Mysore News: ಟಿ.ನರಸೀಪುರ ತಾಲೂಕಿನಲ್ಲಿ ನಿರಂತರವಾಗಿ ಚಿರತೆ ದಾಳಿ, 15 ದಿನಗಳಲ್ಲಿ ಕಬ್ಬು ಕಟಾವಿಗೆ ಆದೇಶ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ನಿರಂತರವಾಗಿ ಚಿರತೆ ದಾಳಿಯಾಗುತ್ತಿರುವ ಹಿನ್ನೆಲೆ 15 ದಿನಗಳಲ್ಲಿ ಪಕ್ವಗೊಂಡಿರುವ ಕಬ್ಬನ್ನು ಕಟಾವು ಮಾಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೈಸೂರು: ಜಿಲ್ಲೆಯ ಟಿ.ನರಸೀಪುರ (T. Narasipur) ತಾಲೂಕಿನಲ್ಲಿ ನಿರಂತರವಾಗಿ ಚಿರತೆ ದಾಳಿಯಾಗುತ್ತಿರುವ ಹಿನ್ನೆಲೆ 15 ದಿನಗಳಲ್ಲಿ ಪಕ್ವಗೊಂಡಿರುವ ಕಬ್ಬನ್ನು (Sugarcane) ಕಟಾವು ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ನೀಡಿದ್ದಾರೆ. ಟಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ನಿನ್ನೆ (ಜ.22) ರಂದು ಚಿರತೆ ದಾಳಿಯಿಂದ 11 ವರ್ಷದ ಬಾಲಕ ಸಾವನ್ನಪ್ಪಿದ್ದನು. ಅಲ್ಲದೇ ತಾಲೂಕಿನಲ್ಲಿ ಚಿರತೆಗಳು ನಿರಂತರ ದಾಳಿಯಿಂದ ಪ್ರಾಣಹಾನಿ ಉಂಟಾಗಿದ್ದು, ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಢಳಿತಕ್ಕೆ ಕೂಡಲೆ ಕೋಂಬಿಂಗ್ ನಡೆಸುವಂತೆ ಸೂಚನೆ ನೀಡಿದರು. ಕಬ್ಬಿನ ಗದ್ದೆಯಲ್ಲಿ ಚಿರತೆಗಳು ಆಶ್ರಯ ಪಡೆಯುತ್ತಿರುವುದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆದಿರುವ ಕಬ್ಬು ಬೆಳೆ ಕಟಾವು ಮಾಡುವ ಬಗ್ಗೆ ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ನಂಜನಗೂಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ, ಸುಮಾರು 200 ಎಕರೆ ಪ್ರದೇಶದಲ್ಲಿ ಪಕ್ವಗೊಂಡಿರುವ ಕಬ್ಬು ಇರುವುದಾಗಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಟಿ.ನರಸೀಪುರದಲ್ಲಿ ಚಿರತೆ ದಾಳಿಗೆ ಬಾಲಕ ಸಾವು: ಘಟನೆ ಮರುಕಳಿಸಿದರೇ ಕೊಲೆ ಮಾಡುವುದಾಗಿ ಬಾಲಕನ ತಾತನಿಂದ ಅಧಿಕಾರಿಗೆ ಬೆದರಿಕೆ
ಹಾಗೇ ಕಬ್ಬು ಕಟಾವಿಗೆ 19 ತಂಡಗಳು 15 ಟನ್ ಕಬ್ಬು ಕಟಾವು ಮಾಡುತ್ತಿದ್ದವು. ಇನ್ನುಮುಂದೆ 30 ತಂಡಗಳ ಮೂಲಕ ಪ್ರತಿದಿವಸ 60 ಟನ್ ಎಂಬಂತೆ 600 ಟನ್ ಕಬ್ಬು ಕಟಾವು ಮಾಡಿಸಲು ಸೂಚನೆ ನೀಡಿದರು.
ಈ ಹಿಂದೆಯೂ ಕಬ್ಬು ಕಟಾವಿಗೆ ಆದೇಶಿಸಿದ್ದ ಜಿಲ್ಲಾಧಿಕಾರಿ
ಈ ಹಿಂದೆ ಕಳೆದ ವರ್ಷ ಡಿಸೆಂಬರ್ 6 2022 ರಂದು ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾದ ಹಿನ್ನಲೆ ರೈತರು ಕಬ್ಬು ಕಟಾವು ಮಾಡವಂತೆ ಆದೇಶ ಹೊರಡಿಸಿದ್ದರು. ಚಿರತೆಗಳ ಹಾವಳಿ ಹೆಚ್ಚಾದ ಬೆನ್ನಲ್ಲೇ ಅರಣ್ಯಾಧಿಕಾರಿಗಳ ಮನವಿಯ ಮೇರೆಗೆ ತಾಲೂಕಿನ 23 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 40 ಗ್ರಾಮಗಳಲ್ಲಿ ಕಟಾವಿಗೆ ಬಂದ ಕಬ್ಬನ್ನು ಕಟಾವು ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಚಿರತೆದಾಳಿಯಿಂದ 4 ತಿಂಗಳಲ್ಲಿ 4 ಬಲಿ
ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 4 ತಿಂಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇಂದು (ಜ.22) ಚಿರತೆ ದಾಳಿಗೆ 11 ವರ್ಷದ ಬಾಲಕ ಜಯಂತ್ ಸಾವನ್ನಪ್ಪಿದ್ದಾನೆ. ಈ ಹಿಂದೆ ತಾಲೂಕಿನಲ್ಲಿ ಚಿರತೆ ದಾಳಿಗೆ 3 ಮೃತಪಟ್ಟಿದ್ದರು. 2022ರ ಅ.31ರಂದು ಚಿರತೆ ದಾಳಿಗೆ ಎಂ.ಎಲ್. ಹುಂಡಿ ಗ್ರಾಮದ ಮಂಜುನಾಥ್ ಚೆನ್ನಮಲ್ಲಿಕಾರ್ಜುನ ಬೆಟ್ಟದಲ್ಲಿ ಮೃತಪಟ್ಟಿದ್ದರು. 2022ರ ಡಿ.1ರಂದು ಚಿರತೆ ದಾಳಿಯಿಂದ ಕೆಬ್ಬೆ ಹುಂಡಿ ಗ್ರಾಮದ ಮೇಘನಾ(23), 3 ದಿನದ ಹಿಂದೆ ಜ.20ರಂದು ಕನ್ನಾನಾಯಕನಹಳ್ಳಿಯಲ್ಲಿ ಚಿರತೆ ದಾಳಿಯಿಂದ ವೃದ್ಧೆ ಸಿದ್ದಮ್ಮ(60) ಸಾವನ್ನಪ್ಪಿದ್ದರು. ನಿನ್ನೆ (ಜ.22) ಹೊರಳಹಳ್ಳಿ ಗ್ರಾಮದ 11 ವರ್ಷದ ಬಾಲಕ ಜಯಂತ್ ಮೃತಪಟ್ಟಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:47 am, Mon, 23 January 23