ಮುಡಾ ನಿವೇಶನದ ದಂಡ ತಪ್ಪಿಸಲು ಪ್ರತಾಪ ಸಿಂಹ ವಾಮಮಾರ್ಗ, ಮುಡಾ ಅಧ್ಯಕ್ಷ ಗಂಭೀರ ಆರೋಪ
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದ ಹೆಸರು ಕೇಳಿಬಂದಿದೆ. ಸಿದ್ದರಾಮಯ್ಯನವರ ಪತ್ನಿ ಅಕ್ರಮವಾಗಿ ಮುಡಾ ನಿವೇಶನ ಪಡೆದುಕೊಂಡಿದ್ದಾರೆ ಆರೋಪ ಕೇಳಿಬಂದಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಗಳು ವ್ಯಕ್ತವಾಗಿವೆ. ಇತ್ತ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಂಡದಿಂದ ತಪ್ಪಿಸಿಕೊಳ್ಳಲು ವಾಮಮಾರ್ಗ ಅನುಸರಿಸಿದ್ದಾರೆ ಎಂದು ಮುಡಾ ಅಧ್ಯಕ್ಷ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರು, (ಜುಲೈ 23): ಮುಡಾ ನಿವೇಶ ಹಂಚಿಕೆಯಲ್ಲಿ ಭಾರೀ ಹಗರಣ ನಡೆದಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲೂ ಸಿದ್ದರಾಮಯ್ಯ ಹೆಸರು ಕೇಳಿಬಂದಿದ್ದರಿಂದ ಅವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿವೆ. ಇದರ ಮಧ್ಯ ಮೈಸೂರು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮುಡಾ ನಿವೇಶನದ ಶೇ 25% ಮೊತ್ತದ ದಂಡವನ್ನ ತಪ್ಪಿಸಲು ಪ್ರತಾಪ ಸಿಂಹ ವಾಮಮಾರ್ಗ ಅನುಸರಿಸಿದ್ದಾರೆಂದು ಮುಡಾ ಅಧ್ಯಕ್ಷ ಕೆ.ಮರಿಗೌಡ ಗಂಭೀರ ಆರೋಪ ಮಾಡಿದ್ದಾರೆ.
ಮುಡಾ ಹಗರಣದ ವಿಚಾರವಾಗಿ ಸಿಎಂ ವಿರುದ್ಧ ಮಾತನಾಡಿದ್ದ ಮಾಜಿ ಸಂಸದ ಪ್ರತಾಪ ಸಿಂಹಗೆ ಮುಡಾ ಅಧ್ಯಕ್ಷ ಕೆ.ಮರಿಗೌಡ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಾಪ ಸಿಂಹ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಆದರೆ ಮಾಜಿ ಸಂಸದ ಪ್ರತಾಪ ಸಿಂಹ ತಮ್ಮ ಪತ್ನಿಯ ಹೆಸರಿನಲ್ಲಿ ಜಿ ಕ್ಯಾಟೆಗೆರಿಯಲ್ಲಿ ನಿವೇಶನ ಪಡೆದಿದ್ದಾರೆ. ಸದರಿ ನಿವೇಶದಲ್ಲಿ ಮನೆ ನಿರ್ಮಿಸಬೇಕಾಗಿರುತ್ತದೆ. ತಪ್ಪಿದಲ್ಲಿ ಶೇ 25% ನಿವೇಶನ ಮೌಲ್ಯದ ದಂಡ ಕಟ್ಟಬೇಕು. ಆದ್ರೆ, ಪ್ರತಾಪ ಸಿಂಹ, ಮನೆ ನಿರ್ಮಿಸದೇ ಕೇವಲ ಶೀಟಿನ ರೂಮನ್ನೇ ಮನೆ ಎಂದು ಬಿಂಬಿಸಿ ದಂಡದಿಂದ ತಪ್ಪಿಸಿಕೊಳ್ಳಲು ವಾಮಮಾರ್ಗ ಅನುಸರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ ಪ್ರಕರಣದಲ್ಲಿ ರಾಜ್ಯಪಾಲರ ಮಧ್ಯಪ್ರವೇಶ, ವರದಿ ನೀಡುವಂತೆ ಮುಖ್ಯಕಾರ್ಯದರ್ಶಿಗೆ ಸೂಚನೆ
9-8-2020 ರಂದು ನಕ್ಷೆ ಮಂಜೂರಾತಿ ಪಡೆದು ನಿವೇಶನದಲ್ಲಿ ಎಸಿ ಶೀಟಿನ ರೂಮ್ ಮಾತ್ರ ನಿರ್ಮಿಸಿದ್ದಾರೆ. ಬಳಿಕ 4-10-2021 ರಂದು ಎಸಿ ಶೀಟಿನ ರೂಮ್ ಅನ್ನೇ ಮನೆ ಎಂದು ಬಿಂಬಿಸಿ ಕಟ್ಟಡ ಪೂರ್ಣಗೊಂಡ ವರದಿ ಪಡೆದಿದ್ದಾರೆ. ಆ ನಂತರ ಸದರಿ ಕಟ್ಟಡ ಮನೆ ಕಂದಾಯವನ್ನ 21-10-2021 ರಂದು ನಿಗದಿಪಡಿಸಿ 10-11-2021 ರಂದು ಕ್ರಯ ಪತ್ರ ಪಡೆದಿದ್ದಾರೆ. ಸದರಿ ಕಟ್ಟಡದ ಬಗ್ಗೆ ದೂರು ಸ್ವೀಕೃತವಾದ ಹಿನ್ನೆಲೆಯಲ್ಲಿ ಈ ಹಿಂದೆ ನೀಡಲಾದ ಕಟ್ಟಡ ಪೂರ್ಣಗೊಂಡ ವರದಿಯನ್ನ 27-09-2023ರಲ್ಲಿ ಮುಡಾ ರದ್ದು ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:45 pm, Tue, 23 July 24