ಮುಡಾ ಹಗರಣ: ಸಿಎಂ ಪತ್ನಿ ಪಾರ್ವತಿಗೆ ಬಿಗ್ ರಿಲೀಫ್, ಇಡಿ ವಿಚಾರಣೆಯಿಂದ ಬಚಾವ್
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮುಡಾ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಇಡಿ ಜಾರಿ ಮಾಡಿದ್ದ ಸಮನ್ಸ್‌ಗೆ ಹೈಕೋರ್ಟ್ ತಡೆ ನೀಡಿದೆ. ಇದರಿಂದ ಪಾರ್ವತಿ ಅವರು ಇಡಿ ವಿಚಾರಣೆಯಿಂದ ಪಾರಾಗಿದ್ದಾರೆ. ಹಾಗಾದ್ರೆ, ಕೋರ್ಟ್ನಲ್ಲಿ ವಾದ ಪ್ರತಿವಾದ ಹೇಗಿತ್ತು ಎನ್ನುವುದನ್ನು ನೋಡಿ.
ಬೆಂಗಳೂರು, (ಜನವರಿ 27): ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ನೀಡಿದ್ದ ಇಡಿ ಸಮನ್ಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಮುಂದಿನ ವಿಚಾರಣೆವರೆಗೆ ಅಂದರೆ ಫೆಬ್ರವರಿ 10ರ ವರೆಗೆ ಇಡಿ ಸಮನ್ಸ್‌ಗೆ ತಡೆ ನೀಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಇಂದು (ಜನವರಿ 27) ಆದೇಶ ಹೊರಡಿಸಿದೆ. ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮ್ಯಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಇಡಿ ನೋಟಿಸ್ ನೀಡಿತ್ತು. ಇದಕ್ಕೆ ತಡೆ ನೀಡುವಂತೆ ಸಿಎಂ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಪಾರ್ವತಿ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಇವರ ಜೊತೆಗೆ ಸಚಿವ ಭೈರತಿ ಸುರೇಶ್ ಅವರಿಗೂ ನೀಡಲಾಗಿದ್ದ ಇಡಿ ಸಮನ್ಸ್‌ಗೂ ಸಹ ಕೋರ್ಟ್ ತಡೆಯಾಜ್ಞೆ ನೀಡಿದೆ.
ಸಚಿವ ಭೈರತಿ ಸುರೇಶ್ಗೂ ರಿಲೀಫ್
ಇನ್ನು ಈ ಮುಡಾ ಹಗರಣದ ಕೇಸ್‌ನಲ್ಲಿ ಸಚಿವ ಭೈರತಿ ಸುರೇಶ್ ಆರೋಪಿಯಾಗಿಲ್ಲವೆಂದು ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಭೈರತಿ ಸುರೇಶ್ ವಿರುದ್ಧದ ಇಡಿ ಸಮನ್ಸ್‌ಗೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಫೆಬ್ರವರಿ 10ರವರೆಗೆ ಇಡಿ ಸಮನ್ಸ್‌ಗೆ ತಡೆ ನೀಡಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಮುಡಾ ಕೇಸ್: ಆದೇಶ ಕಾಯ್ದಿರಿಸಿದ ಹೈಕೋರ್ಟ್, ಸಿದ್ದರಾಮಯ್ಯಗೆ ಟೆನ್ಷನ್ ಟೆನ್ಷನ್!
ವಾದ-ಪ್ರತಿವಾದ ಹೇಗಿತ್ತು?
ಸಚಿವ ಭೈರತಿ ಸುರೇಶ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದು, ಭೈರತಿ ಸುರೇಶ್ ಯಾವುದೇ ಅನುಸೂಚಿತ ಕೇಸ್‌ನ ಆರೋಪಿಯಲ್ಲ. ಆರೋಪಿಯಲ್ಲದಿದ್ದರೂ ಇಡಿಯಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದೇ ಮಾದರಿಯ ಮತ್ತೊಂದು ಕೇಸ್‌ನಲ್ಲಿ ಸಮನ್ಸ್ ರದ್ದುಪಡಿಸಲಾಗಿದೆ. ಡಾ.ನಟೇಶ್‌ಗೆ ಇಡಿ ನೀಡಿದ್ದ ಸಮನ್ಸ್‌ನ್ನು ಹೈಕೋರ್ಟ್ ರದ್ದುಪಡಿಸಿದೆ. ಹೀಗಾಗಿ ಮುಂದಿನ ವಿಚಾರಣೆವರೆಗೂ ಇಡಿಯಿಂದ ರಕ್ಷಣೆ ಒದಗಿಸುವಂತೆ ಮನವಿ ಮಾಡಿದರು.
ಇನ್ನು ಸಿಎಂ ಪತ್ನಿ ಪಾರ್ವತಿ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, 14 ಸೈಟ್ ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪವಿದೆ. ಅಪರಾಧದಿಂದ ಗಳಿಸಿದ ಹಣವಿಲ್ಲದಿದ್ದರೂ ತನಿಖೆ ನಡೆಸುತ್ತಿದೆ. ಹೀಗಾಗಿ ತನಿಖೆಗೆ ತಡೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದರು.
ನ್ಯಾ.ಎಂ.ನಾಗಪ್ರಸನ್ನ: ಸಿಎಂ ಪ್ರಕರಣದ ವಿಚಾರಣೆ ನಡೆಯುವಾಗ ಇದರಲ್ಲೇಕೆ ಮುಂದುವರಿಯುತ್ತೀರಾ? ಎಂದು ಇಡಿ ಪರ ವಕೀಲರಿಗೆ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನಿಸಿದರು.
ಇಡಿ ಪರ ವಕೀಲ ಎಎಸ್‌ಜಿ ಅರವಿಂದ್ ಕಾಮತ್: ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ 2ನೇ ಆರೋಪಿ.. ಅವರ ಮೇಲೆ ಅಕ್ರಮವಾಗಿ ಸೈಟ್ ಗಳನ್ನು ಪಡೆದ ಆರೋಪವಿದೆ. ಪಿಎಂಎಲ್ಎ ಕಾಯ್ದೆಯಡಿ ಅನುಸೂಚಿತ ಕೇಸ್ ಇದೆ ಎಂದು ಉತ್ತರಿಸಿದರು.
ನ್ಯಾ.ಎಂ.ನಾಗಪ್ರಸನ್ನ: ಅಪರಾಧದಿಂದ ಗಳಿಸಿದ ಸಂಪತ್ತು ಈಗಿಲ್ಲವಲ್ಲ. ಇಡಿ ತನಿಖೆಯಿಂದ ಹೈಕೋರ್ಟ್ ಕಾಯ್ದಿರಿಸಿರುವ ಕೇಸ್‌ಗೆ ಹಾನಿಯಾಗಬಾರದು. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲವೆಂದು ಆದೇಶ ನೀಡಿದ್ದೇನೆ. ಈಗ ಇಡಿ ತನಿಖೆಗೆ ಅವಕಾಶ ನೀಡುವುದು ಹೇಗೆ? ಈಗಲೇ ತನಿಖೆ ನಡೆಸಬೇಕಾದ ತುರ್ತು ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಇಡಿ ಪರ ಎಎಸ್‌ಜಿ ಅರವಿಂದ್ ಕಾಮತ್: ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಹಾಜರುಪಡಿಸಿ ಎಂದಷ್ಟೇ ಹೇಳಿದ್ದೇವೆ. ಇದರಿಂದ ಹೈಕೋರ್ಟ್ ಮುಂದಿರುವ ಕೇಸ್ ಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನ್ಯಾ.ಎಂ.ನಾಗಪ್ರಸನ್ನ: ಸಿಬಿಐ ತನಿಖೆಗೆ ಒಪ್ಪಿಸುವ ಬಗ್ಗೆ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಅಂತಿಮ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಇಡಿ ನಡೆಸುತ್ತಿರುವ ತನಿಖೆ ಲೋಕಾಯುಕ್ತ ಪೊಲೀಸ್ ಎಫ್‌ಐಆರ್ ಆಧರಿಸಿದೆ. ಹೀಗಾಗಿ ಇಡಿ ಸಮನ್ಸ್ ನಿಂದ ಹೈಕೋರ್ಟ್ ಕಾಯ್ದಿರಿಸುವ ಕೇಸ್ ಮೇಲೆ ಪರಿಣಾಮವಾಗಬಹುದು. ಡಾ. ನಟೇಶ್ ಪ್ರಕರಣದಲ್ಲಿ ಹೈಕೋರ್ಟ್ ಇಡಿ ಸಮನ್ಸ್ ರದ್ದುಪಡಿಸಿದೆ. ಇಡಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ ಅಷ್ಟೇ ಎಂದು ಇಡಿ ಪರ ವಕೀಲರು ಹೇಳಿದ್ದಾರೆ. ಆದ್ರೆ, ಇಡಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನ್ಯಾ.ಎಂ.ನಾಗಪ್ರಸನ್ನ: ಹಾಜರಾಗದಿದ್ದರೆ ನೀವು ನಾಳೆ ಅವರನ್ನು ಬಂಧಿಸಬಹುದು. ಹೀಗಾಗಿ ಈ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕಿದೆ ಎಂದು ಹೇಳಿ ಇಡಿ ಸಮನ್ಸ್‌ಗೆ ತಡೆ ನೀಡಿದ್ದಾರೆ.
Published On - 6:11 pm, Mon, 27 January 25