ಕಬಿನಿ ಜಲಾಶಯದಿಂದ 23,000 ಕ್ಯೂಸೆಕ್ ನೀರು ಹೊರಕ್ಕೆ; ಕರ್ನಾಟಕದಿಂದ ತಮಿಳುನಾಡಿಗೆ ಈ ವರ್ಷ ದಾಖಲೆ ಪ್ರಮಾಣದ ನೀರು ಬಿಡುಗಡೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 13, 2022 | 7:57 AM

ಕಬಿನಿ ಜಲಾಶಯದ ಗರಿಷ್ಠ ಸಾಮರ್ಥ್ಯ 84 ಅಡಿ ಇದೆ, ಪ್ರಸ್ತುತ ನೀರಿನ ಮಟ್ಟ 83.91 ಅಡಿ ಮುಟ್ಟಿದೆ.

ಕಬಿನಿ ಜಲಾಶಯದಿಂದ 23,000 ಕ್ಯೂಸೆಕ್ ನೀರು ಹೊರಕ್ಕೆ; ಕರ್ನಾಟಕದಿಂದ ತಮಿಳುನಾಡಿಗೆ ಈ ವರ್ಷ ದಾಖಲೆ ಪ್ರಮಾಣದ ನೀರು ಬಿಡುಗಡೆ
ಕಬಿನಿ ಜಲಾಶಯ (ಸಂಗ್ರಹ ಚಿತ್ರ)
Follow us on

ಮೈಸೂರು: ಕೇರಳದ ವಯನಾಡು ಮತ್ತು ಕಬಿನಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಮೈಸೂರು ಜಿಲ್ಲೆಯ ಎಚ್​.ಡಿ.ಕೋಟಿ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಜಲಾಶಯದ ಇಂದಿನ ಒಳಹರಿವು 17,184 ಕ್ಯೂಸೆಕ್ ಇದ್ದರೆ ಜಲಾಶಯದಿಂದ 23,000 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಕಬಿನಿ ಜಲಾಶಯದ ಗರಿಷ್ಠ ಸಾಮರ್ಥ್ಯ 84 ಅಡಿ ಇದೆ, ಪ್ರಸ್ತುತ ನೀರಿನ ಮಟ್ಟ 83.91 ಅಡಿ ಮುಟ್ಟಿದೆ. ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಇಂದು 19.45 ಟಿಎಂಸಿ ನೀರು ಸಂಗ್ರಹವಾಗಿದೆ.

ತಮಿಳುನಾಡಿಗೆ ಹೆಚ್ಚುವರಿ ನೀರು

ಕರ್ನಾಟಕದಲ್ಲಿ ಮುಂಗಾರು ಚುರುಕಾಗಿದ್ದು ಈ ವರ್ಷ ಕಳೆದ 51 ವರ್ಷಗಳಲ್ಲಿಯೇ ಅತ್ಯಧಿಕ ಪ್ರಮಾಣದ ಮಳೆ ಸುರಿದಿದೆ. ಕಳೆದ ಜೂನ್ 1ರಿಂದ ಆಗಸ್ಟ್ 31 ರ ಅವಧಿಯ ಲೆಕ್ಕಾಚಾರದಲ್ಲಿ ಕರ್ನಾಟಕದಲ್ಲಿ ಸುರಿದಿರುವ ಮಳೆ ಪ್ರಮಾಣವು ಶೇ 22 ರಷ್ಟು ಹೆಚ್ಚಾಗಿದೆ. ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜಲಾಶಯಗಳು ತುಂಬಿದ್ದು, ತಮಿಳುನಾಡಿಗೆ 47 ಟಿಎಂಸಿ ಅಡಿಯಷ್ಟು ಕಾವೇರಿ ನೀರು ಹರಿದಿದೆ. ಇದೂ ಸಹ ಒಂದು ದಾಖಲೆಯೇ ಆಗಿದೆ. ಕಳೆದ 48 ವರ್ಷಗಳಲ್ಲೇ ಗರಿಷ್ಠ ಮಟ್ಟದ ನೀರು ತಮಿಳುನಾಡಿಗೆ ಹೋಗಿದೆ. ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾಗಿರುವ ಹಾರಂಗಿ, ಹೇಮಾವತಿ, ಕೆಆರ್‌ಎಸ್ ಮತ್ತು ಕಬಿನಿ ಡ್ಯಾಂಗಳಿಂದ ಕರ್ನಾಟಕವು ಒಟ್ಟು 114 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದಾಗಿದೆ.

ಕರ್ನಾಟಕದಲ್ಲಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ನೀರು ಸಂಗ್ರಹಿಸಲು ಯಾವುದೇ ವ್ಯವಸ್ಥೆ ಲಭ್ಯವಿಲ್ಲ. ಮೇಕೆದಾಟು ಸಮೀಪ ಉದ್ದೇಶಿತ ಬ್ಯಾಲೆನ್ಸಿಂಗ್ ಜಲಾಶಯ ನಿರ್ಮಾಣಗೊಂಡರೆ 67 ಟಿಎಂಸಿ ಅಡಿಯಷ್ಟು ಕಾವೇರಿ ನೀರನ್ನು ಹೆಚ್ಚುವರಿ ಮಳೆಯಾದಾಗ ಸಂಗ್ರಹಿಸಲು ಸಾಧ್ಯವಾಗುತ್ತದೆ. ‘ಇಡೀ ಜಲ ವರ್ಷಕ್ಕೆ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರು ಹರಿಸಬೇಕಿತ್ತು. ಈ ವರ್ಷ ತಮಿಳುನಾಡಿಗೆ 47 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿದಿದೆ’ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಮನೋಜ್ ರಾಜನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Published On - 7:57 am, Tue, 13 September 22