ಮೈಸೂರು, ಜನವರಿ 29: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 160 ನಿವೇಶನಗಳನ್ನು ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ (ED) ಆದೇಶ ಹೊರಡಿಸಿದೆ. 160 ನಿವೇಶನಗಳ ವಹಿವಾಟಿನಲ್ಲಿ ಬೇನಾಮಿ ಮತ್ತು ಅಕ್ರಮ ಹಣ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಎಲ್ಲ ನಿವೇಶನಗಳನ್ನು ಜಪ್ತಿ ಮಾಡುವಂತೆ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಒಂದು ನಿವೇಶನ ಮೌಲ್ಯ 81 ಕೋಟಿ ರೂ. ಇದೆ. ಮಾರುಕಟ್ಟೆ ದರ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯವಿದೆ. ರವಿ ಎಂಬುವರ ಹೆಸರಲ್ಲಿ 31 ನಿವೇಶನ, ಅಬ್ದುಲ್ ವಾಹಿದ್ ಎಂಬುವರ ಹೆಸರಲ್ಲಿ 41 ನಿವೇಶನ, ಕ್ಯಾಥಡ್ರಾಲ್ ಸೊಸೈಟಿ ಹೆಸರನಿಲ್ಲಿ 40 ನಿವೇಶನ, ಇತರರಿಗೆ ಸೇರಿದ 48 ನಿವೇಶನಗಳನ್ನು ಜಪ್ತಿ ಮಾಡುವಂತೆ ಹೇಳಿದೆ.
2023ರ ಸೆಪ್ಟೆಂಬರ್ 11ರಂದು ರವಿ ಹೆಸರಲ್ಲಿ 31 ನಿವೇನಗಳು ನೋಂದಣಿಯಾಗಿವೆ. ಮೈಸೂರು ನಗರದ ಹೃದಯಭಾಗ ಕುವೆಂಪುನಗರದಲ್ಲಿಯ 12 ನಿವೇಶನಗಳು, ದಟ್ಟಗಳ್ಳಿ, ವಿಜಯನಗರದಲ್ಲಿ 19 ನಿವೇಶನಗಳು ರವಿ ಹೆಸರಿಗೆ ನೋಂದಣಿಯಾಗಿವೆ.
ಇದನ್ನೂ ಓದಿ: ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬುಡಕ್ಕೆ ಮುಡಾ ಹಗರಣ: ಇಡಿ, ಲೋಕಾಯುಕ್ತಕ್ಕೆ ದೂರು
ಇನ್ನು ಅಬ್ದುಲ್ ವಾಹಿದ್ ಎಂಬುವರ ಹೆಸರಿಗೆ 2023ರ ಮಾರ್ಚ್ 8ರಂದು ಒಂದೇ ದಿನದಲ್ಲಿ 28 ನಿವೇಶನಗಳು ನೋಂದಣಿಯಾಗಿವೆ. ಮತ್ತೆ, 2023ರ ಸೆಪ್ಟೆಂಬರ್ 1ರಂದು ಅಬ್ದುಲ್ ವಾಹಿದ್ ಹೆಸರಿಗೆ 13 ವಿಜಯನಗರ, ಜೆ.ಪಿ.ನಗರ, ನಾಚನಹಳ್ಳಿಪಾಳ್ಯದಲ್ಲಿನ ನಿವೇಶನಗಳು ನೋಂದಣಿಯಾಗಿವೆ.
ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ಆಮಿಷವೊಡ್ಡಿ ಮಹಿಳೆಗೆ ವಂಚಿಸಲಾಗಿದೆ. ವಂಚನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಲಲಿತಾದ್ರಿಪುರ ಗ್ರಾಮದ ಮನಿಷಾ ಎಂಬುವರ ಮೇಲೆ ಹಲ್ಲೆ ಮಾಡಿರುವ ಆರೋಪವಿದೆ. ಆಲನಹಳ್ಳಿಯ ಪವಿತ್ರಾ, ಪತಿ ವಿಶ್ವನಾಥ್ ಶೆಟ್ಟಿ, ಪುತ್ರನ ವಿರುದ್ಧ ಆಲನಹಳ್ಳಿ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮುಡಾ ನಿವೇಶನ ಕೊಡಿಸುವುದಾಗಿ ಪವಿತ್ರಾ, ವಿಶ್ವನಾಥ್ ದಂಪತಿ ಮನಿಷಾ ಅವರಿಂದ 30 ಲಕ್ಷ ಹಣ ಪಡೆದಿದ್ದರು. ಹಣ ಪಡೆದು ಮುಡಾ ನಿವೇಶನ ನೀಡದೇ ವಂಚಿಸಿದ್ದಾರೆ. ಹಣ ವಾಪಸ್ ನೀಡುವುದಾಗಿ ಮನಿಷಾ ಅವರನ್ನು ಮನೆ ಬಳಿ ಕರೆಸಿಕೊಂಡು ಹಲ್ಲೆಗೈದಿರುವ ಆರೋಪ ಕೇಳಿಬಂದಿದೆ.