ಮೈಸೂರು, ನವೆಂಬರ್ 6: ಮುಡಾ ಸೈಟ್ ಹಂಚಿಕೆ ಹಗರಣ ಪ್ರಕರಣದಲ್ಲಿ ಎ1 ಆಗಿರುವ ಸಿಎಂ ಸಿದ್ದರಾಮಯ್ಯ ಇಂದು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದರು. ಇದರೊಂದಿಗೆ, ಕರ್ನಾಟಕದ ಇತಿಹಾಸದಲ್ಲಿ ಹಾಲಿ ಮುಖ್ಯಮಂತ್ರಿಯೊಬ್ಬರು ವಿಚಾರಣೆ ಎದುರಿಸಿದ ಮೊದಲ ವಿದ್ಯಮಾನ ದಾಖಲಾಯಿತು. ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿಗಳನ್ನು ಸುಮಾರು 2 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು.
ಈಗಾಗಲೇ ಪ್ರಕರಣದಲ್ಲಿ ಎ2 ಆಗಿರುವ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ, ಭೂ ಮಾಲೀಕ ದೇವರಾಜುನನ್ನ ಮೈಸೂರಿನ ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತಂಡ ವಿಚಾರಣೆ ನಡೆಸಿತ್ತು. ಸೈಟ್ ಹಂಚಿಕೆ ಸಂಬಂಧ ಅವರಿಂದ ಲಿಖಿತ ಉತ್ತರಗಳನ್ನ ಪಡೆದುಕೊಂಡಿತ್ತು. ಎ1 ಆಗಿರುವ ಸಿಎಂ ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇತ್ತು. ಹೀಗಾಗಿ ಎರಡು ದಿನಹಳ ಹಿಂದೆ ನೋಟಿಸ್ ನೀಡಿದ್ದ ಲೋಕಾಯುಕ್ತ ಪೊಲೀಸರು, ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಹೀಗಾಗಿ ಇಂದು ಬೆಳಗ್ಗೆ ಮೈಸೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಸರಿಯಾಗಿ ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ತಲುಪಿದರು.
ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಹಾಜರಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಜೊತೆ ಸಭೆ ನಡಸಿದ್ದರು. ಸರ್ಕಾರಿ ಕಾರಿನಲ್ಲಿ, ಬೆಂಗಾವಲು ವಾಹನದಲ್ಲಿ ವಿಚಾರಣೆಗೆ ಬರಲು ಸಿಎಂ ಸಜ್ಜಾಗಿದ್ದರು. ಆದರೆ, ಕಾನೂನು ಸಲಹೆಗಾರು ನೀಡಿದ ಸಲಹೆಯಂತೆ ಸರ್ಕಾರಿ ಸವಲತ್ತು ಬಳಸದೇ, ಸರ್ಕಾರಿ ಕಾರನ್ನೂ ಬಳಸದೇ ತಮ್ಮ ಸಿಬ್ಬಂದಿಯನ್ನೂ ಜೊತೆಗೆ ಕರೆ ತರದೇ ಸಿಎಂ ಸಿದ್ದರಾಮಯ್ಯ ಸಾಮಾನ್ಯರಂತೆ ಬಂದರು.
ವಿಚಾರಣೆ ಎದುರಿಸಲು ಕಚೇರಿಯೊಳಗೆ ಬಂದ ಸಿಎಂ ಸಿದ್ದರಾಮಯ್ಯ, ಮೊದಲಿಗೆ ಅನೌಪಚಾರಿಕವಾಗಿ ಎಸ್ಪಿ ಉದೇಶ್ ಜೊತೆ ಮಾತನಾಡಿದರು. ನಾನು ಸಿಎಂ ಎಂದು ಅಂಜಿಕೆ ಇಟ್ಟುಕೊಳ್ಳಬೇಡಿ, ಸಂಕೋಚ ಇಲ್ಲದೇ ವಿಚಾರಣೆ ಮಾಡಿ ಎಂದು ಸಲಹೆ ನೀಡಿದರು.
‘ನಾನು ಸಿಎಂ ಎಂದು ಅಂಜಿಕೆ ಇಟ್ಟುಕೊಳ್ಳಬೇಡಿ, ಆರಾಮಾಗಿ ನಿಮ್ಮ ಕೆಲಸ ನೀವು ಮಾಡಿ. ನಾನು ಈ ಕ್ಷಣಕ್ಕೆ ನಿಮಗೆ ಸಿಎಂ ಅಲ್ಲ, ನೀವು ಒಂದು ಕೇಸ್ನಲ್ಲಿ ನನಗೆ ನೋಟಿಸ್ ಕೊಟ್ಟಿದ್ದೀರಿ. ನೋಟಿಸ್ ಕೊಟ್ಟಿದ್ದಕ್ಕೆ ನಾನು ಬಂದಿದ್ದೇನೆ. ನಿಮ್ಮ ಪ್ರಕ್ರಿಯೆಗಳು ಹೇಗಿದೆಯೋ ಹಾಗೇ ಮಾಡಿ. ನೀವು ಯಾವ ಪ್ರಶ್ನೆ ಬೇಕಾದರೂ ಕೇಳಿ, ನನಗೆ ಗೊತ್ತಿರುವುದನ್ನು ಹೇಳುತ್ತೇನೆ. ಎಷ್ಟು ಸಮಯವಾದ್ರೂ ತೆಗೆದುಕೊಳ್ಳಿ, ಯಾವ ಪ್ರಶ್ನೆಗಳಿದ್ರೂ ಕೇಳಿ’ ಎಂದು ಲೋಕಾಯುಕ್ತ ಎಸ್ಪಿಗೆ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಮತ್ತೆ ವಿಚಾರಣೆಗೆ ಕರೆದಿಲ್ಲ, ಲೋಕಾಯುಕ್ತ ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ
ಹೀಗೆ, ಸಿಎಂ ಸಿದ್ದರಾಮಯ್ಯಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ. ಇದಕ್ಕೆ ಸಿಎಂ ಉತ್ತರವನ್ನೂ ಕೊಟ್ಟಿದ್ದಾರೆ. ನಂತರ ಲೋಕಾಯುಕ್ತ ಕಚೇರಿಯಿಂದ ನಗುಮೊಗದಿಂದಲೇ ಹೊರಬಂದ ಸಿಎಂ ಸಿದ್ದರಾಮಯ್ಯ, ಮರಳಿ ವಿಚಾರಣೆಗೆ ಕರೆದಿಲ್ಲ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ