ ರೈತರ ಜಮೀನುಗಳಿಗೆ ನೀರು ಬಿಟ್ಟಿಲ್ಲ. ಆದರೆ ತಮಿಳುನಾಡಿಗೆ ಕಪಿಲಾ ನದಿ ಮೂಲಕ ನೀರು ಹರಿದು ಹೋಗುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಗದ್ದಲ; ಪಟ್ಟು ಬಿಡದ ತಮಿಳುನಾಡು ಅಧಿಕಾರಿಗಳು
ಕರ್ನಾಟಕದ ರೈತರು ಬೆಳೆ ಬೆಳೆಯಲು ನೀರು ಇಲ್ಲ. ಸಮರ್ಪಕವಾಗಿ ಗೇಟ್ಗಳನ್ನು ಅಳವಡಿಸದೆ ರೈತರ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ. ಪ್ರತಿಭಟನೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸುವ ತನಕ ಹೋರಾಟ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ನಾಲೆಗಳಿಗೆ ನೀರು ಬಿಡುವಂತೆ ರೈತರು ಒತ್ತಾಯಿಸಿದ್ದಾರೆ. ಭತ್ತದ ಬೆಳೆ ಬೆಳೆಯಲು ಅನ್ನದಾತರು ಕಾದು ಕುಳಿತಿದ್ದಾರೆ. ಭತ್ತದ ಬೆಳೆಗೆ ಸಮಯವೂ ಮೀರುತ್ತಿರುವುದರಿಂದ ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ. ಜಲಾಶಯಗಳು ತುಂಬಿದ್ದರೂ ನಾಲೆಗಳಿಗೆ ನೀರು ಬಿಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹುಣಸೂರು, ಕೆ.ಆರ್. ನಗರ ಭಾಗದಲ್ಲೂ ನೀರು ಬಿಡುವಂತೆ ರೈತರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ